Advertisement

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

01:58 AM Jul 27, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನಮಗೆ ಹಿಂದಿನ ಬಾರಿ ಗಿಂತ ಹೆಚ್ಚು ಸ್ಥಾನ ಬಂದಿರುವುದಷ್ಟೇ ಅಲ್ಲದೆ ಶೇ. 13ರಷ್ಟು ಹೆಚ್ಚು ಮತ ಗಳಿಸಿದ್ದೇವೆ. ಇದರಿಂದ ಹತಾಶರಾಗಿ ಬಿಜೆಪಿ ಮತ್ತು ಜೆಡಿಎಸ್‌ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

Advertisement

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ಗೆ ಕಡಿಮೆ ಸ್ಥಾನ ಬಂದಿದೆ. ಹೀಗಾಗಿ ಮುಖ್ಯಮಂತ್ರಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ನಾನು ಎರಡನೇ ಬಾರಿ ಸಿಎಂ ಆಗಿರುವುದನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿವೆ ಎಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ವಾಗ್ಧಾಳಿ ನಡೆಸಿದರು.

ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಪ್ರತೀ ಪುಟವೂ ಪಾರದರ್ಶಕ ಮತ್ತು ಪ್ರಾಮಾಣಿಕ. ಸಣ್ಣದೊಂದು ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯದ ಪಾವಿತ್ರ್ಯ ಕಾಪಾಡಿಕೊಂಡಿದ್ದೇನೆ. ಆದರೆ ವಿಪಕ್ಷಗಳು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸಂಚು ನಡೆಸಿವೆ ಎಂದು ಸಿಎಂ ಆಪಾದಿಸಿದರು.

ವಿಪಕ್ಷ ನಾಯಕರು ಹತಾಶರಾಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನಾವು 135 ಸ್ಥಾನ ಗೆದ್ದ ಬಳಿಕ ರಾಜಕೀಯ ಪ್ರೇರಿತ ಹೇಳಿಕೆ ಕೊಡುತ್ತಿದ್ದಾರೆ. ನಾನು ಸಚಿವನಾಗಿ 40 ವರ್ಷ ಆಯಿತು.

ಡಿಸಿಎಂ, ವಿಪಕ್ಷ ನಾಯಕ, ಮುಖ್ಯ ಮಂತ್ರಿಯಾಗಿ ಈ ವರೆಗೆ ನನ್ನ ಮೇಲೆ ಸಣ್ಣ ಕಪ್ಪುಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಆದರೆ ಜನರ ವಿಶ್ವಾಸ ಕಳೆದುಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್‌ ಸದನದೊಳಗೆ ಹಾಗೂ ಹೊರಗೆ ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಅಧಿವೇಶನದಲ್ಲಿ ಎರಡು ವಾರ ವಾಲ್ಮೀಕಿ ನಿಗಮದ ಒಂದೇ ವಿಷಯ ಪ್ರಸ್ತಾವ ಆಗಿದೆ. ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ವಿಪಕ್ಷದವರು ಚರ್ಚೆ ಮಾಡಬೇಕಿತ್ತು. ಆದರೆ ಆ ಬಗ್ಗೆ ಅವರು ಗಮನ ನೀಡದೆ ಇದ್ದುದರಿಂದ ಪ್ರವಾಹದಿಂದ ಸೃಷ್ಟಿಯಾದ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷದವರು ಬೆಳಕು ಚೆಲ್ಲಿದರು. ನೆಪ ಮಾತ್ರಕ್ಕೂ ರಾಜ್ಯದ ಜನರ ಸಂಕಷ್ಟಗಳ ಬಗ್ಗೆ ವಿಪಕ್ಷ ಸದಸ್ಯರು ಚಕಾರ ಎತ್ತಲಿಲ್ಲ. ಅಧಿವೇಶನದಲ್ಲಿ ವಿಪಕ್ಷ ಸದಸ್ಯರು ಹೊಣೆಗೇಡಿತನ ಪ್ರದರ್ಶನ ಮಾಡಿದ್ದಾರೆ ಎಂದು ಆರೋಪಿಸಿದರು.

ಅರ್ಹತೆ ಇರುವವರಿಂದ ಸಿಎಂ ಸ್ಥಾನಕ್ಕೆ “ಟವೆಲ್‌’
ನಮ್ಮ ಪಕ್ಷದಲ್ಲಿ ಅರ್ಹತೆ ಇರು ವವ ರೆಲ್ಲ ಮುಖ್ಯಮಂತ್ರಿ ಕುರ್ಚಿಯ ಮೇಲೆ “ಟವೆಲ್‌’ ಹಾಕುತ್ತಾರೆ ಎಂದು ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು. ಸಿಎಂ ಕುರ್ಚಿ ಮೇಲೆ ಟವೆಲ್‌ ಹಾಕಿದವರು ವಾಲ್ಮೀಕಿ ಪ್ರಕರಣ ಬೆಳಕಿಗೆ ಬರುವುದರ ಹಿಂದೆ ಇದ್ದಾರೆ ಎಂಬ ಕೇಂದ್ರ ಸಚಿವ ಎಚ್‌. ಡಿ. ಕುಮಾರಸ್ವಾಮಿ ಆರೋಪದ ಬಗ್ಗೆ ಉತ್ತರಿಸಿದ ಅವರು, “ನಮ್ಮಲ್ಲಿ ಅರ್ಹರು ತುಂಬಾ ಜನ ಇದ್ದಾರೆ. ಅವರೆಲ್ಲರೂ ಟವೆಲ್‌ ಹಾಕುತ್ತಾರೆ’ ಎಂದು ಡಿಸಿಎಂ ಡಿಕೆಶಿ ಮುಖ ನೋಡಿ ನಕ್ಕು, “ನೀನು ಏನಾದ್ರೂ ಮಾತಾಡ್ತಿಯೇನಯ್ನಾ?’ ಎಂದು ಪ್ರಶ್ನಿಸಿದರು.

ಎಚ್‌ಡಿಕೆಗೂ ಸೈಟ್‌: ಸಚಿವ ಬೈರತಿ
ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸೇರಿ ಜೆಡಿಎಸ್‌-ಬಿಜೆಪಿ ನಾಯಕರಿಗೂ ಮುಡಾದಲ್ಲಿ ಪರ್ಯಾಯ ನಿವೇಶನ ನೀಡಲಾಗಿದೆ. ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್‌ಗೂ ನಿವೇಶನ ಸಿಕ್ಕಿದೆ ಎಂದು ಸಚಿವ ಬೈರತಿ ಸುರೇಶ್‌ ಹೇಳಿದರು.

ರಾಜ್ಯ ಸರಕಾರದ ವಿರುದ್ಧ
ದಿಲ್ಲಿಯಲ್ಲಿ ಬಿಜೆಪಿ ಪ್ರತಿಭಟನೆ
ಹೊಸದಿಲ್ಲಿ: ವಾಲ್ಮೀಕಿ, ಮುಡಾ ಹಗರಣಗಳ ವಿರುದ್ಧ ಸಂಸತ್ತಿನ ಒಳಗೆ, ಹೊರಗೆ ರಾಜ್ಯ ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯಸಭೆಯಲ್ಲಿ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next