Advertisement

ಡಿಕೆಶಿ ಬಂಧನಕ್ಕೆ ಸಿದ್ದರಾಮಯ್ಯ ಕಾರಣ

11:00 PM Sep 08, 2019 | Team Udayavani |

ವಿಜಯಪುರ/ಬಾಗಲಕೋಟೆ: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಂಧನದ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡವಿದೆ. ನಮಗೆ ಸಿದ್ದರಾಮಯ್ಯ ಮೇಲೆ ಸಂಶಯ ಇದೆ. ಡಿಕೆಶಿ ಮೇಲೆ ಪ್ರಕರಣ ದಾಖಲಾಗಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್‌ ಗಂಭೀರ ಆರೋಪ ಮಾಡಿದ್ದಾರೆ.

Advertisement

ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಡಿಕೆಶಿ ರಾಜಕೀಯವಾಗಿ ಬೆಳೆಯುತ್ತಾರೆಂಬ ಕಾರಣಕ್ಕೆ ಸಿದ್ದರಾಮಯ್ಯನವರೇ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಶಿವಕುಮಾರ್‌ ಅವರನ್ನು ರಾಜ್ಯ ಸರ್ಕಾರ ಬಂಧಿಸಿಲ್ಲ. ಯಾವುದೇ ಲೋಕಾಯುಕ್ತ ಅಧಿಕಾರಿಗಳು ಒಳಗೆ ಹಾಕಿಲ್ಲ. 2017ರಲ್ಲಿ ಐಟಿ ದಾಳಿಯಾದಾಗ ಕಾಂಗ್ರೆಸ್‌ ಸರ್ಕಾರವೇ ಇತ್ತು. ಆಗ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರು.

ಮನಸ್ಸು ಮಾಡಿದ್ದರೆ ಆಗ ಸಿದ್ದರಾಮಯ್ಯನವರು ದಾಳಿಯನ್ನು ನಿಲ್ಲಿಸಬೇಕಿತ್ತು ಎಂದರು. ಶಿವಕುಮಾರ್‌ ಅವರ ಮನೆ, ಕಚೇರಿಗಳ ಮೇಲೆ 2017ರಲ್ಲಿಯೇ ದಾಳಿಯಾಗಿತ್ತು. ಇದರಲ್ಲಿ ಯಾವುದೇ ರಾಜಕೀಯ ದ್ವೇಷವಿಲ್ಲ. ರಾಜಕೀಯ ದ್ವೇಷ ಮಾಡುವುದಿದ್ದರೆ ವಿಧಾನಸಭೆ ಚುನಾವಣೆಗೂ ಮುಂಚೆಯೇ ಮಾಡಬಹುದಿತ್ತು. ಚುನಾವಣೆಗೂ ಮುಂಚೆಯೇ ಡಿಕೆಶಿಯವರನ್ನು ಜೈಲಿಗೆ ಹಾಕಬಹುದಿತ್ತು ಎಂದರು.

ಐಟಿ, ಇ.ಡಿ.ಯವರು ದಾಖಲೆ ನೋಡಿಕೊಂಡು ಪ್ರಕರಣ ದಾಖಲಿಸುತ್ತಾರೆ. ಅವು ಸ್ವಾಯತ್ತ ಸಂಸ್ಥೆಗಳು. ಬಿಜೆಪಿ ಹುಟ್ಟು ಹಾಕಿದ ಸಂಸ್ಥೆಗಳಲ್ಲ. ಡಿಕೆಶಿ ಭ್ರಷ್ಟಾಚಾರ ಆರೋಪದಲ್ಲಿ ಒಳಗೆ ಹೋಗಿದ್ದಾರೆ. ಕಾಂಗ್ರೆಸ್‌ನವರಿಗೆ ಈಗ ಮುಖ ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ, ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

17 ಸ್ಥಾನದಲ್ಲೂ ನಮ್ಮದೇ ಗೆಲುವು: ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಮರು ಚುನಾವಣೆ ಎದುರಿಸಲು ನಾವು ಸಜ್ಜಾಗಿದ್ದೇವೆ. ರಾಜಕೀಯ ಪಕ್ಷಗಳಿಗೆ ಚುನಾವಣೆ ಎಂಬುದು ಒಂದು ಯುದ್ಧ ಇದ್ದಂತೆ. ರಣರಂಗದಲ್ಲಿ ತಂತ್ರಗಾರಿಕೆ ಇದ್ದದ್ದೇ. 17 ಕ್ಷೇತ್ರಗಳಲ್ಲೂ ತಂತ್ರಗಾರಿಕೆ ಮೂಲಕ ನಾವು ಗೆಲ್ಲುತ್ತೇವೆ ಎಂದರು.

Advertisement

ಬಿಎಸ್‌ವೈ ಜತೆ ಭಿನ್ನಾಭಿಪ್ರಾಯ ಇಲ್ಲ: “ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಸಿಎಂ ಹಾಗೂ ನನ್ನ ಮಧ್ಯೆ ಯಾವುದೇ ಭಿನ್ನಮತ ವ್ಯಕ್ತವಾಗಿಲ್ಲ. ಯಡಿಯೂರಪ್ಪ ನನಗೆ ಮಾರ್ಗದರ್ಶಕರು. ಪಕ್ಷ ಸಂಘಟಿಸುವ ಕುರಿತು ಉತ್ತಮ ಚರ್ಚೆಯಾಗಿದೆ. ನಮ್ಮ ಕಡೆ ಕಾಫಿ ಪ್ಲ್ರಾಂಟರ್‌ ಥರ ನ್ಯೂಸ್‌ ಪ್ಲ್ಯಾಂಟರ್‌ ಈ ಸುದ್ದಿಯನ್ನು ಸೃಷ್ಟಿಸಿದ್ದಾರೆ’ ಎಂದರು.

ಈಶ್ವರಪ್ಪ ಹೇಳಿಕೆಗೆ ಸಮರ್ಥನೆ: ಪ್ರವಾಹ ಸಂತ್ರಸ್ತರಿಗೆ ಹತ್ತು ಸಾವಿರ ರೂ.ಪರಿಹಾರ ಕೊಟ್ಟಿದ್ದೆ ಜಾಸ್ತಿ ಎಂದಿರುವ ಈಶ್ವರಪ್ಪನವರ ಭಾವನೆಯಲ್ಲಿ ವ್ಯತ್ಯಾಸವಿರಬಹುದು. ಹತ್ತು ಸಾವಿರ ಕೊಟ್ಟಿದ್ದೇವೆ ಎಂಬ ಕಲ್ಪನೆಯಲ್ಲಿ ಅವರು ಹಾಗೆ ಹೇಳಿರಬೇಕು. ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಪ್ರವಾಹ ಬಂದ ಬಳಿಕ ಸಿಎಂ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದಾರೆ. ಯಾವ ಸಿಎಂ ಕೂಡ ಈ ರೀತಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಲಿಲ್ಲ.

ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಹತ್ತು ಸಾವಿರ ರೂ. ನೀಡಲಾಗಿದೆ. ಹಿಂದೆ, ಪ್ರವಾಹ ಬಂದಾಗ ಯಾವ ಮುಖ್ಯಮಂತ್ರಿಯೂ ಈ ರೀತಿ ನೆರವು ನೀಡಿರಲಿಲ್ಲ. ಹಿಂದಿನ ಸರ್ಕಾರ ಮನೆ ಕಟ್ಟಿಸಿಕೊಳ್ಳಲು ಕೇವಲ 92 ಸಾವಿರ ರೂ.ಕೊಟ್ಟಿದೆ. ನಾವು ಮನೆ ಬಿದ್ದವರಿಗೆ ಐದು ಲಕ್ಷ ರೂ. ಘೋಷಣೆ ಮಾಡಿದ್ದೇವೆ. ಈಗಾಗಲೇ ಅಮಿತ್‌ ಶಾ ಬಂದಿದ್ದಾರೆ. ಸರ್ವೇ ಪ್ರಕಾರ ಹಣ ಬಿಡುಗಡೆ ಮಾಡಲಾಗುತ್ತದೆ. ವರದಿ ನಂತರ ಎಷ್ಟು ಅನುದಾನ ಬೇಕಾಗುತ್ತೋ, ಅಷ್ಟನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತದೆ ಎಂದರು.

ಶಾಸಕ ಯತ್ನಾಳ್‌ ಟೀಕೆಯನ್ನು ಮಾರ್ಗದರ್ಶನ ಎಂದು ಪರಿಗಣಿಸುತ್ತೇನೆ. ಅವರು ಹೇಳಿದಂತೆ ನಾನು ಮಂಗಳೂರು, ಉಡುಪಿಯಲ್ಲಿ ಸಕ್ರಿಯನಾಗಿದ್ದೆ. ಕೇರಳ ಬಿಜೆಪಿ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಪಕ್ಷ ನನಗೆ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದು, ಇನ್ನು ಮುಂದೆ ರಾಜ್ಯಾದ್ಯಂತ ಸಂಚರಿಸಿ, ಪಕ್ಷ ಸಂಘಟಿಸುತ್ತೇನೆ.
-ನಳೀನ್‌ಕುಮಾರ ಕಟೀಲ್‌, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next