Advertisement

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಅವಸರದಲ್ಲಿದ್ದಾರೆ: ಸಚಿವ ಈಶ್ವರಪ್ಪ

01:10 PM Apr 03, 2021 | Team Udayavani |

ಶಿವಮೊಗ್ಗ: ಸಿದ್ದರಾಮಯ್ಯನವರು ಅರ್ಜೆಂಟಾಗಿ ಮುಖ್ಯಮಂತ್ರಿಯಾಗಬೇಕು ಎಂದುಕೊಂಡಿದ್ದಾರೆ. ಜನ ಸಿದ್ದರಾಮಯ್ಯ ಅವರನ್ನು ತಿರಸ್ಕರಿಸಿದ್ದಾರೆ. ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಮುಖ್ಯಮಂತ್ರಿ‌ ಸ್ಥಾನ ಕಳೆದುಕೊಂಡರು. ಇದೀಗ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಿದರೆ ನಾನು ಸಿಎಂ ಆಗುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕೂ ಯಡಿಯೂರಪ್ಪ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಸಿದ್ದರಾಮಯ್ಯ ಸಿಎಂ ಆಗುವ ಭ್ರಮೆ ಇಟ್ಟುಕೊಳ್ಳುವುದು ಬೇಡ ಎಂದು ಟೀಕಿಸಿದರು.

ನಾನು ಬರೆದ ಪತ್ರ ಉಪಚುನಾವಣೆಯಲ್ಲಿ ವಿಪಕ್ಷಗಳಿಗೆ ಅಸ್ತ್ರವಾಗುವುದಿಲ್ಲ. ಈ ವಿಷಯವಿಲ್ಲದಿದ್ದರೆ ಬೇರೆ ಅಸ್ತ್ರಗಳನ್ನು ವಿಪಕ್ಷಗಳು ಹುಡುಕುತ್ತಿದ್ದವು. ಉಪಚುನಾವಣೆ ನಡೆಯುವ ಕ್ಷೇತ್ರಗಳ ಮನೆಗಳಿಗೂ ತೆರಳಿ ಮತದಾರರ ಮನವೊಲಿಸಲಾಗಿದೆ. ಕೇಂದ್ರ‌, ರಾಜ್ಯ ಸರ್ಕಾರಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಈ ಬಗ್ಗೆ ವಿಪಕ್ಷಗಳಿಗೆ ಅರೋಪ ಮಾಡಲು ಆಗುತ್ತಿಲ್ಲ. ಹೀಗಾಗಿ ನಾನು ಬರೆದ ಪತ್ರವನ್ನು ಇಟ್ಟುಕೊಂಡು ಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿವೆ ಎಂದರು.

ಇದನ್ನೂ ಓದಿ:ಈಶ್ವರಪ್ಪರನ್ನು ಉಚ್ಚಾಟಿಸಿ ಇಲ್ಲವೇ ನೀವು ರಾಜೀನಾಮೆ ನೀಡಿ: ಸಿಎಂ ಗೆ ಡಿಕೆ ಶಿವಕುಮಾರ್ ಸವಾಲು

ನಮ್ಮಲ್ಲಿರುವ ಆಡಳಿತಾತ್ಮಕ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳುತ್ತಿದ್ದೇವೆ. ವಿಪಕ್ಷಗಳಿಗೆ ಈ ವಿಷಯದಲ್ಲಿ ಹುಳುಕು ಸಿಗುವುದಿಲ್ಲ, ಬೆಳಕೂ ಸಿಗುವುದಿಲ್ಲ. ನಮ್ಮ ಸಮಸ್ಯೆಗಳನ್ನು ಕೆಲವೇ ದಿನದಲ್ಲಿ ಪರಿಹರಿಸುವ ಭರವಸೆಯನ್ನು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ನೀಡಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

Advertisement

ಯತ್ನಾಳ್ ಸಿಎಂ ಬದಲಾವಣೆ ಬಗ್ಗೆ ನೀಡುವ ಡೇಟ್ ಗಳನ್ನು ನೀವು ತೆಗೆದುಕೊಳ್ಳುತ್ತಲೇ ಇರಿ. ಯತ್ನಾಳ್ ಒಬ್ಬ ಒಳ್ಳೆಯ ಹೋರಾಟಗಾರ, ಪ್ರಖರ ಹಿಂದುತ್ವವಾದಿ. ಆದರೆ ಈ ವಿಷಯದಲ್ಲಿ ಏಕೆ ಹೀಗೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಯತ್ನಾಳ್ ಹೇಳುವ ಮಾತಿನಲ್ಲಿ ಎಷ್ಟು ನಿಜವಿದೆಯೋ ಸುಳ್ಳಿದೆಯೋ ಗೊತ್ತಿಲ್ಲ. ಪಕ್ಷದ ವರಿಷ್ಠರು ಇದನ್ನು ಗಮನಿಸುತ್ತಾರೆ ಎಂದು ಈಶ್ವರಪ್ಪ ಹೇಳಿದರು.

ಇದನ್ನೂ ಓದಿ: ಶಿವಮೊಗ್ಗದವರ ಜಗಳ ಒಂದು ಹೆಜ್ಜೆ ಮುಂದೆ ಹೋಗಿದೆ: ಸಚಿವ ಸೋಮಣ್ಣ

ತನ್ನ ವಿರುದ್ಧ ಸಹಿಸಂಗ್ರಹ ನಡೆಸುವುದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಸಹಿ ಸಂಗ್ರಹ ಮಾಡುವುದರಿಂದ ನಾನು ಜಗ್ಗುವುದೂ ಇಲ್ಲ ಬಗ್ಗುವುದೂ ಇಲ್ಲ. ಸಹಿಸಂಗ್ರಹ ಮುಗಿದು ಹೋಗಿರುವ ಕಥೆ. ಎಲ್ಲರೊಂದಿಗೂ ಮಾತನಾಡಿದ್ದೇನೆ. ಯಾರೂ ಮುಂದೆ ಈ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ ಎಂದರು.

ರಾಜ್ಯದಲ್ಲಿ ಕೋವಿಡ್ ಬಗ್ಗೆ ಮುಂಜಾಗ್ರತಾ ಕ್ರಮ ಸರ್ಕಾರ ಕೈಗೊಳ್ಳುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೇ, ರಾಜ್ಯದಲ್ಲಿ ಉತ್ತಮ ಕೆಲಸವಾಗ್ತಿದೆ. ಜನರು ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದು, ಲಸಿಕೆಯನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಕಡೆಯಲ್ಲಿ ಕೋವಿಡ್ ಹರಡುತ್ತಿದ್ದು, ನಿಯಂತ್ರಣಕ್ಕೆ ಎಷ್ಟು ಸಾಧ್ಯನೋ ಅಷ್ಟು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next