Advertisement

ಶಾಸಕರು ಆಯ್ಕೆ ಮಾಡಿದರೆ ಸಿದ್ದರಾಮಯ್ಯ ಅವರೇ ಸಿಎಂ

06:15 AM Oct 29, 2017 | |

ಬೆಂಗಳೂರು: “ಮುಖ್ಯಮಂತ್ರಿ ಸಿದ್ದ ರಾಮಯ್ಯ ನೇತೃತ್ವದಲ್ಲಿಯೇ 2018ರ ವಿಧಾನಸಭೆ ಚುನಾವಣೆ ಎದುರಿಸು ತ್ತೇವೆ. ಅವರ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸುವಂತೆ ಹೈಕಮಾಂಡ್‌ ಸೂಚಿಸಿದ್ದು, ನಾವು ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

Advertisement

ಕೆಪಿಸಿಸಿ ಅಧ್ಯಕ್ಷರಾಗಿ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “2018ರ ಚುನಾವಣೆಯಲ್ಲಿ ಪಕ್ಷ ಗೆದ್ದು ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನೇ ಆಯ್ಕೆ ಮಾಡಿದರೆ, ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಕಾಂಗ್ರೆಸ್‌ನಲ್ಲಿ ಗೆದ್ದ ನಂತರವಷ್ಟೇ ಶಾಸಕಾಂಗ ಪಕ್ಷದ ನಾಯಕನನ್ನು ಆರಿಸುವ ಪದಟಛಿತಿ ಇದೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ನಾಲ್ಕು ವರ್ಷ ಆರು ತಿಂಗಳಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಪ್ರಣಾಳಿಕೆಯಲ್ಲಿ
ನೀಡಿದ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದಾರೆ.

ಸರ್ಕಾರ ಮಾಡಿರುವ ಸಾಧನೆಗಳನ್ನು ಸ್ವಾಭಾವಿಕವಾಗಿ ಅವರು ತಮ್ಮ ಸಾಧನೆ ಎಂದು ಹೇಳಿಕೊಳ್ಳಲು ಜನರ ಬಳಿಗೆ 
ಹೋಗುತ್ತಿದ್ದಾರೆ. ನಾವೆಲ್ಲ ಅವರೊಂದಿಗೆ ಹೋಗುತ್ತೇವೆ. ಮುಂದಿನ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನಮ್ಮ ಉದ್ದೇಶ ಎಂದರು.

ಕಾಂಗ್ರೆಸ್‌ ಸರ್ಕಾರದ ಸಾಧನೆಗಳು ನೇರವಾಗಿ ಜನರಿಗೆ ತಲುಪಿರುವುದರಿಂದ ಜನತೆ ಮತ್ತೂಂದು ಬಾರಿ ಕಾಂಗ್ರೆಸ್‌ಗೆ ಅಧಿಕಾರ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ಸಮ್ಮಿಶ್ರ ಸರ್ಕಾರದ ಪ್ರಶ್ನೆಯೇ ಬರುವುದಿಲ್ಲ. ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವೇ ಬೀಳುವುದಿಲ್ಲ ಎಂದು ಹೇಳಿದರು.

Advertisement

ರಾಜ್ಯ ಬಿಜೆಪಿಯಲ್ಲಿಯೂ ಯಡಿಯೂರಪ್ಪ,ಸದಾನಂದಗೌಡ, ಜಗದೀಶ ಶೆಟ್ಟರ್‌ ಎಂಬ ಮೂರು ಬಾಗಿಲುಗಳಿದ್ದು, ಈಗಲೂ ಕೂಡ ಬಿಜೆಪಿಯಲ್ಲಿ ಹೊಂದಾಣಿಕೆಯಿಲ್ಲ. ನಾವು ಅವರ ಮನೆ ಒಡೆದು ಅಧಿಕಾರಕ್ಕೆ ಬರುವುದಿಲ್ಲ. ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ ಮತ್ತೆ ಅಧಿಕಾರ ಹಿಡಿಯಲಿದ್ದೇವೆ ಎಂದರು.

ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ: ರಾಜ್ಯ ಕಾಂಗ್ರೆಸ್‌ನಲ್ಲಿ ಈ ಬಾರಿ ಗೆಲ್ಲುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜೆಡಿಎಸ್‌ನ ಏಳು ಬಂಡಾಯ ಶಾಸಕರನ್ನು ನಡು ನೀರಿನಲ್ಲಿ ಕೈ ಬಿಡುವುದಿಲ್ಲ. ಅವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲ್ಲುವ ಸಾಮರ್ಥ್ಯ ನೋಡಿಕೊಂಡು ಟಿಕೆಟ್‌ ನೀಡಲಾಗುವುದು. ಈಗಾಗಲೇ ಒಂದು ಬಾರಿ ಸಮೀಕ್ಷೆ ನಡೆಸಲಾಗಿದ್ದು, ಹಾಲಿ ಶಾಸಕರು ಗೆಲ್ಲುವ ವಿಶ್ವಾಸವಿದೆ ಎಂಬ ವರದಿ ಬಂದಿದೆ. ಮತ್ತೂಂದು ಬಾರಿ ಸಮೀಕ್ಷೆ ನಡೆಸಿದಾಗ ಶಾಸಕರು ಸೋಲುವ ಮಾಹಿತಿ ಬಂದರೆ, ಅಂತಹ ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತಂತೆಯೂ ಚಿಂತನೆ ನಡೆಸಲಾಗುವುದು ಎಂದರು.

ಮಕ್ಕಳಿಗೆ ಟಿಕೆಟ್‌ ಚರ್ಚೆಯಾಗಿಲ್ಲ: ಅನೇಕ ನಾಯಕರ ಮಕ್ಕಳು ಚುನಾವಣೆಗೆ ಸ್ಪರ್ಧಿಸುವುದಾಗಿ ಈಗಾಗಲೇ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇನ್ನೂ ಯಾರೂ ಟಿಕೆಟ್‌ಗೆ ಅರ್ಜಿ ಸಲ್ಲಿಸಿಲ್ಲ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್‌ ಇನ್ನೂ ಮಾರ್ಗಸೂಚಿ ನೀಡಿಲ್ಲ. ಒಂದು ವೇಳೆ, ನಾಯಕರ ಮಕ್ಕಳಿಗೆ ಟಿಕೆಟ್‌ ನೀಡಬಾರದೆಂದು ಹೇಳಿದರೆ ಅದನ್ನು ಪಾಲಿಸಲಾಗುವುದು. ಹೈಕಮಾಂಡ್‌ ಒಂದು ಮನೆಗೆ ಒಂದೇ ಟಿಕೆಟ್‌ ಎಂದರೆ ಕಷ್ಟವಾಗಬಹುದು. ಆ ಸಂದರ್ಭದಲ್ಲಿ
ಹೈಕಮಾಂಡ್‌ ಜತೆ ಚರ್ಚಿಸಿ ಚುನಾವಣಾ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ನನ್ನ ಸೋಲಿಗೆ ನಾನೇ ಕಾರಣ: 2013ರ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ನನ್ನ ಸೋಲಿಗೆ ನಾನೇ ಕಾರಣ. ನನ್ನ ವೈಯಕ್ತಿಕ ತಪ್ಪಿನಿಂದಾಗಿ ಚುನಾವಣೆಯಲ್ಲಿ ಸೋಲಬೇಕಾಯಿತು. ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಕೊರಟಗೆರೆಯಲ್ಲಿ ಪ್ರಯತ್ನ ನಡೆಸಿದ್ದೇನೆ. ನನ್ನ ಗೆಲುವನ್ನು ಕೊರಟಗೆರೆ ಜನ ನಿರ್ಧರಿಸುತ್ತಾರೆ ಎಂದು ಹೇಳಿದರು.

7 ವರ್ಷ ಪೂರೈಸಿದಕ್ಕೆ ಅಭಿನಂದನೆ: ಕೆಪಿಸಿಸಿ ಅಧ್ಯಕ್ಷರಾಗಿ ಏಳು ವರ್ಷ ಪಕ್ಷವನ್ನು ಮುನ್ನಡೆಸಲು ಸಹಕಾರ ನೀಡಿದ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಿಗೂ ಪರಮೇಶ್ವರ್‌ ಅಭಿನಂದನೆ ಸಲ್ಲಿಸಿದರು. 9 ವರ್ಷಗಳಿಂದ ಅಧಿಕಾರ ವಂಚಿತ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದೆ. ರಾಜ್ಯಾಧ್ಯಕ್ಷನಾಗಿ ಆಗ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರೊಂದಿಗೆ ಸೇರಿಕೊಂಡು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಗೆಲುವು ಪಡೆದೆವು. ಹೈಕಮಾಂಡ್‌ ನನ್ನ ಮೇಲೆ ಇಟ್ಟಿದ್ದ ಭರವಸೆ ಉಳಿಸಿಕೊಂಡಿದ್ದೇನೆ.ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದೇನೆ ಎಂದರು.

ದಾಖಲೆಯ ಸಂಭ್ರಮವಿಲ್ಲ
ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷರಾಗಿ ಏಳು ವರ್ಷ ಪೂರೈಸಿದರೂ, ಆ ಸಂಭ್ರಮ ಪರಮೇಶ್ವರ್‌ ಅವರಿಗಾಗಲೀ ಪಕ್ಷದ ಪದಾಧಿಕಾರಿಗಳಲ್ಲಾಗಲಿ ಕಾಣಲಿಲ್ಲ. ಕಳೆದ ಬಾರಿ ಅರಮನೆ ಮೈದಾನದಲ್ಲಿ ಅದೂಟಛಿರಿ ಸಮಾವೇಶ ಏರ್ಪಡಿಸಲಾಗಿತ್ತು. ಆದರೆ, ಈ ಬಾರಿ ಅಧ್ಯಕ್ಷರಾಗಿ ದಾಖಲೆ ಮಾಡಿದ್ದರೂ, ಅಧ್ಯಕ್ಷರೊಂದಿಗೆ ಒಬ್ಬ ಶಾಸಕ, ಸಚಿವರೂ ಕಾಣಲಿಲ್ಲ.

ಅದೃಷ್ಟ ಕೂಡಿ ಬಂದರೆ
ನಾನೂ ಸಿಎಂ ಆಗಬಹುದು

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದಾರೆ. ಮುಂದಿನ ಅವಧಿಗೂ ಅವರೇ ಸಿಎಂ ಆದರೆ ತಪ್ಪೇನಲ್ಲ. ಯಾರ ಹಣೆ ಬರಹದಲ್ಲಿ ಏನು ಬರೆದಿದೆಯೋ ಅದಾಗುತ್ತದೆ. ಎಲ್ಲದಕ್ಕೂ ಅದೃಷ್ಟಬೇಕು. ಈ ಭಾಗದ ಪ್ರಭಾವಿ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅಪಾರ ಅನುಭವ ಹೊಂದಿದ್ದಾರೆ. ಅವರು ಯಾವತ್ತೋ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ, ಆಗಲಿಲ್ಲ. ಎಲ್ಲದಕ್ಕೂ ಕಾಲ ಮತ್ತು ಅದೃಷ್ಟ ಕೂಡಿ ಬರಬೇಕು. ಅಂತಹ ಕಾಲ ಬಂದರೆ ನಾನೂ ಮುಖ್ಯಮಂತ್ರಿಯಾಗಬಹುದು.
– ಆರ್‌.ವಿ.ದೇಶಪಾಂಡೆ, ಕೈಗಾರಿಕೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next