ಬೆಂಗಳೂರು: ಮತದಾರನ ವೋಟಿನ ಮೇಲಿನ ಅಂಶಗಳು ಅಭ್ಯರ್ಥಿ, ಪಕ್ಷಕ್ಕೆ ಸಂಬಂಧಿಸಿದ್ದವಾದರೂ, ಆತನ ನಿರೀಕ್ಷೆ, ಆದ್ಯತೆಗಳು ಬೇರೆಯೇ ಇವೆ. ಏನೇ ಆಗಲಿ, ಮೊದಲು ಕುಡಿಯುವ ನೀರು ಕೊಡಿ ಎಂಬುದೇ ರಾಜ್ಯದ ಮತದಾರನ ಮೊದಲ ಆದ್ಯತೆ. ಇದಾದ ನಂತರವಷ್ಟೇ ಆತ ವಿದ್ಯುತ್, ಉತ್ತಮ ಶಾಲೆ, ಪರಿಸರ ರಕ್ಷಣೆ ವಿಚಾರಗಳತ್ತ ಗಮನ ಹರಿಸಿದ್ದಾನೆ. 10ಕ್ಕೆ ಎಷ್ಟು ಅಂಕ ಕೊಡುತ್ತೀರಿ ಎಂಬುದರ ಮೇಲೆ ನಿರ್ಣಯಿಸಲಾಗಿದೆ. ಅಂದರೆ, ಕುಡಿವ ನೀರಿನ ವಿಚಾರದಲ್ಲಿ 10ಕ್ಕೆ 8.2 ಅಂಕ ನೀಡಿದ್ದಾನೆ. ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬದಲಾಗಿದೆ.
ಎಡಿಆರ್(ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ಸ್ì) ಈಚೆಗೆ ಸರ್ಕಾರದ ಯೋಜನೆಗಳು, ಆಡಳಿತ ವೈಖರಿ, ಆದ್ಯತೆಗಳ ಕುರಿತು ಅಭಿಪ್ರಾಯ ಸಂಗ್ರಹಿಸಿ “ಕರ್ನಾಟಕ ಸಮೀಕ್ಷಾ ವರದಿ 2017-18′ ಸಿದ್ಧಪಡಿಸಿದ್ದು, ಶನಿವಾರ ಇದನ್ನು ಬಿಡುಗಡೆ ಮಾಡಲಾಯಿತು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದ ವಿವಿಧ ವರ್ಗಗಳ ಸುಮಾರು 13,244 ಜನರಿಂದ ಎಡಿಆರ್ ಭಿಪ್ರಾಯ ಸಂಗ್ರಹಿಸಿದೆ. ಈ ಸಮೀಕ್ಷೆಯಲ್ಲಿ ತಿಳಿದು ಬಂದ ವಿಚಾರವೆಂದರೆ ಗ್ರಾಮೀಣ ಪ್ರದೇಶವಾಗಲಿ ಅಥವಾ ನಗರ ಪ್ರದೇಶವಾಗಲಿ, ಭ್ರಷ್ಟಾಚಾರ ನಿಯಂತ್ರಣ, ಕಾನೂನು ಮತ್ತು ಸುವ್ಯವಸ್ಥೆ, ಉದ್ಯೋಗ ಮತ್ತು ಶಿಕ್ಷಣ, ಭಯೋತ್ಪಾದನೆ ಅಂಶಗಳ ಬಗ್ಗೆ ಜನ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅದೇ ರೀತಿ ಸರ್ಕಾರಕ್ಕೆ ಅಂಕ ಕೊಡುವಲ್ಲಿಯೂ ಈ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ. ಗ್ರಾಮೀಣ ಪ್ರದೇಶದ ಜನರಂತೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಾಲೆ, ವಿದ್ಯುತ್, ಆಹಾರ ವಿತರಣೆ, ಕೃಷಿ ಸಾಲ, ಮಹಿಳಾ ಸುರಕ್ಷತೆಗೆ ಹೆಚ್ಚಿನ ಅಂಕ ನೀಡಿದ್ದಾರೆ. ಹಾಗೆಯೇ ನಗರದ ಮಂದಿ ಕೂಡ ಉತ್ತಮ ಶಾಲೆ, ವಿದ್ಯುತ್, ಸಾರ್ವಜನಿಕ ಸಾರಿಗೆ, ಕುಡಿವ ನೀರು, ಆಹಾರ ವಿತರಣೆಗೆ ಶಹಬ್ಟಾಸ್ ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲೂ ಟಾಪ್ 10ರಲ್ಲಿ ಜಾಗ ಕೊಟ್ಟಿದ್ದಾರೆ. ಅಲ್ಲದೆ, ಭ್ರಷ್ಟಾಚಾರ ನಿಗ್ರಹ ಮತ್ತು ಮೂಲ ಭೂತ ಸೌಕರ್ಯಗಳ ಒದಗಿಸುವಲ್ಲಿ ಈ ಸರ್ಕಾರ ಹೆಚ್ಚಿನ ಕ್ರಮ ತೆಗೆದುಕೊಂಡಿಲ್ಲವೆಂದೂ ಹೇಳಿದ್ದಾರೆ.