Advertisement

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಭರ್ಜರಿ ರೋಡ್‌ ಶೋ

12:20 PM Mar 30, 2018 | Team Udayavani |

ಮೈಸೂರು: ಹೈವೋಲ್ಟೆಜ್‌ ಕ್ಷೇತ್ರ ಎಂದೇ ರಾಜ್ಯದ ಗಮನಸೆಳೆದಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಭರ್ಜರಿ ರೋಡ್‌ ಶೋ ನಡೆಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ ಮತಬೇಟೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

2008, 2013ರಲ್ಲಿ ವರುಣಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿದ್ದರಾಮಯ್ಯ ಅವರು, ಈ ಚುನಾವಣೆಯಲ್ಲಿ ತಮಗೆ ರಾಜಕೀಯವಾಗಿ ಪುನರ್‌ ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುತ್ತಿರುವುದು ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳಲ್ಲಿ ಹೊಸ ಹುರುಪು ತಂದಿದೆ.

ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ತವರು ಜಿಲ್ಲೆಗೆ ಐದು ದಿನಗಳ ಪ್ರವಾಸ ಬಂದಿರುವ ಸಿದ್ದರಾಮಯ್ಯ, ಮೊದಲ ದಿನವೇ ತಮ್ಮ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ರೋಡ್‌ ಶೋ ನಡೆಸಿ ಮತಬೇಟೆ ಆರಂಭಿಸಿದರು.

ಅಭಿವೃದ್ಧಿ ಭರವಸೆ: ಗುರುವಾರ ಬೆಳಗ್ಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಕಡಕೊಳ ಗ್ರಾಮಕ್ಕೆ ತೆರಳಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡರು. ನಂತರ, ಹೊರವರ್ತುಲ ರಸ್ತೆ ಮಾರ್ಗವಾಗಿ ಸಾತಗಳ್ಳಿ ಬಳಿಯ ಭಾರತ್‌ನಗರದಿಂದ ರೋಡ್‌ ಶೋ ಆರಂಭಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮನಕ್ಕಾಗಿ ಬೆಳಗ್ಗಿನಿಂದಲೇ ಕಾದಿದ್ದ ನೂರಾರು ಅಲ್ಪ ಸಂಖ್ಯಾತ ಮುಖಂಡರು ಹಾರ ಹಾಕಿ ಬರಮಾಡಿಕೊಂಡರು. ಮಹಿಳೆಯರು ಬಡಾವಣೆಯ ಮೂಲ ಸೌಕರ್ಯ ಅಭಿವೃದ್ಧಿಪಡಿಸುವಂತೆ ಮನವಿ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಸಿದ್ದರಾಮಯ್ಯ, ಚುನಾವಣೆ ಬಳಿಕ ಬಡಾವಣೆ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿ ಮುನ್ನಡೆದರು.

Advertisement

ಭರ್ಜರಿ ರೋಡ್‌ ಶೋ: ಗ್ರಾಮದ ಮುಖ್ಯದ್ವಾರ ಕಮಾನು ಗೇಟ್‌ ಬಳಿಯಿಂದ ತಮಟೆ, ನಗಾರಿ ಸದ್ದಿನೊಂದಿಗೆ ನೂರಾರು ಮಂದಿ ಜೈಕಾರ ಕೂಗುತ್ತಾ ಮುನ್ನಡೆದರೆ ಅವರ ಹಿಂದೆ ಸಿದ್ದರಾಮಯ್ಯ, ಗ್ರಾಮದ ರಸ್ತೆಯ ಇಕ್ಕೆಲಗಳಲ್ಲಿ  ನಿಂತಿದ್ದವರಿಗೆ ಕೈ ಮುಗಿಯುತ್ತಾ ಮುಂದೆ ಸಾಗಿದರು.

ಪುತ್ರ ಡಾ.ಯತೀಂದ್ರ ಜತೆಗಿದ್ದರು. ಗ್ರಾಮದ ಮುಖ್ಯರಸ್ತೆಯಲ್ಲಿದ್ದ ಮದಕರಿನಾಯಕ ಸಂಘದ ನಾಮಫ‌ಲಕ, ಮಹದೇಶ್ವರ ಸಂಘದ ನಾಮಫ‌ಲಕ, ಮಹರ್ಷಿ ವಾಲ್ಮೀಕಿ ಸಂಘದ ನಾಮಫ‌ಲಕಕ್ಕೆ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು.

ಗ್ರಾಮದ ಮುಖಂಡರು ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿ ಭಾರೀ ಗಾತ್ರದ ಹೂವಿನ ಹಾರ ಹಾಕಿ ಸನ್ಮಾನಿಸಿದರು. ರಮ್ಮನಹಳ್ಳಿಯ ಗ್ರಾಮದೇವತೆ ಸೇರಿದಂತೆ ಮೂರು ದೇವಸ್ಥಾನಗಳಿಗೆ ಗ್ರಾಮಸ್ಥರು ಸಿದ್ದರಾಮಯ್ಯ ಅವರನ್ನು ಕರೆದೊಯ್ದರು.

ಈ ದೇವಸ್ಥಾನದಲ್ಲಿ ಮಂಗಳಾರತಿ ಮಾಡಿದ ಬಳಿಕ ಗ್ರಾಮಸ್ಥರ ಒತ್ತಾಯಕ್ಕೆ ಘಂಟೆ ಬಾರಿಸಿದರು. ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಳಿಸಿದ್ಧನಹುಂಡಿ, ಹಂಚ್ಯಾ, ಗಳಿಗರಹುಂಡಿ, ಮೆಲ್ಲಹಳ್ಳಿ , ಉದೂರು ಗ್ರಾಮಗಳಲ್ಲಿ ಭರ್ಜರಿ ರೋಡ್‌ ಶೋ ನಡೆಸಿದರು.

ರೋಡ್‌ಶೋ ವೇಳೆ ಹತ್ತಾರು ವಾಹನಗಳು ಮುಖ್ಯಮಂತ್ರಿಯವರನ್ನು ಹಿಂಬಾಲಿಸಿದರೆ, ಸ್ಥಳೀಯ ಮುಖಂಡರ ದಂಡೇ ಸಿದ್ದರಾಮಯ್ಯ ಅವರ ಬೆನ್ನಹಿಂದೆ ಇತ್ತು. ಮಾಜಿ ಶಾಸಕ ಎಂ.ಸತ್ಯನಾರಾಯಣ, ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವು,

ತಾಪಂ ಮಾಜಿ ಅಧ್ಯಕ್ಷ ಸಿ.ಎನ್‌.ಮಂಜೇಗೌಡ, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್‌,ಮಾಜಿ ಮೇಯರ್‌ಗಳಾದ ಅನಂತು, ನಾರಾಯಣ, ಆರೀಫ್ಹುಸೇನ್‌, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ, ಜಿಪಂ ಸದಸ್ಯ ರಾಕೇಶ್‌ ಪಾಪಣ್ಣ ಸೇರಿದಂತೆ ಹಲವು ಮುಖಂಡರು ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next