Advertisement

ಗೆದ್ದರೆ ಸಿದ್ದರಾಮಯ್ಯನವರೇ ಸಿಎಂ: ರಾಹುಲ್‌ ಗಾಂಧಿ 

06:00 AM Apr 09, 2018 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದರೆ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸುಳಿವು ನೀಡಿದ್ದಾರೆ.

Advertisement

ಜನನಾಯಕರು ಯಾರಾಗಿರುತ್ತಾರೋ ಅವರೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗುತ್ತಾರೆ. ಜನಾಶೀರ್ವಾದ ಯಾತ್ರೆ ವೇಳೆ ಜನರಿಂದ ವ್ಯಕ್ತವಾದ ಭಾವನೆಗಳನ್ನು ಗಮನಿಸಿದರೆ ಸಿದ್ದರಾಮಯ್ಯ ಜನರ ನಾಯಕರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಪ್ರಸ್ತುತ ಅವರು ಮುಖ್ಯಮಂತ್ರಿ ಆಗಿರುವುದರಿಂದ ಪಕ್ಷವೂ ಅವರ ನಾಯಕತ್ವವನ್ನು ಪರಿಗಣಿಸಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿರುವ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭಕ್ಕೂ ಮುನ್ನ ಭಾನುವಾರ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡಿದರು. ಕಾಂಗ್ರೆಸ್‌ ಹಮ್ಮಿಕೊಂಡಿರುವ ಜನಾಶೀರ್ವಾದ ಯಾತ್ರೆಗೆ ಎಲ್ಲಾ ಭಾಗಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನ ಕಾಂಗ್ರೆಸ್‌ ಜತೆ ಇದ್ದಾರೆ ಎಂಬುದಕ್ಕೆ ಸಾಕ್ಷಿ. ಇದರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯ ಪ್ರವಾಸದಲ್ಲಿ ಮಾಡಿಕೊಳ್ಳುತ್ತಿರುವ ಯಡವಟ್ಟುಗಳು ಕಾಂಗ್ರೆಸ್‌ಗೆ ವರದಾನವಾಗಲಿದೆ ಎಂದು ಅಭಿಪ್ರಾಯಪಟ್ಟರು.

ವರ್ಚಸ್ಸು ಕಳೆದುಕೊಳ್ಳುತ್ತಿರುವ ಪ್ರಧಾನಿ: ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಕಳೆದುಕೊಳ್ಳುತ್ತಿದ್ದಾರೆ. ಅವರು ಮಾಡಿರುವ ಪ್ರಯೋಗಗಳು ದೇಶದೆಲ್ಲೆಡೆ ವೈಫ‌ಲ್ಯ ಕಂಡಿದೆ. ಗುಜರಾತ್‌ ಮಾದರಿಯನ್ನು ಇಡೀ ದೇಶಕ್ಕೆ ಅನ್ವಯಿಸಲು ಪ್ರಯತ್ನಿಸಿದರಾದರೂ ದೇಶದ ಜನತೆ ಅದನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಪ್ರಧಾನಿಯವರಿಗೆ ಈಗ ಆತಂಕ ಶುರುವಾಗಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿಯೂ ಅವರಿಗೆ ಇದೇ ಅತಂಕ ಕಾಡುತ್ತಿದೆ ಎಂದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಫ‌ಲಿತಾಂಶ ಕಾಂಗ್ರೆಸ್‌ಗೆ ಹೊಸ ಚೈತನ್ಯ ತರಲಿದೆ. ರಾಜ್ಯದಲ್ಲಿ ಪ್ರಮುಖವಾಗಿ ರೈತರು ಮತ್ತು ಅವರು ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡುವ ಕುರಿತು ಕಾಂಗ್ರೆಸ್‌ ಆದ್ಯತೆ ನೀಡಲಿದೆ. ನೀರಾವರಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಮೆಚ್ಚುಗೆ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ, ರಾಜ್ಯದಲ್ಲಿ ಪಕ್ಷದ ಎಲ್ಲ ನಾಯಕರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಯತ್ನ ನಡೆಸಿರುವುದಾಗಿ ಹೇಳಿದರು.

Advertisement

ಎರಡು ಕಡೆ ಸ್ಪರ್ಧೆ ಉಸ್ತುವಾರಿ ತೀರ್ಮಾನ?
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಬೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಈ ವಿಚಾರವನ್ನು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಮತ್ತು ರಾಜ್ಯದ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ರಾಹುಲ್‌ಗಾಂಧಿ ತಿಳಿಸಿದರು.

ಕೇಡರ್‌ ವ್ಯವಸ್ಥೆ ಇಲ್ಲದಿರುವುದು ಕಾಂಗ್ರೆಸ್‌ ಹಿನ್ನಡೆಗೆ ಕಾರಣ
ಪಕ್ಷದಲ್ಲಿ ಕೇಡರ್‌ ವ್ಯವಸ್ಥೆ ಇಲ್ಲದಿರುವುದು ಕಾಂಗ್ರೆಸ್‌ ದೇಶಾದ್ಯಂತ ಹಿನ್ನಡೆ ಅನುಭವಿಸಲು ಕಾರಣವಾಗುತ್ತಿದೆ ಎಂಬುದನ್ನು ರಾಹುಲ್‌ ಒಪ್ಪಿಕೊಂಡಿದ್ದಾರೆ. ಹೀಗಾಗಿ ಕೇಡರ್‌ ವ್ಯವಸ್ಥೆ ಬಲಪಡಿಸುವುದರೊಂದಿಗೆ ಪಕ್ಷದಲ್ಲಿ ಹಿರಿಯ ನಾಯಕರ ಬದಲು ಯುವಕರಿಗೆ ಆದ್ಯತೆ ನೀಡುವ ಮೂಲಕ ಹೊಸ ಚೈತನ್ಯ ತರುವ ಆಲೋಚನೆ ಹೊಂದಿರುವುದಾಗಿ ಹೇಳಿದ ಅವರು, ಗುಜರಾತ್‌ನಲ್ಲಿ ಯುವ ನಾಯಕರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದು ಹೆಚ್ಚಿನ ಅನುಕೂಲವಾಗಿದೆ. ದೇಶದ ಇತರ ರಾಜ್ಯಗಳಲ್ಲಿಯೂ ಅದೇ ಮಾದರಿ ಅನುಸರಿಸುವ ಬಗ್ಗೆ ಆಲೋಚಿಸುತ್ತಿರುವುದಾಗಿ ತಿಳಿಸಿದರು.

ಕ್ಯಾಪಿಟಲ್‌ ಬೆಂಗಳೂರಿಗೆ ರಾಹುಲ್‌ ಸಹಮತ
ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರು ರಾಷ್ಟ್ರದ ಎರಡನೇ ರಾಜಧಾನಿ ಮಾಡುವ ಬಗ್ಗೆ ಎಐಸಿಸಿ ಅಧ್ಯಕ್ಷ  ರಾಹುಲ್‌ಗಾಂಧಿ ಸಹಮತ ವ್ಯಕ್ತಪಡಿಸಿದ್ದಾರೆ. ಉದ್ಯಮಿಗಳ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ, ಬೆಂಗಳೂರು ಎರಡನೇ ರಾಜಧಾನಿ ಮಾಡಬೇಕು ಎಂಬ ಅಭಿಪ್ರಾಯಕ್ಕೆ ಅವರು ಸಹಮತ ವ್ಯಕ್ತಪಡಿಸಿದರು. ಅಲ್ಲದೆ ಎರಡನೇ ರಾಜಧಾನಿ ವಿಚಾರದಲ್ಲಿ ತಮ್ಮಿಂದ ಮಾಡಬಹುದಾದ ಪ್ರಯತ್ನ ಮಾಡಲಾಗುವುದು ಎಂಬ ಭರವಸೆಯನ್ನೂ ನೀಡಿದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಉದ್ಯೋಗ ಸೃಷ್ಟಿಗೆ ಒತ್ತು ಕೊಟ್ಟಿದೆ. ಕಾಂಗ್ರೆಸ್‌ ಪಕ್ಷ ಕೈಗಾರಿಕೆ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಯುಪಿಎ ಅವಧಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನೂ ರೂಪಿಸಿತ್ತು ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ದೇಶದ ಆರ್ಥಿಕತೆಯನ್ನು ಸ್ವಂತ ಯೋಜನೆ ಮೂಲಕ ನಡೆಸುತ್ತಿದ್ದಾರೆ. ಉದ್ಯಮ, ಕೈಗಾರಿಕೆಗಳ ಕುರಿತಾಗಿ ಹಿತ ಕಾಪಾಡುವ ಯೋಜನೆ ಮೋದಿ ಅವರಿಗೆ ಇಲ್ಲ. ಏಕ ಪಕ್ಷೀಯ ನಿರ್ಧಾರಗಳಿಂದ ದೇಶದ ಆರ್ಥಿಕತೆ ಕೊಂಡೊಯ್ಯುತ್ತಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next