ನವದೆಹಲಿ: ಜಮ್ಮು-ಕಾಶ್ಮೀರದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ (BJP) ಸೋಮವಾರ (ಆ.26) 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಇದಾದ ಒಂದೇ ಗಂಟೆಯಲ್ಲಿ ಪಟ್ಟಿಯನ್ನು ಹಿಂಪಡೆದಿರುವುದಾಗಿ ಘೋಷಿಸಿತ್ತು.
ಇಂದು ಬೆಳಗ್ಗೆ ಬಿಜೆಪಿ ಅನಂತ್ ನಾಗ್, ದೋಡಾ, ಪೂಂಚ್ ಹವೇಲಿ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು.
ಅನಂತ್ ನಾಗ್ ನಿಂದ ಸೈಯದ್ ವಜಾಹತ್, ಕಿಶ್ತ್ ವಾರ್ ನಿಂದ ಸುಶ್ರೀ ಶಗುನ್ ಪರಿಹಾರ್, ದೋಡಾದಿಂದ ಗಜಯ್ ಸಿಂಗ್ ರಾಣಾ, ರಿಯಾಸಿಯಿಂದ ಕುಲ್ ದೀಪ್ ರಾಜ್ ದುಬೆ, ಶ್ರೀಮಾತಾ ವೈಷ್ಣೋ ದೇವಿ ಕ್ಷೇತ್ರದಿಂದ ರೋಹಿತ್ ದುಬೆ, ಪೂಂಚ್ ಹವೇಲಿಯಿಂದ ಚೌಧರಿ ಅಬ್ದುಲ್ ಗಣಿ ಹೆಸರನ್ನು ಘೋಷಿಸಿತ್ತು. ಆದರೆ ಒಂದು ಗಂಟೆ ನಂತರ 44 ಅಭ್ಯರ್ಥಿಗಳ ಪಟ್ಟಿ ಹಿಂಪಡೆದಿತ್ತು. ಇದೀಗ ಪಟ್ಟಿಯಲ್ಲಿ ಬದಲಾವಣೆ ಮಾಡಿ ಮರು ಬಿಡುಗಡೆ ಮಾಡಲು ಬಿಜೆಪಿ ಸಿದ್ಧತೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ಘೋಷಿಸಿದ್ದು, ಪ್ರಮುಖ ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸುವ ಇಚ್ಛೆ ಇರುವುದಾಗಿ ಹೇಳಿದೆ. ಕಾಶ್ಮೀರ ಕಣಿವೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸುವುದಾಗಿ ತಿಳಿಸಿದೆ.
ಜಮ್ಮು ಕಾಶ್ಮೀರದಲ್ಲಿ ಸೆಪ್ಟೆಂಬರ್ 19, 25 ಮತ್ತು ಅಕ್ಟೋಬರ್ 1ರಂದು ಮತದಾನ ನಡೆಯಲಿದೆ. ಅಕ್ಟೋಬರ್ 4ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ. ಜಮ್ಮು ಕಾಶ್ಮೀರದ ಆರ್ಟಿಕಲ್ 370 ರದ್ದಾಗಿ ರಾಜ್ಯ ಸ್ಥಾನಮಾನ ಕೊನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ.