Advertisement
ಲೋಕಸಭೆಯಲ್ಲಿ ರಾಜ್ಯ ಸರ್ಕಾರದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಗೆ ವಿಧಾನಸಭೆಯಲ್ಲಿ ಪ್ರತ್ಯುತ್ತರ ನೀಡಿದ ಮುಖ್ಯಮಂತ್ರಿ,””ನೀರವ್ ಮೋದಿ, ಲಲಿತ್ ಮೋದಿ, ವಿಜಯ ಮಲ್ಯ ಸಾವಿರಾರು ಕೋಟಿ ರೂ. ಬ್ಯಾಂಕುಗಳಿಗೆ ವಂಚಿಸಿ ವಿದೇಶಗಳಿಗೆ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದು ಕೇಂದ್ರ ಸರ್ಕಾರ” ಎಂಬ ಗಂಭೀರ ಆರೋಪ ಮಾಡಿದರು. ಗೋವಿಂದರಾಜು ಡೈರಿ ಬಗ್ಗೆ ಮಾತನಾಡುವ ಬಿಜೆಪಿ, ಸಹಾರಾ ಡೈರಿ, ಹವಾಲಾ ಡೈರಿ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.
ಅಷ್ಟೇ ಅಲ್ಲದೆ, ನಾನು ಲೆಕ್ಕ ಕೊಡಬೇಕಿರುವುದು ಈ ರಾಜ್ಯದ ಜನತೆಗೆ ಹಾಗೂ ಈ ಸದನಕ್ಕೇ ಹೊರತು ಬೇರೆಯವರಿಗಲ್ಲ. ಕೇಂದ್ರ ಸರ್ಕಾರ ನಮಗೆ ನೆರವು ಕೊಡುವುದು ಭಿಕ್ಷೆಯಲ್ಲ. ನಮ್ಮ ಪಾಲು ಹಾಗೂ ಹಕ್ಕು. ಯಾರ ಮನೆಯಿಂದಲೂ ಕೊಡುವುದಿಲ್ಲ, ಆಕಾಶದಿಂದಲೂ ಉದುರುವುದಿಲ್ಲ, ಅದೂ ಕೂಡ ನಮ್ಮ ರಾಜ್ಯದ ಜನತೆ ಕಟ್ಟುವ ತೆರಿಗೆ ಹಣ ಎಂದರು.
Related Articles
Advertisement
ನಾನಿಲ್ಲಿ ರಾಜಕೀಯ ಭಾಷಣ ಮಾಡಲು ಬಯಸುವುದಿಲ್ಲ. ಹೊರಗಡೆ ನಡೆಸುವ ರಾಜಕೀಯ ವಾಗ್ಧಾಳಿಗೆ ಪ್ರತಿ ದಾಳಿ ನಡೆಸುವ ಸಾಮರ್ಥ್ಯ ನನಗೂ ಇದೆ. ನನ್ನನ್ನು ಟಾರ್ಗೆಟ್ ಮಾಡಿದರೆ ಎದುರಿಸುವುದೂ ಗೊತ್ತಿದೆ. ಯಾಕೆಂದರೆ ನನ್ನ ಜೀವನ ತೆರೆದ ಪುಸ್ತಕ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಪದೇ ಪದೆ ಪರ್ಸಂಟೇಜ್ ಸರ್ಕಾರ ಎಂದು ಟೀಕಿಸಿದ್ದರಿಂದ ನಾನು ಮಾತನಾಡಬೇಕಾಗಿದೆ ಎಂದು ಪೀಠಿಕೆ ಹಾಕಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸುವ ಸಂದರ್ಭವನ್ನೇ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮಾಡಲು ಬಳಸಿಕೊಂಡರು.
ಕೋಲಾಹಲ, ಭಾಷಣಕ್ಕೆ ಅಡ್ಡಿಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರಮೋದಿ ಅವರ ವಿರುದ್ಧ ಆರೋಪ ಮಾಡುತ್ತಿದ್ದಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ಸದಸ್ಯರು ಎದ್ದು ನಿಂತು ಭಾಷಣಕ್ಕೆ ಅಡ್ಡಿಪಡಿಸಿದರು. ಕೇಂದ್ರ ಸರ್ಕಾರದ್ದು ಹಾಗೂ ಹಿಂದಿನ ಬಿಜೆಪಿ ಸರ್ಕಾರ 90 ಪರ್ಸಂಟೇಜ್ ಸರ್ಕಾರ ಎಂದು ಹೇಳುವುದಕ್ಕೆ ನಿಮ್ಮ ಬಳಿ ದಾಖಲೆ ಏನಿದೆ ಕೊಡಿ ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದರು. ಇದಕ್ಕೆ ಪ್ರತಿ ಸವಾಲು ಹಾಕಿದ ಸಿದ್ದರಾಮಯ್ಯ, ನಮ್ಮದು 10 ಪರ್ಸಂಟೇಜ್ ಸರ್ಕಾರ ಎನ್ನಲು ನಿಮ್ಮ ಬಳಿ ದಾಖಲೆ ಏನಿದೆ ಕೊಡ್ರೀ ಎಂದು ಕೇಳಿದರು. ಅರ್ಕಾವತಿ ಡಿ ನೋಡಿಫಿಕೇಷನ್ ಪ್ರಕರಣ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು, ಕೆಂಪಣ್ಣ ಆಯೋಗದ ವರದಿ ಸದನಕ್ಕೆ ಮಂಡಿಸಿ. ನೂರಾರು ಎಕರೆ ಡಿ ನೋಟಿಫೈ ಮಾಡಿ ಅಕ್ರಮ ಎಸಗಿದ್ದೀರಿ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಕೆಂಪಣ್ಣ ಆಯೋಗದ ವರದಿ ಪರಾಮರ್ಶೆಗೆ ಸಮಿತಿ ರಚಿಸಲಾಗಿದೆ. ವರದಿ ಕೊಟ್ಟ ತಕ್ಷಣ ಸದನಕ್ಕೆ ಮಂಡಿಸುತ್ತೇವೆ. ಕೆಂಪಣ್ಣ ಆಯೋಗವೇ ಡಿನೋಟಿಫೈ ಪ್ರಕರಣದಲ್ಲಿ ನಮ್ಮ ಸರ್ಕಾರದ ಪಾತ್ರವಿಲ್ಲ ಎಂದು ಹೇಳಿದೆ ಎಂದು ಸಮರ್ಥಿಸಿಕೊಂಡರು. ಬಿಜೆಪಿಯ ಸಿ.ಟಿ.ರವಿ, ಜೀವರಾಜ್, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿದ್ದರಾಮಯ್ಯ ಅವರು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸತ್ಯ ಗೊತ್ತಿರುವುದರಿಂದ ಆತಂಕಗೊಂಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಸಾಕು ಸುಮ್ನೆ ಕುಳಿತುಕೊಳ್ಳಿ. ನೀವ್ ಬೇಕಾದಂಗೆ ಮಾತನಾಡಬಹುದು. ನಾವ್ ಮಾತನಾಡಬಾರದಾ? ಎಂದು ಪ್ರತಿಪಕ್ಷ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ತೀವ್ರ ಗದ್ದಲ ಉಂಟಾಗಿ ಯಾರು ಏನು ಹೇಳುತ್ತಿದ್ದಾರೆ ಎಂದೇ ಗೊತ್ತಾಗದ ವಾತಾವರಣ ನಿರ್ಮಾಣವಾಗಿತ್ತು. ಈ ಮಧ್ಯೆಯೇ ಸ್ಪೀಕರ್ ಕೋಳಿವಾಡ ಅವರು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿ ಅನುಮೋದನೆ ಪಡೆದುಕೊಂಡರು. ಸಿದ್ದರಾಮಯ್ಯ ಅವರ ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು. ಏ ಕತ್ತಿ ಬಂದ್ಬುಡು ಇಲ್ಲಿಗೆ!
ವಿಧಾನಸಭೆಯಲ್ಲಿ ಬುಧವಾರ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯುವಾಗ ಬಿಜೆಪಿ ವಿರುದ್ಧ ಕಟು ಟೀಕೆ ಮಾಡಿದ ಸಿದ್ದರಾಮಯ್ಯ, ಮೌನವಾಗಿ ತಮ್ಮ ಆಸನದಲ್ಲೇ ಕುಳಿತಿದ್ದ ಬಿಜೆಪಿಯ ಉಮೇಶ್ ಕತ್ತಿ ಅವರನ್ನು ಕುರಿತು “ಏ ಕತ್ತಿ ಬಂದ್ಬುಡು ಇಲ್ಲಿಗೆ’ ಎಂದು ಹೇಳಿದರು. ಶೆಟ್ಟರ್ ಸಹಿತ ಬಿಜೆಪಿ ಸದಸ್ಯರು ತಮ್ಮ ವಿರುದ್ಧ ಮುಗಿಬಿದ್ದಾಗ ಕತ್ತಿ ಅವರೊಂದಿಗೆ ಜತೆಗೂಡದೆ ಕುಳಿತಿದ್ದನ್ನು ಕಂಡು ಬಂದ್ಬುಡು ಎಂದರು. 1.08 ಕೋಟಿ ಕುಟುಂಬಗಳಿಗೆ ಅನ್ನಭಾಗ್ಯ, 30 ಲಕ್ಷ ಕುಟುಂಬಗಳಿಗೆ ಅನಿಲ ಭಾಗ್ಯ, 70 ಲಕ್ಷ ಅನ್ನದಾತರಿಗೆ ಪ್ರತಿವರ್ಷ 10 ಸಾವಿರ ರೂ. ನೀಡುವ ರೈತ ಬೆಳಕು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ವಿದ್ಯಾಸಿರಿ, ಪರಿಶಿಷ್ಟ ಜಾತಿ ವರ್ಗದ ಅಭಿವೃದ್ಧಿಗೆ 90 ಸಾವಿರ ಕೋಟಿ ರೂ. ವೆಚ್ಚ ಟೇಕಾಫ್ ಆಗದ ಸರ್ಕಾರ ಮಾಡಲು ಸಾಧ್ಯವೇ? ಇವೆಲ್ಲಾ ಸುಮ್ನೆ ಆಗೋಯ್ತದಾ ?
– ಸಿದ್ದರಾಮಯ್ಯ, ಮುಖ್ಯಮಂತ್ರಿ