Advertisement

ಉಪಸಮರ ವೇದಿಕೆಯಲ್ಲಿ ಸಿದ್ದ ರಾಮಾಯಣ

09:45 AM May 15, 2019 | Suhan S |

ಹುಬ್ಬಳ್ಳಿ: ಎರಡು ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಆ ಪಕ್ಷ ಅಧಿಕಾರಕ್ಕೆ ಬಂದು ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರಂತೆ. ಯಾಕೆ ಮತ್ತೂಮ್ಮೆ ರಾಜ್ಯವನ್ನು ಲೂಟಿ ಹೊಡೆದು ಜೈಲು ಸೇರಲು ಬಿಜೆಪಿ ಸರಕಾರ ಬರಬೇಕಾ, ಜನರು ಇದಕ್ಕಾಗಿ ಮತ ನೀಡಬೇಕಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಕುಂದಗೋಳ ಕ್ಷೇತ್ರದ ಅರಳಿಕಟ್ಟಿಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರಕಾರ ಏನೆಲ್ಲ ಮಾಡಿತು. ಯಾರೆಲ್ಲ ಜೈಲು ಸೇರಿದರು ಎಂಬುದು ಜನರಿಗೆ ಗೊತ್ತಿದೆ. ಮತ್ತೂಮ್ಮೆ ಅಂತಹದ್ದೇ ಸ್ಥಿತಿಗಾಗಿ ಜನ ಇವರಿಗೆ ಮತ ನೀಡಬೇಕಾ. ನಮ್ಮ ಸರಕಾರದ ಅಭಿವೃದ್ಧಿ ಯೋಜನೆಗಳ ಕುರಿತಾಗಿ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ಬಿಜೆಪಿಯವರು ವೇದಿಕೆ ಕಲ್ಪಿಸಲಿ ಎಂದು ಸವಾಲು ಹಾಕಿದರು.

ಕೇಂದ್ರದಿಂದ ರಾಜ್ಯಕ್ಕೆ ಅಭಿವೃದ್ಧಿ ಯೋಜನೆ ತಂದಿಲ್ಲ. ತಾವು ಅಧಿಕಾರದಲ್ಲಿದಾಗಲೂ ರಾಜ್ಯದಲ್ಲಿ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಬಿಜೆಪಿಯವರ ಹೇಳಿಕೆ, ಪ್ರಚಾರ ವೈಷಮ್ಯ, ಧರ್ಮ-ಜಾತಿಗಳ ನಡುವೆ ವಿಷಬೀಜ ಬಿತ್ತುವುದಾಗಿದೆ. ನನ್ನ ಐದು ವರ್ಷಗಳ ಆಡಳಿತಾವಧಿಯ ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನು ಬೇಕಾದರೆ ಕೊಡುತ್ತೇನೆ. ಬಿಜೆಪಿಯವರು ಧಮ್‌ ಇದ್ದರೆ ಪಟ್ಟಿ ನೀಡಲಿ ಎಂದರು.

ಬಿಎಸ್‌ವೈಗೆ ಸಿಎಂ ಖುರ್ಚಿ ಕನಸು: ರಾತ್ರಿಯಾದರೆ ಸಾಕು ಯಡಿಯೂರಪ್ಪ ಅವರಿಗೆ ವಿಧಾನಸೌಧ, ಮೂರನೇ ಮಹಡಿ, ಮುಖ್ಯಮಂತ್ರಿ ಕಚೇರಿ, ಅಲ್ಲಿನ ಖುರ್ಚಿಯ ಕನಸು ಬೀಳುತ್ತಿದೆ. ಹಿಂದೆ ಸಿಎಂ ಆಗಿದ್ದಾಗ ಏನು ಮಾಡಿದರು. ಅವರು ಸೇರಿದಂತೆ ಐದಾರು ಸಚಿವರು ಎಲ್ಲಿಗೆ ಹೋಗಿ ಬಂದರು ಎಂಬುದನ್ನು ಜನ ಮರೆತಿಲ್ಲ. ಇದೀಗ ಎರಡು ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟರೆ ಮೈತ್ರಿ ಸರಕಾರ ಬೀಳಿಸಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಯಾವ ಕಾರಣಕ್ಕೂ ಸಾಧ್ಯವಿಲ್ಲ. ಯಡಿಯೂರಪ್ಪ ಸಿಎಂ ಕನಸು ಕಾಣುವ ಬದಲು ವಿಪಕ್ಷ ನಾಯಕರ ಕೆಲಸ ಮಾಡಲಿ ಎಂದು ಹೇಳಿದರು.

ಶಾಸಕರಿಗೆ ಕೋಟಿ ಹಣ: ನರೇಂದ್ರ ಮೋದಿ ಆದಿಯಾಗಿ ಬಿಜೆಪಿ ನಾಯಕರು ನಾವು ಸಾಚಾ, ಪ್ರಾಮಾಣಿಕರು ಎಂದು ಬೆನ್ನು ತಟ್ಟಿಕೊಳ್ಳುತ್ತಾರೆ. ಆದರೆ ರಾಜ್ಯದಲ್ಲಿ ಶಾಸಕರನ್ನು ಖರೀದಿ ಮಾಡಲು ಒಬ್ಬೊಬ್ಬರಿಗೆ 25-30 ಕೋಟಿ ರೂ. ಹಣ ಆಮಿಷವೊಡ್ಡುತ್ತಿದ್ದು, ಈ ಹಣ ಯಾರಪ್ಪನ ಮನೆಯಿಂದ ಬಂದಿದೆ ಎಂಬುವುದನ್ನು ಬಹಿರಂಗ ಪಡಿಸಬೇಕು. ಚೌಕಿದಾರ, ಸಾಚಾದಾರ ಎಂದು ಹೇಳಿಕೊಳ್ಳುವ ಪಕ್ಷದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಕೆಲಸಗಳು ಆಗುತ್ತಿವೆ. ಯಾವುದೇ ಕಾರಣಕ್ಕೂ ನಮ್ಮ ಶಾಸಕರು ಖರೀದಿಯಾಗುವುದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಿಲ್ಲ ಎಂದರು.

Advertisement

ಮುಖಂಡರಾದ ಸತೀಶ ಜಾರಕಿಹೊಳಿ, ಎಚ್.ಕೆ. ಪಾಟೀಲ, ಭೈರತಿ ಸುರೇಶ, ಮುನಿರತ್ನ, ಎಚ್.ಸಿ. ಮಹಾದೇವಪ್ಪ, ಬಸವರಾಜ ಹೊರಟ್ಟಿ, ವಿನಯ ಕುಲಕರ್ಣಿ, ಪಿ.ಸಿ. ಸಿದ್ದನಗೌಡ್ರ, ಎಂ.ಎಸ್‌. ಅಕ್ಕಿ, ಆಲ್ಕೋಡ ಹನುಮಂತಪ್ಪ, ಎ.ಎಂ. ಹಿಂಡಸಗೇರಿ ಇನ್ನಿತರರಿದ್ದರು.

ಹುಬ್ಬಳ್ಳಿ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯರ್ತರು ಮುಖಾಮುಖೀಯಾದ ವೇಳೆ ಘೋಷಣೆಗಳ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾದ ಘಟನೆ ಅದರಗುಂಚಿ ಗ್ರಾಮದಲ್ಲಿ ನಡೆಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಮುಖಂಡರು ರೋಡ್‌ ಶೋ ನಡೆಯುತ್ತಿದ್ದ ವೇಳೆ ಎದುರಾದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕಾರ್ಯಕರ್ತರು ವಿಕೆ ಬಾಸ್‌ ವಿಕೆ ಬಾಸ್‌ ಎಂದು ಘೋಷಣೆ ಕೂಗಲು ಆರಂಭಿಸಿದರು. ಮಧ್ಯ ಪ್ರವೇಶಿಸಿದ ಸಚಿವ ಯು.ಟಿ. ಖಾದರ ಕಾಂಗ್ರೆಸ್‌ ಕಾರ್ಯಕರ್ತರನ್ನು ಪಕ್ಕಕ್ಕೆ ಸರಿಸಿ ಬಿಜೆಪಿ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟರು.

‘ಜೋಶಿ ಎಲ್ಲಿದಿಯಪ್ಪಾ..’:

ಕರಡಿಕೊಪ್ಪ ಗ್ರಾಮದಲ್ಲಿ ರೋಡ್‌ ಶೋ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಗ್ರಾಮೀಣ ಪ್ರದೇಶಗಳನ್ನು ನೋಡದ ಸಂಸದ ಪ್ರಹ್ಲಾದ ಜೋಶಿ ಎಲ್ಲಿದ್ದಿಯಪ್ಪಾ, ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೀಯೇನಪ್ಪಾ. ಅಭಿವೃದ್ಧಿ ಕಾರ್ಯಗಳ ಹೆಸರಿನ ಮೇಲೆ ಮತ ಕೇಳಪ್ಪಾ ಎಂದು ಲೇವಡಿ ಮಾಡಿದರು. ನಿಮ್ಮ ಪ್ರಧಾನಿ ಅಚ್ಛೆ ದಿನ್‌ ಆಯೇಗಾ ಎಂದಿದ್ದರು. ಯಾರಿಗಾದರೂ ಅಚ್ಛೇ ದಿನ್‌ ಬಂದಿದೆಯಾ. ಪೆಟ್ರೋಲ್, ಡೀಸೆಲ್, ಗ್ಯಾಸ್‌ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ನಮ್ಮ ಶಾಸಕನಾಗಿದ್ದ ಡಾ| ಉಮೇಶ ಜಾಧವ 50 ಕೋಟಿ ರೂ.ಗೆ ಖರೀದಿಯಾಗಿದ್ದಾನೆ. ಅವನಿಗೆ ಲೋಕಸಭೆ ಟಿಕೆಟ್, ಮಗನಿಗೆ ವಿಧಾನಸಭೆ ಟಿಕೆಟ್ ನೀಡುವುದಾಗಿ ಒಪ್ಪಂದ ಆಗಿತ್ತು. ಇದು ಚೌಕಿದಾರನ ಕೆಲಸವಾಗಿದೆ ಎಂದು ವ್ಯಂಗ್ಯವಾಡಿದರು.
ಅಪರೂಪ ಸೇವಕನಿಗೆ ಗೌರವ ಕೊಡಿ:
ಶಿವಳ್ಳಿ ಅವರಿಗೆ ರಾಜಕಾರಣಿ ಎನ್ನುವುದಕ್ಕಿಂತ ಅವರೊಬ್ಬ ಅಪರೂಪದ ಸೇವಕ. ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡು ಎಂದು ಹೇಳಿದರೂ ಕ್ಷೇತ್ರದ ಜನರಿಗಾಗಿ ಆರೋಗ್ಯ ಲೆಕ್ಕಿಸಲಿಲ್ಲ. ಇಂತಹ ಅಭಿವೃದ್ಧಿ ಪರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರು ಮಾಡಿದ ಅಭಿವೃದ್ಧಿ ಹಾಗೂ ಅವರಿಗೆ ಗೌರವ ಕೊಡುವುದಕ್ಕಾಗಿ ಅವರ ಪತ್ನಿ ಕುಸುಮಾವತಿ ಅವರಿಗೆ ಮತ ನೀಡುವ ಮೂಲಕ ಶಿವಳ್ಳಿ ಅವರ ಆತ್ಮಕ್ಕೆ ಶಾಂತಿ ಕೋರಲು ಕ್ಷೇತ್ರದ ಜನತೆ ಸಿದ್ಧರಾಗಿದ್ದಾರೆ. ಬಾಯಿ ಬಡಾಯಿ ಗಿರಾಕಿಗಳ ಮಾತಿಗೆ ಮರುಳಾಗದೆ ಮೈತ್ರಿ ಅಭ್ಯರ್ಥಿಗೆ ಮತ ನೀಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
Advertisement

Udayavani is now on Telegram. Click here to join our channel and stay updated with the latest news.

Next