ಬೆಂಗಳೂರು: “ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಿರಲ್ಲಾ. ಈಗಲಾದರೂ ಇಳಿದು ಬಾ… ಇಳಿದು ಬಾ.. ಇಳಿದು ಬಾ..’ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ರೋಷನ್ ಬೇಗ್ ವ್ಯಂಗ್ಯಭರಿತ ಅಸಮಾಧಾನ ಹೊರ ಹಾಕಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯಗೆ ನಂದೇ ನಡೆಯಬೇಕು. ನಾನು ಹೇಳಿದಂತೆಯೇ ಆಗಬೇಕು ಎನ್ನುವ ಅಹಂಕಾರವಿದೆ. ಅವರಪ್ಪನಾಣೆ ಸಿಎಂ ಆಗುವುದಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ದರು. ನೀವೇ ಅವರನ್ನು ಮುಖ್ಯಮಂತ್ರಿ ಮಾಡಿದ್ದೀರಲ್ಲಾ’ ಎಂದು ಆರೋಪಿಸಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಸರಿಯಾಗಿದೆ. ಅವರಿಗೆ ನನ್ನ ಬೆಂಬಲವಿದೆ ಎಂದು ಹೇಳಿದ ಅವರು, ಪಕ್ಷ ವಿರೋಧಿ ಚಟುವಟಿಕೆ ಎಂದು ನನಗೆ ನೋಟಿಸ್ ನೀಡಿದ್ದಾರೆ. ನಾನು ಯಾವುದೇ ನೋಟಿಸ್‌ಗೂ ಉತ್ತರ ನೀಡುವುದಿಲ್ಲ. ಕಾಂಗ್ರೆಸ್ ತೊರೆದು ಬೇರೆ ಪಕ್ಷಕ್ಕೂ ಹೋಗುವುದಿಲ್ಲ. ನನ್ನ ಸ್ನೇಹಿತ ರಾಮಲಿಂಗಾ ರೆಡ್ಡಿಯೂ ಪಕ್ಷದಲ್ಲಿಯೇ ಇರುತ್ತಾನೆ. ಈ ಸರ್ಕಾರದಲ್ಲಿ ನಾನು ಯಾವುದೇ ಕಾರಣಕ್ಕೂ ಮಂತ್ರಿಯಾಗುವುದಿಲ್ಲ. ರಾಮಲಿಂಗಾ ರೆಡ್ಡಿ, ಎಚ್.ಕೆ. ಪಾಟೀಲ್ ಹಿರಿಯರಿದ್ದಾರೆ ಅವರಿಗೆ ಸಚಿವ ಸ್ಥಾನ ನೀಡಲಿ ಎಂದು ಆಗ್ರಹಿಸಿದರು.
ನಮಗೆ ನೋಟಿಸ್ ನೀಡಿದವರು, ಕೋಲಾರದಲ್ಲಿ ದಲಿತ ನಾಯಕ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿದವರಿಗೆ ಯಾಕೆ ನೋಟಿಸ್ ನೀಡಿಲ್ಲ? ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದವರಿಗೆ, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಸೋಲಿಗೆ ಕಾರಣರಾದವರಿಗೆ ಯಾಕೆ ನೋಟಿಸ್ ನೀಡಿಲ್ಲ ಎಂದು ಪ್ರಶ್ನಿಸಿದರು.
ಸೋಲಿಗೆ ಕಾರಣ ಹುಡುಕಲು ಸತ್ಯ ಶೋಧನಾ ಸಮಿತಿ ರಚನೆ ಮಾಡಿದ್ದಾರೆ. ಯಾರನ್ನು, ಯಾರು ಸೋಲಿಸಿದ್ದಾರೆ ಎಂಬ ಸತ್ಯ ಬಹಿರಂಗವಾಗಿಯೇ ಇದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಎಲ್ಲರೂ ಸೇರಿ ತಪ್ಪು ದಾರಿಗೆಳೆದಿದ್ದಾರೆ. ಐ ಆಮ್ ಸಾರಿ ರಾಹುಲ್ ಗಾಂಧಿ ಸರ್ ಎಂದು ರೋಷನ್ ಬೇಗ್ ಬೇಸರ ವ್ಯಕ್ತಪಡಿಸಿದರು.