ಹಾವೇರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಧ್ಯಂತರ ಚುನಾವಣೆಯ ಹಗಲು ಕನಸು ಕಾಣುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ ವ್ಯಂಗ್ಯವಾಡಿದರು.
ಅವರು ಶನಿವಾರ ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದರು. ಅಧಿಕಾರವಿದ್ದಾಗ ಕಾಂಗ್ರೆಸ್- ಜೆಡಿಎಸ್ ಎಂದು ಜಗಳವಾಡಿದರು. ಇದೀಗ ಅಧಿಕಾರವಿಲ್ಲದೇ ಪರಿತಪ್ಪಿಸುತ್ತಿದ್ದಾರೆ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಇದೀಗ ಬಿಜೆಪಿ ಸರ್ಕಾರವಿದೆ. ಆದ್ದರಿಂದ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಇದನ್ನು ಅರಗಿಸಿಕೊಳ್ಳಲಾಗದ ಕಾಂಗ್ರೆಸ್‌ನವರಿಗೆ ಭ್ರಮನಿರಸನವಾಗಿದೆ. ಆದ್ದರಿಂದ ಈ ರೀತಿ ಪ್ರಲಾಪ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಅವರ ಕನ್ನಡಧ್ವಜ ವಿರೋಧಿ ಆರೋಪಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ, ಸಿದ್ದರಾಮಯ್ಯಗಿಂತ ಕನ್ನಡಾಭಿಮಾನ ನಮಗೆ ಜಾಸ್ತಿಯಿದೆ.
ಅವರಿಂದ ಪಾಠ ಕಲೆಯುವ ಅಗತ್ಯ ನಮಗಿಲ್ಲ. ಕನ್ನಡಾಭಿಮಾನ ಸಿದ್ದರಾಮಯ್ಯ ಅವರಿಗಷ್ಟೇ ಅಲ್ಲ. ಆರೂವರೆ ಕೋಟಿ ಜನರಿಗೂ ಇದೆ. ಕನ್ನಡ ನಾಡು, ನುಡಿ, ಜಲದ ರಕ್ಷಣೆ ವಿಚಾರದಲ್ಲಿ ಬಿಜೆಪಿ ಬದ್ಧವಾಗಿದೆ ಎಂದರು.
ನಮಗೂ ಡಿ.ಕೆ. ಶಿವಕುಮಾರ ಪ್ರಕರಣಕ್ಕೂ ಸಂಬಂಧವಿಲ್ಲ. ಡಿಕೆಶಿಯಿಂದ ತಪ್ಪು ಆಗಿಲ್ಲ ಎನ್ನುವುದಾದರೆ ಇಡಿಯವರು ಬಿಡುತ್ತಾರೆ. ಇಲ್ಲವಾದರೆ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.