ಸಿದ್ದಾಪುರ: ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಮದ್ಯದ ಅಂಗಡಿಯೊಂದು ಸಿದ್ದಾಪುರಕ್ಕೆ ಸ್ಥಳಾಂತರಗೊಳ್ಳುತ್ತಿರುವುದಕ್ಕೆ ಸಿದ್ದಾಪುರ ನಾಗರಿಕರು ಹಾಗೂ ಜನಜಾಗೃತಿ ವೇದಿಕೆಯವರು ಅಬಕಾರಿ ಇಲಾಖೆಗೆ ದೂರು ನೀಡಿದರು. ಈ ಹಿನ್ನೆಲೆಯಲ್ಲಿ ಜು.19ರಂದು ಅಬಕಾರಿ ಇಲಾಖೆ ಎರಡನೇ ಬಾರಿಗೆ ರಾಜ್ಯ ಹೆದ್ದಾರಿಯಿಂದ ಸ್ಥಳಾಂತರದ ಸ್ಥಳಕ್ಕೆ ಇರುವ ದೂರದ ವಿಸ್ತೀರ್ಣದ ಬಗ್ಗೆ ಸರ್ವೆ ನಡೆಸಲು ಮುಂದಾದಾಗ ಸ್ಥಳೀಯ ಮುಖಂಡರು ಸರ್ವೆಗೆ ಆಕ್ಷೇಪಿಸಿ, ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸರ್ವೆ ನಡೆಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಅಬಕಾರಿ ಕುಂದಾಪುರ ವೃತ್ತ ನಿರೀಕ್ಷಕ ರಾಜೇಶ್ ನಾಯಕ್ ಅವರು ಮಾತನಾಡಿ, ಸ್ಥಳೀಯರ ವಿರೋಧ ಹಾಗೂ ಸರ್ವೆಯ ಬಗ್ಗೆ ಅಸಮಾಧಾನ ಇರುವುದಾದರೆ ಮೇಲಿನ ಅಧಿಕಾರಿಗಳ ಗಮನಕ್ಕೆ ತರುವುದರೊಂದಿಗೆ, ಅವರ ನಿರ್ದೇಶನದಂತೆ ಕಾರ್ಯ ನಿರ್ವಹಿಸಲಾಗುದು ಎಂದು ಹೇಳಿದರು.
ಘಟನೆ: ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಮದ್ಯದ ಅಂಗಡಿಯೊಂದು ಸಿದ್ದಾಪುರದ ಸಿದ್ದಾಪುರ- ಅಮಾಸೆಬೈಲು ರಸ್ತೆಯ ಬಳಿ ಸ್ಥಳಾಂತರಕ್ಕೆ ಸಿದ್ದತೆ ನಡೆಸುತ್ತಿತ್ತು. ಅದರಂತೆ ಸ್ಥಳಾಂತರಕ್ಕೆ ಕಟ್ಟಡ ಕೂಡ ತರಾತುರಿಯಲ್ಲಿ ಸಿದ್ಧತೆ ಕೂಡ ಮಾಡಿಕೊಂಡಿತ್ತು. ಇದಕ್ಕೆ ಸ್ಥಳೀಯ ಮುಖಂಡರು ಹಾಗೂ ಜನಜಾಗೃತಿ ವೇದಿಕೆಯವರು ಆಕ್ಷೇಪಿಸಿ, ಸಿದ್ದಾಪುರದಲ್ಲಿ ಈಗಾ ಗಲೇ ಮೂರು ಮದ್ಯದ ಅಂಗಡಿಗಳಿವೆ. ಇನ್ನೊಂದು ಮದ್ಯದ ಅಂಗಡಿ ಸಿದ್ದಾಪುರಕ್ಕೆ ಬರುವುದರಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂದು ಅಬಕಾರಿ ಇಲಾಖೆಗೆ ಸಿದ್ದಾಪುರ ನಾಗರಿಕರು ಹಾಗೂ ಜನಜಾಗೃತಿ ವೇದಿಕೆಯವರು ಕುಂದಾಪುರ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಅವರ ಮೂಲಕ ದೂರು ನೀಡಿದ್ದರು. ಆದರೂ ಕೂಡ ಅಬಕಾರಿ ಇಲಾಖೆ ಸ್ಥಳಾಂತರಕ್ಕೆ ಪರವಾನಿಗೆ ಕೊಡಲು ಮುಂದಾಗಿದ್ದರಿಂದ ಸ್ಥಳೀಯರು ಸರ್ವೆಗೆ ಆಕ್ಷೇಪಿಸಿದರು.
ಸರ್ವೆಯ ಸಂದರ್ಭದಲ್ಲಿ ತಾ. ಪಂ. ಸದಸ್ಯ ಎಸ್.ಕೆ. ವಾಸುದೇವ ಪೈ, ಸಿದ್ದಾಪುರ ಗ್ರಾ. ಪಂ. ಸದಸ್ಯರಾದ ಎಚ್. ಸುಧಾಕರ ಶೆಟ್ಟಿ, ವೈ.ಎಸ್. ಶೆಟ್ಟಿ, ಲ್ಯಾಂಪ್ಸ್ ಸೊಸೈಟಿಯ ನಿರ್ದೇಶಕ ಶೇಖರ ನಾಯ್ಕ, ಜನಜಾಗೃತಿ ವೇದಿಕೆಯ ಸಿದ್ದಾಪುರ ವಲಯ ಅಧ್ಯಕ್ಷ ಕೆ.ಎಸ್. ಮಡಿವಾಳ, ಗೋಪಾಲ ಕಾಂಚನ್, ಸಿದ್ದಾಪುರ ಗ್ರಾ. ಪಂ. ಸಿಬಂದಿ ಉದಯ ಮಡಿವಾಳ, ಕುಂದಾಪುರ ಅಬಕಾರಿ ಉಪ ನಿರೀಕ್ಷಕ ಬಾಲಕೃಷ್ಣ ಹಾಗೂ ಸಿಬಂದಿ ಉಪಸ್ಥಿತರಿದ್ದರು.