ಗದಗ: ”ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿನ ಮೇಲೆ ಒಂದು ಕಲ್ಲು ಹಾಕಿಕೊಳ್ಳುವ ಬದಲು ಹತ್ತಾರು ಕಲ್ಲು ಹಾಕಿಕೊಂಡು ಔಷಧಿ ಇಲ್ಲದ ಹಾಗೆ ಗಾಯ ಮಾಡಿಕೊಂಡಿದ್ದಾರೆ” ಎಂದು ಗುರುವಾರ(ಅ3) ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ನಡವಳಿಗೆ ದಿನ ಒಂದೊಂದು ರೀತಿಯಲ್ಲಿ ಬದಲಾಗಿ ಕಾಣಿಸುತ್ತಿದೆ. ಅವರು ಮಾಡಿಕೊಂಡಿರುವ ಗಾಯಕ್ಕೆ ಅವರೇ ಔಷಧಿ ಹಚ್ಚಿಕೊಳ್ಳಬೇಕು. ಈವಾಗ ರಾಜೀನಾಮೆ ನೀಡಬೇಕು. ತಪ್ಪಿತಸ್ಥರಲ್ಲ ಅಂದರೆ ಮತ್ತೆ ಸಿಎಂ ಆಗಿ ಮುಂದುವರಿಯಬಹುದು” ಎಂದು ಹೇಳಿದರು.
”ಸಿಎಂ ಸಿದ್ದರಾಮಯ್ಯ ಹಾಗೂ ನಾನು ಒಟ್ಟಿಗೆ ರಾಜಕೀಯಕ್ಕೆ ಬಂದವರು. ಮುಡಾ ಪ್ರಕರಣ ಜಗಜ್ಜಾಹೀರವಾಗಿದ್ದು, ಅದನ್ನು ಸಿಎಂ ಅರ್ಥ ಮಾಡಿಕೊಳ್ಳುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ಆತ್ಮಸಾಕ್ಷಿ ಬಗ್ಗೆ ಮಾತನಾಡಿದ್ದಾರೆ. ಮೊದಲೇ ನಿವೇಶನಗಳನ್ನು ವಾಪಸ್ ಕೊಡಬೇಕಿತ್ತು. ವ್ಯವಸ್ಥೆಯಲ್ಲಿ ಯಾರೂ ದೊಡ್ಡವರಲ್ಲ. ಕಾನೂನು ಎಲ್ಲರಿಗೂ ಒಂದೇ” ಎಂದರು.
ಆರ್. ಅಶೋಕ್ ಕೂಡ ನಿವೇಶನ ಹಿಂತಿರುಗಿಸಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಆರ್.ಅಶೋಕ್ ಅವರು ನಿವೇಶನ ಮರಳಿಸಿದಾಗ ಪ್ರಕರಣ ಕೋರ್ಟ್‌ಗೆ ಹೋಗಿರಲಿಲ್ಲ. ಅಲ್ಲದೇ ಮುಡಾ ಪ್ರಕರಣಕ್ಕೂ ಅವರಿಗೂ ಏನು ಸಂಬಂಧ?, ಅವರು ಆಗಲೇ ನಿವೇಶನ ಹಿಂದಿರುಗಿಸಿದ್ದಾರೆ. ಸಿದ್ದರಾಮಯ್ಯ ಕೂಡ ಆಗಲೇ ಈ ಕೆಲಸ ಮಾಡಬೇಕಿತ್ತು’ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಮಾತನಾಡಿರುವ ಜಿ.ಟಿ. ದೇವೇಗೌಡರ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಅವರು ಹಿರಿಯ ರಾಜಕಾರಣಿ. ಯಾಕೆ ಹೀಗೆ ಮಾತನಾಡಿದ್ದಾರೆ ಎಂಬುದು ಅವರಿಗೆ ಮಾತ್ರ ಗೊತ್ತು” ಎಂದರು.