Advertisement

ಆದಾನಿ ಕಂಪನಿಯಿಂದ ವಿದ್ಯುತ್ ಖರೀದಿ ನಿಲ್ಲಿಸಿ : ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

06:52 PM Feb 12, 2021 | Team Udayavani |

ಬಾಗಲಕೋಟೆ : ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೂ ಆದಾನಿ ಕಂಪನಿಯಿಂದ 1 ಸಾವಿರ ಮೇಗಾವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಇದನ್ನ ನಿಲ್ಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.

Advertisement

ಬಾದಾಮಿಯಲ್ಲಿ ಸುಮಾರು 75 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ಕಾರ್ಯಕ್ರಮದಲ್ಲಿ ಡಿಸಿಎಂ ಕಾರಜೋಳ ಎದುರೇ ಸಿದ್ದರಾಮಯ್ಯನವರು ಸರ್ಕಾರಕ್ಕೆ ಈ ಒತ್ತಾಯ ಮಾಡಿದರು.

ರಾಜ್ಯಕ್ಕೆ 11 ಸಾವಿರ ಮೇಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಆದರೆ, ಈಗ ನಮ್ಮಲ್ಲಿ 30,098 ಮೇ.ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದೆ. ಆದರೂ ಆದಾನಿ ಕಂಪನಿಯಿಂದ 1030 ಮೆ.ವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಿ ಎಂದು ನಾನು ಅಧಿಕಾರಿಗಳಿಗೆ ಹೇಳಿದ್ದೆ. ಆದರೆ, ಆದಾನಿ ಕಂಪನಿ ಜತೆಗೆ ವಿದ್ಯುತ್ ಖರೀದಿಗೆ 2024ರ ವರೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆ ಬಳಿಕವಾದರೂ ವಿದ್ಯುತ್ ಖರೀದಿ ನಿಲ್ಲಿಸಬೇಕು ಎಂದರು.

14 ಸಾವಿರ ಮೆ.ವ್ಯಾಟ್ ಇತ್ತು :

ನಾನು 2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವಾಗ 118 ಮೆ.ವ್ಯಾಟ್ ಪವನ ಶಕ್ತಿ ವಿದ್ಯುತ್ ಉತ್ಪಾದನೆ ಇತ್ತು. ಅದರನ್ನು 5 ಸಾವಿರ ಮೆ.ವ್ಯಾಟ್‌ಗೆ ಏರಿಸಿದ್ದೆ. ಆಗ ಕೇವಲ 14 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ನಮ್ಮ ರಾಜ್ಯದಲ್ಲಿ ಆಗುತ್ತಿತ್ತು. ಈಗ 30,098 ಮೆ.ವ್ಯಾಟ್‌ಗೆ ಏರಿಕೆಯಾಗಿದೆ. ನಮ್ಮ ರಾಜ್ಯಕ್ಕೆ 11 ಸಾವಿರ ಮೆ.ವ್ಯಾಟ್ ಮಾತ್ರ ವಿದ್ಯುತ್ ಬೇಡಿಕೆ ಇದೆ. ಉಳಿದ ವಿದ್ಯುತ್ ಬೇರೆ ಬೇರೆ ರಾಜ್ಯಕ್ಕೆ ಮಾರಾಟ ಮಾಡುವ ಶಕ್ತಿ-ಸಾಮರ್ಥ್ಯ ನಮ್ಮ ರಾಜ್ಯಕ್ಕಿದೆ. ಆದರೂ, ವಿವಿಧ ಮೂಲಗಳಿಂದ ವಿದ್ಯುತ್ ಖರೀದಿ ಮುಂದುವರೆದಿದೆ ಎಂದು ಹೇಳಿದರು.

Advertisement

ಉತ್ಪಾದನೆ ನಿಲ್ಲಿಸಿದ್ದೇಕೆ :

ನಮ್ಮ ರಾಜ್ಯದಲ್ಲಿ 30,098 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದ್ದು, ರಾಯಚೂರಿನ ಥರ್ಮಲ್ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿ, ಬೇರೆಡೆಯಿಂದ ಖರೀದಿ ಮಾಡಲಾಗುತ್ತಿದೆ. ರಾಯಚೂರಿನಲ್ಲಿ ಉತ್ಪಾದನೆ ನಿಲ್ಲಿಸಿದಂತೆ, ಬೇರೆ ಬೇರೆ ವಲಯದಲ್ಲೂ ಉತ್ಪಾದನೆ ನಿಲ್ಲಿಸಲಾಗಿದೆ. ಅದನ್ನು ಪುನಾರಂಭಿಸಿ, ವಿದ್ಯುತ್ ಖರೀದಿ ಸಂಪೂರ್ಣ ನಿಲ್ಲಿಸಬೇಕು ಎಂದರು.

ವಿದ್ಯುತ್ ದರ ಕಡಿಮೆ ಮಾಡಿ :

ಸದ್ಯ ರಾಜ್ಯದಲ್ಲಿ ಒಂದು ಯೂನಿಟ್ ವಿದ್ಯುತ್‌ಗೆ 8 ರೂ. ಆಗಿದೆ. ಇದರಿಂದ ಜನರಿಗೆ ಹೊರೆಯಾಗುತ್ತದೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾದರೂ ದರ ಏಕೆ ಹೆಚ್ಚಿಸಿದ್ದೀರಿ. ದರ ಕಡಿಮೆ ಮಾಡಿ. ರೈತರಿಗೆ ಈಗ ಕೊಡುವ ವಿದ್ಯುತ್‌ನಲ್ಲಿ 2 ಗಂಟೆ ಹೆಚ್ಚಿಸಿ. ಅವರು ಈ ದೇಶಕ್ಕೆ ಆಹಾರ ಉತ್ಪಾದನೆ ಮಾಡಿಕೊಡುತ್ತಾರೆ. ಆಹಾರ ಉತ್ಪಾದನೆ ಹೆಚ್ಚಳವಾದಾಗ ಮಾತ್ರ ದೇಶದ ಆರ್ಥಿಕ ವ್ಯವಸ್ಥೆ ಹೆಚ್ಚುತ್ತದೆ ಎಂದು ಹೇಳಿದರು.

ಕಾರಜೋಳ-ನಾನು ಜತೆಗೇ ಇದ್ದವರು : ಉತ್ತಮ ಬಾಂಧವ್ಯ ಇದೆ

ಡಿಸಿಎಂ ಗೋವಿಂದ ಕಾರಜೋಳ ಎಲ್ಲ ಸಚಿವರಂತೆ ಅಲ್ಲ. ಅವರು, ನಾನು ಜನತಾದಳದಲ್ಲಿ ಒಟ್ಟಿಗೇ ಇದ್ದವರು. ಹೀಗಾಗಿ ಅವರೊಂದಿಗೆ ನನಗೆ ಉತ್ತಮ ಬಾಂಧವ್ಯ ಇಂದಿಗೂ ಇದೆ. ನನ್ನ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಕೊಟ್ಟಿದ್ದಾರೆ. ಅವರಿಗೆ ವಿಶೇಷ ಧನ್ಯವಾದಗಳು. ಮಾರ್ಚ್ ಒಳಗೆ ಇನ್ನಷ್ಟು ಅನುದಾನ ಕೊಡಬೇಕು. ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಬೇಕು ಎಂದು ಸಿದ್ದರಾಮಯ್ಯ, ವೇದಿಕೆಯಲ್ಲಿದ್ದ ಕಾರಜೋಳಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next