ಬಾಗಲಕೋಟೆ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿ ಗಮನ ಸೆಳೆದಿದ್ದ ಬಾದಾಮಿ ಕ್ಷೇತ್ರದಲ್ಲಿ ಆಗ ಪರಸ್ಪರ ಎದುರಾಳಿಯಾಗಿ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಹಾಗೂ ಶ್ರೀರಾಮುಲು ಅವರು ಶುಕ್ರವಾರ ಬಾದಾಮಿ ಕ್ಷೇತ್ರದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.
ಚುನಾವಣೆ ಬಳಿಕ ಈ ಇಬ್ಬರು ನಾಯಕರು ಬಾದಾಮಿ ಕ್ಷೇತ್ರಕ್ಕೆ ಬಂದರೂ, ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಪರಸ್ಪರ ಟೀಕೆ, ರಾಜಕೀಯ ಆರೋಪದಲ್ಲಿ ತೊಡಗಿದ್ದರು. ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಶ್ರೀರಾಮುಲು, ಸಿದ್ದರಾಮಯ್ಯ ವಿರುದ್ಧ ಕೇವಲ 1696 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆಗ ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಷಡ್ಯಂತ್ರ ಮಾಡಿತ್ತು. ಅದಕ್ಕಾಗಿಯೇ ಶ್ರೀರಾಮುಲು ಅವರನ್ನು ಬಾದಾಮಿಗೆ ನಿಲ್ಲಿಸಿದ್ದರು. ಬಾದಾಮಿ ಬನಶಂಕರಿದೇವಿ, ಈ ಕ್ಷೇತ್ರದ ಜನ ನನ್ನ ಕೈ ಬಿಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದರು.
ಇದನ್ನೂ ಓದಿ:ಸಮಾಜ-ಭಕ್ತರ ದಾರಿ ತಪ್ಪಿಸ್ತಿದೆ ಕೆಎಲ್‌ಇ : ಶ್ರೀ
ಇದಾದ ಬಳಿಕ ಇಬ್ಬರು ನಾಯಕರೂ ಹಲವು ಬಾರಿ ಬಾದಾಮಿಗೆ ಬಂದರೂ, ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಶುಕ್ರವಾರ ಬಾದಾಮಿ ಮತಕ್ಷೇತ್ರದ ಮುಷ್ಠಿಗೇರಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ 19.33 ಕೋಟಿ ವೆಚ್ಚದ ಡಾ.ಅಂಬೇಡ್ಕರ ವಸತಿ ಶಾಲೆಯ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಇಬ್ಬರೂ ಒಟ್ಟಿಗೆ ಭಾಗವಹಿಸಿದ್ದಾರೆ.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, “ಬನ್ರಿ ಶ್ರೀರಾಮುಲು, ಬಾದಾಮಿ ಕ್ಷೇತ್ರಕ್ಕೆ ಸ್ವಾಗತ. ನಮ್ಮ ಕ್ಷೇತ್ರಕ್ಕೆ ಹೆಚ್ಚು ವಸತಿ ಶಾಲೆ ಕೊಡ್ರಿ” ಎಂದರು. ಕಾರ್ಯಕ್ರಮದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಕೂಡ ಇದ್ದರು.