ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುವಂತೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕ ಕಾಯಿದೆಗೆ (ಕೆಟಿಪಿಪಿ) ತಂದಿರುವ ತಿದ್ದುಪಡಿಯನ್ನು ಕೂಡಲೇ ವಾಪಸ್ ಪಡೆಯುವಂತೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ತಿದ್ದುಪಡಿ ಮೂಲಕ ಸರ್ಕಾರ ಶೋಷಿತ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಸರ್ಕಾರ ಕೊಡಲಿ ಪೆಟ್ಟು ಕೊಟ್ಟಿದೆ ಎಂದು ಅವರು ಕಿಡಿ ಕಾರಿದ್ದಾರೆ.
ತಮ್ಮ ನಿವಾಸದಲ್ಲಿ ಇದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ಕಾಮಗಾರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಗುತ್ತಿಗೆದಾರರಿಗೆ ಮೀಸಲು ಸೌಲಭ್ಯ ಒದಗಿಸುವ ಕಾನೂನನನ್ನು ದೇಶದ ಯಾವುದೇ ರಾಜ್ಯವೂ ಜಾರಿಗೆ ತಂದಿಲ್ಲ. ಆದರೆ, ಆ ಸೌಲಭ್ಯವನ್ನು ಬಿಜೆಪಿ ಸರ್ಕಾರ ಕಸಿದುಕೊಳ್ಳಲು ಮುಂದಾಗಿದೆ ಎಂದರು.
ಟೀಕಾಯತ್ ವಿರುದ್ಧ ಕೇಸು ಖಂಡನೀಯ: ಬೆಂಗಳೂರಿಗೆ ಮುತ್ತಿಗೆ ಹಾಕಿ ಎಂಬ ರೈತ ನಾಯಕ ಟಿಕಾಯತ್ ಅವರ ಹೇಳಿಕೆಯಲ್ಲಿ ಯಾವ ಪ್ರಚೋದನಕಾರಿ ಅಂಶವಿದೆ. ಅವರ ವಿರುದ್ಧ ಕೇಸು ದಾಖಲು ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ರೈತರು ದೆಹಲಿ ಗಡಿಯಲ್ಲಿ 120 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಕೇಸು ದಾಖಲು ಮಾಡುವ ಕೆಲಸವನ್ನು ಪ್ರಧಾನಿಯವರು ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಸಿದ್ದರಾಮಯ್ಯ ಹೇಳಿದರು.
ಸಂತ್ರಸ್ತ ಯುವತಿಗೆ ಸಲಹೆ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಯುವತಿಗೆ ರಕ್ಷಣೆ ನೀಡುವಂತೆ ಗೃಹ ಸಚಿವರಿಗೆ ಹೇಳಿದ್ದೇನೆ. ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಜೊತೆಗೂ ಮಾತನಾಡುತ್ತೇನೆ. ಯುವತಿ ಸೇರಿದಂತೆ ಎಲ್ಲ ಕನ್ನಡಿಗರಿಗೂ ರಕ್ಷಣೆ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೂ ಯುವತಿಗೆ ರಕ್ಷಣೆ ನೀಡಿಲ್ಲ. ಇದು ಸರ್ಕಾರದ ವೈಫಲ್ಯ. ಹೀಗಾಗಿ ಯುವತಿ ತನಗೆ ಹಾಗೂ ತನ್ನ ತಂದೆ, ತಾಯಿಗೆ ರಕ್ಷಣೆ ಕೇಳಿದ್ದಾರೆ. ವೀಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡುವ ಬದಲು ಎಸ್‍ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡುವಂತೆ ಸಂತ್ರಸ್ತ ಯುವತಿಗೆ ನಾನು ಸಲಹೆ ನೀಡುತ್ತೇನೆ ಎಂದರು.
ಮೀಸಲು ಸೌಲಭ್ಯಕ್ಕೆ ವಿರೋಧವಿಲ್ಲ: ಯಾವುದೇ ಸಮುದಾಯಕ್ಕೆ ಮೀಸಲು ಸೌಲಭ್ಯ ಕೊಡಲು ನನ್ನ ವಿರೋಧ ಇಲ್ಲ. ಯಾರೇ ಕೇಳಿದರೂ ವಿರೋಧಿಸುವುದಿಲ್ಲ. ಆದರೆ, ಸಂವಿಧಾನ ಪ್ರಕಾರ ಅರ್ಹರಿಗೆ ಮೀಸಲು ಸೌಲಭ್ಯ ಒದಗಿಸಬೇಕು ಎಂದರು.
ಜೆಡಿಎಸ್ ಹೊಂದಾಣಿಕೆ ರಾಜಕೀಯ: ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಹೊಂದಾಣಿಕೆ ರಾಜಕಾರಣ. ಅಲ್ಪ ಸಂಖ್ಯಾತರ ಮತಗಳನ್ನು ವಿಭಜನೆ ಮಾಡುವುದು ಇದರ ಉದ್ದೇಶ. ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಜೆಡಿಎಸ್‍ನ ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳಿ ಎಂದು ನಾನು ಬಸವಕಲ್ಯಾಣ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.