ಅಫಜಲಪುರ: ಸತತವಾಗಿ ರೈತ ವಿರೋಧಿ ಕೆಲಸ ಮಾಡುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಅನ್ನದಾತನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಕಿಸಾನ್ ಕಾಟನ್ ಇಂಡಸ್ಟ್ರೀಸ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೇನೆ. ರೈತರಿಗೆ ಒಳಿತಾಗುವ ಯೋಜನೆಗಳನ್ನು ಜಾರಿಗೆ ತಂದಿದೇನೆ. ಅಲ್ಲದೆ ಕೃಷಿ ಬೆಲೆ ಆಯೋಗ ರಚಿಸಿ ರೈತರ ಏಳ್ಗೆಗೆ ಶ್ರಮಿಸಿದ್ದೇನೆ. ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಯಾವುದೇ ಪ್ರಯೋಜವಾಗಿಲ್ಲ. ಸದ್ಯ ದೇಶ ನೆಮ್ಮದಿಯಾಗಿರಲು ಸೈನಿಕರು ಮತ್ತು ರೈತರೇ ಕಾರಣ ಎಂದರು.
ಬರಗಾಲದಲ್ಲಿ ರೈತರ ಸಾಲ ಮನ್ನಾ ಮಾಡಿದ್ದೆ. 1800 ಕೋಟಿ ರೂ.ಗಳಷ್ಟು ಕಬ್ಬಿಗೆ ಸಬ್ಸಿಡಿ ನೀಡುವ ಮೂಲಕ ರೈತರ ಕಲ್ಯಾಣ ಮಾಡಿದ ಕೀರ್ತಿ ನನಗೆ ಸಲ್ಲುತ್ತದೆ. ಆದರೆ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿಗಳಿಲ್ಲ. ಹೀಗಾಗಿ ಸದಾ ಸುಳ್ಳನ್ನೇ ಹೇಳುತ್ತಾ ಬರುತ್ತಿದ್ದಾರೆ. ತೊಗರಿಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡಿದ್ದು ಸಿದ್ದರಾಮಯ್ಯನೇ ಹೊರತು ಮತ್ಯಾವ ಮೋದಿ, ಯಡಿಯೂರಪ್ಪ ಅಲ್ಲ. ಹೀಗಾಗಿ ಮುಂದಿನ ಬಾರಿ ಈ ಭ್ರಷ್ಟ ಸರ್ಕಾರನ್ನು ತಿರಸ್ಕರಿಸಿ ಎಂದು ಮನವಿ ಮಾಡಿದರು.
ಕುಟುಂಬಗಳು ಹೆಚ್ಚಾದಂತೆ ಸಮಸ್ಯೆಗಳು ಹೆಚ್ಚಾಗುತ್ತವೆ. ಈಗ ಹೆಚ್ಚಾಗಿ ಜನ ಕೃಷಿ ಮಾಡುವುದಿಲ್ಲ. ಇದೇ ದೊಡ್ಡ ಸಮಸ್ಯೆಯಾಗಿದೆ. ಅನೇಕರು ಕೆಲಸ ಮಾಡದೇ ನಾವು ಮಣ್ಣಿನ ಮಕ್ಕಳೆಂದು ಹೇಳಿಕೊಳ್ಳುತ್ತಾರೆ. ಒಂದೇ ದಿನ ಜಮೀನಿಗೆ ಹೋಗಿ ಉತ್ತು, ಬಿತ್ತವರಲ್ಲ. ಇವರೆಲ್ಲ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ. ಆದರೆ ನಾವು ಮಣ್ಣಿನ ಮಕ್ಕಳಲ್ಲ ರೈತರ ಮಕ್ಕಳು ಎಂದರು.
ಶಾಸಕ ಎಂ.ವೈ. ಪಾಟೀಲ, ಮುಖಂಡ ಮತೀನ್ ಪಟೇಲ್, ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿದರು. ಶಾಸಕರಾದ ಡಾ| ಅಜಯಸಿಂಗ್, ಖನೀಜ ಫಾತೀಮಾ, ಮಾಜಿ ಶಾಸಕರಾದ ಸಿದ್ದರಾಮ ಮೇತ್ರೆ, ಬಿ.ಆರ್. ಪಾಟೀಲ, ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ರಾಜೇಂದ್ರ ಪಾಟೀಲ ರೇವೂರ (ಬಿ), ಸಿದ್ದಯ್ಯ ಸ್ವಾಮಿ ಹಿರೇಮಠ, ಮಂಜೂರ ಅಹ್ಮದ್ ಪಟೇಲ್, ಪಪ್ಪು ಪಟೇಲ್, ಅರುಣಕುಮಾರ ಪಾಟೀಲ, ಮಹಾಂತೇಶ ಪಾಟೀಲ, ದಾನಯ್ಯ ಹಿರೇಮಠ, ನಾನಾಗೌಡ ಪಾಟೀಲ, ಶಶಿಧರ ಡಾಂಗೆ, ಸಂತೋಷ ಕಿಣಗಿ ಹಾಗೂ ಮತ್ತಿತರರು ಇದ್ದರು.
ಕಿಸಾನ್ ಕಾಟನ್ ಇಂಡಸ್ಟ್ರೀಸ್ ಎಂದು ಹೆಸರಿಟ್ಟಿದ್ದಕ್ಕೆ ಸಿದ್ದರಾಮಯ್ಯ ಆಕ್ಷೇಪಿಸಿ ಕಿಸಾನ್ ಹಿಂದಿ ಪದ, ಕಾಟನ್ ಇಂಡಸ್ಟ್ರೀಸ್ ಆಂಗ್ಲ ಪದಗಳಾಗಿವೆ. ರೈತರ ಹತ್ತಿ ಗಿರಣಿ ಎಂದು ಹೆಸರಿಡಬೆಕಾಗಿತ್ತು ಎಂದಾಗ ಸಭಿಕರೆಲ್ಲ ಸಿದ್ದರಾಮಯ್ಯ ಅವರ ಭಾಷಾ ಪ್ರೇಮದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಶಿವಶರಣಪ್ಪ ಗುಂದಗಿ ಸ್ವಾಗತಿಸಿ, ವಂದಿಸಿದರು.