ಹುಬ್ಬಳ್ಳಿ: ಪ್ರತಿಯೊಂದು ವಿಚಾರದಲ್ಲಿ ವಿವಾದಗಳು ಏಕೆ ಸೃಷ್ಟಿಯಾಗುತ್ತಿವೆ ಎಂದು ಗೊತ್ತಾಗುತ್ತಿಲ್ಲ. ಟಿಪ್ಪು ಸುಲ್ತಾನ, ವೀರ ಸಾವರ್ಕರ್ ಭಾವಚಿತ್ರಗಳನ್ನು ಕಿತ್ತು ಹಾಕುವುದು ನಡೆದಿದೆ. ಏನೇ ಆಕ್ರೋಶವಿದ್ದರೂ ಹೋರಾಟ ಹಾಗೂ ಕಾನೂನಾತ್ಮಕವಾಗಿ, ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದು ಒಳಿತು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಶಾಂತಿಯುತ ಹೋರಾಟ ಇಲ್ಲವೇ ಕಾನೂನಾತ್ಮಕ ಹೋರಾಟದ ಮೂಲಕ ಬಗೆಹರಿಸಿಕೊಳ್ಳುವುದು ಒಳಿತು. ಎಂತಹ ಸಂದರ್ಭ ಬಂದರೂ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಸಾವರ್ಕರ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿದುಕೊಂಡಿಲ್ಲ.
ಮುಸ್ಲಿಂ ಮತಗಳ ತುಷ್ಟೀಕರಣಕ್ಕೆ ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಆರೋಪ ಮಾಡುವಂತೆ ಸಾವರ್ಕರ್ ಇದ್ದಿದ್ದರೆ ಅವರಿಗೆ ಬ್ರಿಟಿಷರು ಕಾಲಾ ಪಾನಿ ಎನ್ನುವ ಕಠಿಣವಾದ ಶಿಕ್ಷೆ ನೀಡುತ್ತಿರಲಿಲ್ಲ. ಇತಿಹಾಸ ಅಧ್ಯಯನ ಮಾಡದೆ ಕಾಂಗ್ರೆಸ್ ನಾಯಕರು ಈ ರೀತಿ ಮಾತನಾಡುತ್ತಿರುವುದು ಸರಿಯಲ್ಲ. ಅತಿಯಾದ ತುಷ್ಟೀಕರಣ ಮುಳುವಾಗಲಿದೆ. ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ನೆಹರು ಭಾವಚಿತ್ರ ಬಿಟ್ಟಿರುವ ಬಗ್ಗೆ ಸರ್ಕಾರದ ಪ್ರತಿನಿಧಿಗಳು ಉತ್ತರ ನೀಡಲಿದ್ದಾರೆ ಎಂದರು.
ಖಾದಿ ಬಟ್ಟೆ ಉತ್ಪಾದನೆ, ರಫ್ತಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು ಪ್ರಧಾನಿ ಮೋದಿ. ಆ.13, 14 ಹಾಗೂ 15 ಅತ್ಯಂತ ಪ್ರಮುಖವಾದ ದಿನಗಳು. ಈ ಸಂದರ್ಭದಲ್ಲಿ ಖಾದಿ ಜತೆಗೆ ಪಾಲಿಸ್ಟರ್ ರಾಷ್ಟ್ರಧ್ವಜಗಳ ಮೂಲಕ ರಾಷ್ಟ್ರ ಭಕ್ತಿ ತೋರಲು ಅವಕಾಶ ಕೊಟ್ಟಿದ್ದಾರೆ.
ಕಾಂಗ್ರೆಸ್ ಕೇವಲ ಟೀಕಿಸುವುದಕ್ಕಾಗಿ ರಾಜಕಾರಣ ಮಾಡುತ್ತಿದೆ. ಖಾದಿಗೆ ಮಹತ್ವ ಕಡಿಮೆಯಾಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಖಾದಿ ಮೇಲೆ ಅವಲಂಬಿತರಾಗಿ ಇರುವವರಿಗೆ ಹಾಗೂ ನೇಕಾರರ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಕೇಂದ್ರ ಸರ್ಕಾರ ಯೋಜನೆ ರೂಪಿಸಬೇಕು ಎಂದರು.