ಬಳ್ಳಾರಿ: ಸಿಎಂ ಸಿದ್ದರಾಮಯ್ಯ ಹಿಂದೆ ಮಾಡಿದ್ದನ್ನ ಈಗ ಅನುಭವಿಸಬೇಕಾಗಿದೆ, ಮುಡಾ ಹಗರಣ ಕೇವಲ ಹದಿನಾಲ್ಕು ಸೈಟು, 62 ಕೋಟಿ ವಿಚಾರ ಅಲ್ಲ, ಅವರು ಬರೋಬ್ಬರಿ ಐದು ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಗುರುವಾರ(ಅ3) ಬಿಜೆಪಿ ಶಾಸಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.
”13 ವರ್ಷದ ಬಳಿಕ ಬಳ್ಳಾರಿಗೆ ಸಂಭ್ರಮದ ಭೇಟಿ ನೀಡಿದ ಜನಾರ್ದನ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಕುಟುಂಬಸ್ಥರು, ಸಂಬಂಧಿಗಳ ಮೂಲಕ ಐದು ಸಾವಿರ ಕೋಟಿ ಆಸ್ತಿ ಬೇನಾಮಿಯಾಗಿ ಮಾಡಿದ್ದಾರೆ.ಇದೆಲ್ಲ ತನಿಖೆ ಆಗಬೇಕು, ರಾಜಿನಾಮೆ ಕೇಳಿ ಕೇಳಿ ಸಾಕಾಗಿದೆ” ಎಂದರು.
ಇದನ್ನೂ ಓದಿ: Ballari;13 ವರ್ಷದ ಬಳಿಕ ಜನಾರ್ದನ ರೆಡ್ಡಿ ಗ್ರ್ಯಾಂಡ್ ಎಂಟ್ರಿ: ಅಭಿಮಾನಿಗಳ ಸಂಭ್ರಮಾಚರಣೆ
”ಹಿಂದೆ ಎಲ್.ಕೆ.ಅಡ್ವಾಣಿ, ಯಡಿಯೂರಪ್ಪ ಹಾಗೂ ನಮ್ಮೆಲರಿಗೂ ಒಂದೇ ಮಾತು ಹೇಳಿದಾಗ ನಾವೆಲ್ಲ ರಾಜಿನಾಮೆ ಕೊಟ್ಟು ಸರ್ಕಾರ ವನ್ನೇ ವಿಸರ್ಜನೆ ಮಾಡಿದ್ದೆವು. ಈಗ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ” ಎಂದರು.
ಬಳ್ಳಾರಿಯಲ್ಲಿ ಹಲವು ಸ್ಟೀಲ್ ಕಂಪನಿಗಳು ಬರಬೇಕಿತ್ತು. ಆದರೆ ಸಿದ್ದರಾಮಯ್ಯ ಅದಕ್ಕೆ ಕಲ್ಲು ಹಾಕಿ, ಜನರ ಉದ್ಯೋಗ ಕಸಿದರು.ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟಿ ಕೋಟಿ ಹಣ ಲೂಟಿ ಆಗಿದೆ. ಸಿದ್ದರಾಮಯ್ಯ ಸದನದಲ್ಲಿ 180 ಕೊಟಿ ಅಲ್ಲ 82 ಕೋಟಿ ಎಂದು ಒಪ್ಪಿಕೊಂಡಿದ್ದಾರೆ.ಇಲ್ಲಿ ಕೇವಲ ನಾಗೇಂದ್ರ ಮಾತ್ರ ಅಲ್ಲ, ಇಡೀ ಸರಕಾರ ಭಾಗಿಯಾಗಿದೆ” ಎಂದು ರೆಡ್ಡಿ ಕಿಡಿ ಕಾರಿದರು.