Advertisement

ಶಿಕ್ಷಣ ಇಲಾಖೆ: ಮಧ್ಯಂತರ ವರ್ಗಾವಣೆ ಪ್ರಕ್ರಿಯೆಗೆ ಸಿದ್ದರಾಮಯ್ಯ ಆಕ್ಷೇಪ

09:43 PM Dec 17, 2022 | Team Udayavani |

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸಹಾಯಕ ಪ್ರಾಧ್ಯಾಪಕರುಗಳ ವರ್ಗಾವಣೆಯನ್ನು ಮಧ್ಯಂತರ ಅವಧಿಯ ಡಿಸೆಂಬರ್‌ ಮಾಹೆಯಲ್ಲಿ ನಡೆಸಲು ಆದೇಶ ಹೊರಡಿಸಿರುವ ಬಗ್ಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಸ‌ರ್ಕಾರವು ವರ್ಗಾವಣೆಗಳಿಗೆ ತೋರಿಸುತ್ತಿರುವ ಆಸಕ್ತಿ, ಅಭಿವೃದ್ಧಿ ವಿಷಯಗಳಿಗೆ ಹಾಗೂ ನೇಮಕಾತಿಗಳಿಗೆ ತೋರಿಸುತ್ತಿಲ್ಲ.ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರ ವರ್ಗಾವಣೆ ಆಗಿ 6 ತಿಂಗಳು ಮಾತ್ರ ಆಗಿದೆ. ಮತ್ತೆ ಈಗ ಎರಡನೆ ಬಾರಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ವರ್ಗಾವಣೆ ಎನ್ನುವುದು ಆಡಳಿತಾತ್ಮಕ ಮತ್ತು ಸಾರ್ವಜನಿಕ ಅನುಕೂಲಕ್ಕೆ ಮಾಡಬೇಕಾದ ಚಟುವಟಿಕೆಯೆ ಹೊರತು, ಇಲಾಖೆಗಳ ಸಚಿವರಿಗೆ, ಸರ್ಕಾರಕ್ಕೆ ಅದೊಂದು ಚಟವಾಗಬಾರದು ಎಂದು ಟೀಕಿಸಿದ್ದಾರೆ.

ಹಿಂದಿನ ವರ್ಗಾವಣೆಯಲ್ಲಿ ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ನಗರ ಪ್ರದೇಶಗಳಲ್ಲಿ ನಿರಂತರವಾಗಿ 20 ವರ್ಷ ಸೇವೆ ಸಲ್ಲಿಸಿದವರು ಮತ್ತೆ ಅದೇ ನಗರದ ಬೇರೆ ಕಾಲೇಜಿಗೆ ವರ್ಗಾವಣೆಗೊಂಡಿರುವುದು ವಿಪರ್ಯಾಸ ಎಂದು ಹೇಳಿದ್ದಾರೆ.

ವರ್ಗಾವಣೆ ಮಾಡಲು ನೀಡಿರುವ ಪ್ರಕಟಣೆ ಕೂಡಲೇ ಹಿಂಪಡೆದು, ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿಂದು ಕಾಂಗ್ರೆಸ್‌ ಚುನಾವಣೆ ಸಮಿತಿ ಸಭೆ
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಚಿಸಲಾಗಿರುವ ರಾಜ್ಯ ಕಾಂಗ್ರೆಸ್‌ ಚುನಾವಣೆ ಸಮಿತಿ ಸಭೆ ಭಾನುವಾರ ಬೆಳಗಾವಿಯಲ್ಲಿ ನಡೆಯಲಿದೆ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಸಮ್ಮುಖದಲ್ಲಿ ಸಂಜೆ ಸಭೆ ನಿಗದಿ ಮಾಡಲಾಗಿದೆ. ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಹಿರಿಯ ನಾಯಕರಾದ ಕೆ.ಎಚ್‌.ಮುನಿಯಪ್ಪ, ರೆಹಮಾನ್‌ ಖಾನ್‌, ವೀರಪ್ಪ ಮೊಯ್ಲಿ ಸೇರಿ 36 ಸದಸ್ಯರ ಚುನಾವಣಾ ಸಮಿತಿಯ ಮೊದಲ ಸಭೆ ಇದಾಗಿದೆ.

Advertisement

ಮುಂದಿನ ವಿಧಾನಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳು, ಟಿಕೆಟ್‌ಹಂಚಿಕೆ ಮತ್ತಿತರ ವಿಚಾರಗಳು ಸಭೆಯಲ್ಲಿ ಚರ್ಚೆಯಾಗಲಿವೆ ಎಂದು ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next