Advertisement

ಕೋವಿಡ್‌-19 ನಿಯಂತ್ರಣಕ್ಕೆ ಕ್ರಮ: ಶ್ವೇತಪತ್ರಕ್ಕೆ ಸಿದ್ದರಾಮಯ್ಯ ಆಗ್ರಹ

07:07 PM Jun 28, 2020 | Sriram |

ಬೆಂಗಳೂರು: ಕೋವಿಡ್‌-19 ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ಮತ್ತು ಮಾಡಿರುವ ಖರ್ಚು ವೆಚ್ಚದ ಬಗ್ಗೆ ಶ್ವೇತ ಪತ್ರ ಹೊರಡಿಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯ ಸರ್ಕಾರ ಪಾರದರ್ಶಕ ರೀತಿಯಲ್ಲಿ ಕ್ರಮಕೈಗೊಳ್ಳದೆ ಇರುವ ಕಾರಣಕ್ಕೆ ಜನರಲ್ಲಿ ಅನುಮಾನ, ಅಸುರಕ್ಷತೆ, ಅಭದ್ರತೆ ಹುಟ್ಟಿಕೊಂಡಿವೆ. ಸರ್ಕಾರ ತಾನು ಮಾಡಿರುವ ಎಲ್ಲ ಕೆಲಸವನ್ನು ಜನತೆಯ ಮುಂದಿಟ್ಟು ಅವರಲ್ಲಿ ವಿಶ್ವಾಸವನ್ನು ತುಂಬುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.

ಕೋವಿಡ್‌-19 ನಿಯಂತ್ರಣಕ್ಕೆ ರಾಜ್ಯದ ಖಜಾನೆಯಿಂದ ಎಷ್ಟು ಖರ್ಚಾಗಿದೆ? ಅದು ಯಾವ ಉದ್ದೇಶಗಳಿಗೆ ಖರ್ಚಾಗಿದೆ? ಇದರಲ್ಲಿ ಕ್ವಾರಂಟೈನ್‌, ಚಿಕಿತ್ಸೆ, ಪಿಪಿಇ, ವೆಂಟಿಲೇಟರ್‌ ಆಮ್ಲಜನಕ ಸಿಲಿಂಡರ್‌, ಮಾಸ್ಕ್ , ಸಾನಿಟೈಸರ್‌ ಸೇರಿದಂತೆ ಮತ್ತಿತರ ವೈದ್ಯಕೀಯ ಸಲಕರಣೆ ಮತ್ತು ಚಿಕಿತ್ಸೆಗೆ ಖರ್ಚಾದ ಹಣ ಎಷ್ಟು? ಕೇಂದ್ರ ಸರ್ಕಾರದಿಂದ ಈ ವರೆಗೆ ಬಂದಿರುವ ಹಣ ಮತ್ತು ವೈದ್ಯಕೀಯ ಸಲಕರಣೆಗಳೆಷ್ಟು? ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌-19 ಚಿಕಿತ್ಸೆಗೆ ಮೀಸಲಿಟ್ಟಿರುವ ಹಾಸಿಗೆಗಳೆಷ್ಟು? ಯಾವ ಮಾನದಂಡದ ಆಧಾರದಲ್ಲಿ ಖಾಸಗಿ ಆಸ್ಪತ್ರೆಗಳ ಶುಲ್ಕ ನಿಗದಿಪಡಿಸಿದೆ? ಎಂಬ ಎಲ್ಲ ವಿವರಗಳನ್ನು ರಾಜ್ಯ ಸರ್ಕಾರ ಜನತೆಯ ಮುಂದಿಡಬೇಕು ಎಂದು ಆಗ್ರಹಿಸಿದ್ದಾರೆ.
ನಾನು ಹಲವಾರು ಪತ್ರಗಳನ್ನು ಬರೆದು ವಿವರವನ್ನು ಕೇಳಿದರೂ ಇಲಾಖೆಗಳು ಸರಿಯಾದ ಮಾಹಿತಿ ಕೊಡುತ್ತಿಲ್ಲ.

ಈ ರೀತಿ ಮಾಹಿತಿಯನ್ನು ನಿರಾಕರಿಸುವುದು ಹಕ್ಕುಚ್ಯುತಿಯಾಗುತ್ತದೆ. ಇಷ್ಟು ಮಾತ್ರವಲ್ಲ ಸರ್ಕಾರದ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿಸುತ್ತದೆ. ಈ ಬಗ್ಗೆ ಸಂಪೂರ್ಣ ವಿವರವನ್ನು ಶ್ವೇತಪತ್ರದ ಮೂಲಕ ಜನರ ಮುಂದಿಡಬೇಕು .

ರಾಜ್ಯದ 9 ಜಿಲ್ಲೆಗಳಲ್ಲಿ ಮಾರ್ಚ್‌ 23ರಂದು ಲಾಕ್‌ ಡೌನ್‌ ಘೋಷಿಸಲಾಯಿತು. ಆಗ ರಾಜ್ಯದಲ್ಲಿ ಒಂದೇ ಒಂದು ಸಾವು ಸಂಭವಿಸಿರಲಿಲ್ಲ, 26 ಮಂದಿ ಸೋಂಕಿತರು ಮಾತ್ರ ಇದ್ದರು. ಈಗಿನ ವರದಿಯ ಪ್ರಕಾರ ರಾಜ್ಯದ ಸೋಂಕಿತರ ಸಂಖ್ಯೆ 11,923, ಸಾವಿಗೀಡಾದವರ ಸಂಖ್ಯೆ 191 ದಾಟಿದೆ. ಆಗ ಬೆಂಗಳೂರು ಮತ್ತು ಕೆಲವು ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗಿದ್ದ ಕೋವಿಡ್‌-19 ಸೋಂಕು ಈಗ ಹಳ್ಳಿ-ಊರುಗಳೆನ್ನದೆ ವ್ಯಾಪಕವಾಗಿ ಹರಡಿದೆ.

Advertisement

ಕೋವಿಡ್‌-19 ದಿಡೀರನೇ ಬಂದೆರಗಿಲ್ಲ, ಹಂತಹಂತವಾಗಿ ಕಾಣಿಸಿಕೊಂಡಿದೆ. ಕಳೆದ ಮೂರು ತಿಂಗಳ ಅವಧಿಯನ್ನು ಕೇವಲ ಲಾಕ್‌ ಡೌನ್‌ ಹೇರಿಕೆ ಮತ್ತು ಹಿಂತೆಗೆತದಲ್ಲಿ ವ್ಯರ್ಥವಾಗಿ ಕಳೆದ ರಾಜ್ಯ ಸರ್ಕಾರ ಅದನ್ನು ಎದುರಿಸಲು ಯಾವ ತಯಾರಿಯನ್ನೂ ನಡೆಸಿಲ್ಲ. ಮೂರು ತಿಂಗಳ ಅಮೂಲ್ಯ ಸಮಯವನ್ನು ಸರ್ಕಾರ ತನ್ನ ಬೇಜವಾಬ್ದಾರಿತನದಿಂದ ವ್ಯರ್ಥಮಾಡಿದೆ. ಈ ನಿಷ್ಕ್ರಿಯತೆಯ ಫಲವನ್ನು ರಾಜ್ಯದ ಜನತೆ ಅನುಭವಿಸಿದಂತಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್‌-19 ಸೋಂಕು ಯಾವ ನಿಯಂತ್ರಣವೂ ಇಲ್ಲದೆ ತೀವ್ರಗತಿಯಲ್ಲಿ ಹರಡುತ್ತಿದ್ದು, ಲಾಕ್‌ ಡೌನ್‌ ನಲ್ಲಿ ಸುರಕ್ಷಿತವಾಗಿದ್ದ ಹಳ್ಳಿಗಳಲ್ಲೂ ಈಗ ದಿನದಿಂದ ದಿನಕ್ಕೆ ಸೋಂಕು ವ್ಯಾಪಕವಾಗುತ್ತಿದೆ. ರಾಜ್ಯ ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಂಡಿರುವ ರಾಜ್ಯದ ಜನತೆ ಕೋವಿಡ್‌-19 ಭೀತಿಯಿಂದ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ತಮ್ಮನ್ನು ಕೋವಿಡ್‌-19 ಮಾರಿಯಿಂದ ರಕ್ಷಿಸಬಹುದೆಂಬ ವಿಶ್ವಾಸ ಇಲ್ಲದಂತಾಗಿದೆ. ಈಗಾಗಲೇ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ತುಂಬಿ ಹೋಗಿವೆ. ಖಾಸಗಿ ಆಸ್ಪತ್ರೆಗಳು ಸರ್ಕಾರ ಒಪ್ಪಿಕೊಂಡಿರುವ ಶುಲ್ಕಕ್ಕೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಸರ್ಕಾರ ಅವರನ್ನು ಒಪ್ಪಿಸಬೇಕು, ಇಲ್ಲವೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಎರಡನ್ನೂ ಮಾಡದೆ ಕೈಕಟ್ಟಿ ಕುಳಿತರೆ ಜನರೇನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಕಳೆದ 15 ದಿನಗಳಿಂದ ಪರೀಕ್ಷೆ ಮಾಡುವ ಪ್ರಮಾಣ 16 ಸಾವಿರದಿಂದ ಸರಾಸರಿ 11000 ಗಳಿಗೆ ಇಳಿದಿದೆ. ಸೋಂಕು ಸಮುದಾಯಕ್ಕೆ ವ್ಯಾಪಿಸಿಕೊಂಡಿರುವ ಭೀತಿ ಇದೆ. ರಾಜ್ಯದಲ್ಲಿ 9200 ವೆಂಟಿಲೇಟರ್‌ ತುರ್ತಾಗಿ ಅಗತ್ಯವಿದೆ. ಆದರೆ, ಈಗ ಲಭ್ಯಇರುವುದು ಕೇವಲ 1500 ಮಾತ್ರ. ಕೇಂದ್ರವನ್ನು 33 ಸಾವಿರ ವೆಂಟಿಲೇಟರ್‌ ಕಳಿಸಿ ಎಂದು ಕೇಳಿಕೊಂಡರೆ ಅವರು ಇಲ್ಲಿಯ ವರೆಗೆ ಕಳಿಸಿರುವುದು ಕೇವಲ 90 ಮಾತ್ರ. ಆಕ್ಸಿಜನೇಟೆಡ್‌ ವೆಂಟಿಲೇಟರ್‌ ಕೇವಲ 7 ಸಾವಿರ ಮಾತ್ರ ಇವೆ. ಅಗತ್ಯ ಇರುವುದು 20 ಸಾವಿರ ವೆಂಟಿಲೇಟರ್‌ ಎಂದು ಹೇಳಲಾಗಿದೆ.

ಮೆಡಿಕಲ್‌ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ, ಮಾರುಕಟ್ಟೆ ದರಗಳಿಗಿಂತ ಎರಡು ಪಟ್ಟು ಹೆಚ್ಚಿಗೆ ಪಾವತಿಸಿ ಖರೀದಿಸಲಾಗಿದೆ. ಇದಕ್ಕೆ ಸಮರ್ಥನೆಗಳಿಲ್ಲ ಎಂದು ಆರ್ಥಿಕ ಇಲಾಖೆ ಟಿಪ್ಪಣಿ ಇದೆ. ಈ ರೀತಿಯ ಹಣದ ಮೊತ್ತ ಸುಮಾರು 3300 ಕೋಟಿಗಳೆಂಬ ಆರೋಪ ಕೇಳಿಬರುತ್ತಿದೆ.

ರಾಜ್ಯ ಸರ್ಕಾರ ತಕ್ಷಣ ಕೋವಿಡ್‌-19 ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ಶ್ವೇತಪತ್ರವನ್ನು ಹೊರಡಿಸಿ ನಿಜ ಪರಿಸ್ಥಿತಿಯನ್ನು ಜನರ ಮುಂದಿಟ್ಟು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೋಂಕು ನಿಯಂತ್ರಣದಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರ ಇದೇ ರೀತಿಯ ಉದಾಸೀನವನ್ನು ಮುಂದುವರಿಸಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next