ಸಿದ್ದಾಪುರ: ಜನ್ಸಾಲೆ ಬಳಿ ಆ. 20ರಂದು ನಡೆದ ಸರಣಿ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಆಟೋರಿಕ್ಷಾ ಚಾಲಕ ಸಿದ್ದಾಪುರ ಗ್ರಾಮದ ಗೆಧ್ದೋಡು ಅಶೋಕ ಕುಲಾಲ (38) ಅವರು ಚಿಕಿತ್ಸೆ ಫಲಕಾರಿಯಾಗದೆ ಆ. 22ರಂದು ಮೃತ ಪಟ್ಟರು.
ಸಿದ್ದಾಪುರದಿಂದ ಜನ್ಸಾಲೆ ಕಡೆಗೆ ಅತೀ ವೇಗವಾಗಿ ಬಂದ ಬೊಲೆರೋ ಜೀಪ್ ಜನ್ಸಾಲೆ ಬಳಿ ಹಠಾತ್ ವರ್ಕ್ಶಾಪ್ ಕಡೆಗೆ ತಿರುಗಿಸಿದ ಪರಿಣಾಮ ಆ. 20ರಂದು ಸರಣಿ ಅಪಘಾತ ಸಂಭವಿಸಿದೆ. ಆಟೋರಿಕ್ಷಾ ಬೊಲೆರೋ ವಾಹನಕ್ಕೆ ಢಿಕ್ಕಿ ಹೊಡೆದ ಅನಂತರ ಬೈಕಿಗೆ ಢಿಕ್ಕಿ ಹೊಡೆದಿದೆ.
ಸರಣಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಆಟೋರಿಕ್ಷಾ ಚಾಲಕ ಅಶೋಕ ಕುಲಾಲ ಅವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟರು. ಬೈಕ್ನ ಹಿಂಬದಿ ಸವಾರ ಸುಧೀರ ಕುಲಾಲ ಗಂಭೀರವಾಗಿ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಬೈಕ್ ಚಾಲಕ ಹರೀಶ್ ಕುಲಾಲ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತ ಅಶೋಕ ಕುಲಾಲ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು ಟೂರಿಸ್ಟ್ ವಾಹನ ಹಾಗೂ ಆಟೋರಿಕ್ಷಾವನ್ನು ಹೊಂದಿದ್ದರು. ಟೂರಿಸ್ಟ್ ವಾಹನಕ್ಕೆ ಬಾಡಿಗೆ ಇಲ್ಲದಿದ್ದಾಗ, ಆಟೋರಿಕ್ಷಾ ಓಡಿಸುತ್ತಿದ್ದರು. ಅವರ ನಿಧನದಿಂದ ಮನೆಯ ಆಧಾರಸ್ತಂಭವೇ ಕಳಚಿದಂತಾಗಿದೆ.
ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.