Advertisement

ಸಿದ್ದಾಪುರ ಪೇಟೆಗೆ ಬೇಕಿದೆ ಸುಸಜ್ಜಿತ ಸರ್ಕಲ್‌

10:45 PM Sep 09, 2019 | Sriram |

ಸಿದ್ದಾಪುರ: ಕುಂದಾಪುರ ತಾಲೂಕಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರ ಸಿದ್ದಾಪುರ. ಘಟ್ಟದ ಮೇಲಿನ ಹಾಗೂ ಕೆಳಗಿನ ಪ್ರದೇಶಗಳನ್ನು ಬೆಸೆಯುವ ಪ್ರಮುಖ ನಗರ ಇದಾಗಿದೆ. ಹತ್ತಾರು ಹಳ್ಳಿಗಳ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಸಿದ್ದಾಪುರ ಮೂಲ ಸೌಕರ್ಯದಿಂದ ಸೊರಗುತ್ತಿದೆ.

Advertisement

ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಜನರು ಹಾಗೂ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಾಹನ ಓಡಾಟ ಇರುವ ಸಿದ್ದಾಪುರ ಪೇಟೆಗೆ ಬಹು ಮುಖ್ಯವಾಗಿ ಸುಸಜ್ಜಿತ ಸರ್ಕಲ್‌ ಬೇಕಾಗಿದೆ. ಅದರ ನಿರ್ಮಾಣಕ್ಕಾಗಿ ಹೋರಾಟದ ಮಾಡುವ ಬಗೆಗಿನ ಚರ್ಚೆ ಜನರಿಂದ ಕೇಳಿಬರುತ್ತಿದೆ.

ಪ್ರತಿನಿತ್ಯ ಟ್ರಾಫಿಕ್‌ ಜಾಮ್‌
ಸಿದ್ದಾಪುರ ಪೇಟೆಗೆ ಒಂದು ಕಡೆಯಿಂದ ಕುಂದಾಪುರ ಹಾಗೂ ಶಿವಮೊಗ್ಗ ರಾಜ್ಯ ಹೆದ್ದಾರಿ ಬಂದು ಸೇರಿದರೆ, ಇನ್ನೊಂದು ಕಡೆಯಿಂದ ಮಂಗಳೂರು ಹಾಗೂ ಉಡುಪಿ ಜಿಲ್ಲೆಯನ್ನು ಶಿವಮೊಗ್ಗ ಜಿಲ್ಲೆಗೆ ಬೆಸೆಯುವ ಪ್ರಮುಖ ಹೆದ್ದಾರಿ ಬಂದು ಸೇರುತ್ತದೆ. ಇದರ ಪರಿಣಾಮ ಪೇಟೆಯ ಸರ್ಕಲ್‌ನಲ್ಲಿ ವಾಹನಗಳ ದಟ್ಟಣೆಯಿಂದ ಪ್ರತಿನಿತ್ಯ ಟ್ರಾಫಿಕ್‌ ಜಾಮ್‌ನೊಂದಿಗೆ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿರುತ್ತವೆ. ಇದರ ಪರಿಣಾಮ ಸಾರ್ವಜನಿಕರು ತೊಂದರೆಗೆ ಸಿಲುಕುತ್ತಿದ್ದಾರೆ.

ಅಪಘಾತ ಸ್ಥಳ
ಬೆಳಗ್ಗೆ ಹಾಗೂ ಸಂಜೆಯ ವೇಳೆ ಜನ ಜಂಗುಳಿ ಇದ್ದು, ಈ ಸಂದರ್ಭದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ, ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಎಷ್ಟು ಜಾಗರೂಕತೆ ಮಾಡಿದರೂ ಆಗಾಗ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇದ್ದ ಸರ್ಕಲ್‌ ಚಿಕ್ಕದಾಗಿದ್ದರಿಂದ ಸಿ.ಸಿ. ಕೆಮರಾ ಹೊರತು ಪಡಿಸಿ ಸಿಗ್ನಲ್‌ ಜತೆಗೆ ಯಾವುದೇ ದೊಡ್ಡ ಮಟ್ಟದ ನಾಮಫಲಕ ಇಲ್ಲದಿರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇರುವ ಸಣ್ಣ ಸರ್ಕಲ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಹಾಗಾಗಿದೆ. ಸರ್ಕಲ್‌ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ಸರ್ಕಲ್‌ ನಿರ್ಮಾಣ ಹೋರಾಟ ಸಮಿತಿಯನ್ನು ರಚಿಸಲಾಗುವುದು ಎಂದು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಎಚ್ಚರಿಕೆಯನ್ನು ನೀಡಿದ್ದಾರೆ.

ಬೇಡಿಕೆಗಳು ಬಂದಿವೆ
ಸಿದ್ದಾಪುರ ಸರ್ಕಲ್‌ ನಿರ್ಮಾಣದ ಬಗ್ಗೆ ಜನಪ್ರತಿನಿಧಿಗಳಿಂದ ಹಾಗೂ ಸಾರ್ವಜನಿಕ ಬೇಡಿಕೆಗಳು ಬಂದಿವೆ. ಈ ಕುರಿತು ಶಾಸಕರು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸರ್ಕಲ್‌ ನಿರ್ಮಿಸುತ್ತೇವೆ.
– ದುರ್ಗಾದಾಸ್‌, ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ ಕುಂದಾಪುರ

Advertisement

ಇಲಾಖೆಗೆ ಮನವಿ
ಸಾರ್ವಜನಿಕ ಸುರಕ್ಷೆಯ ದೃಷ್ಟಿಯಲ್ಲಿ ಸಿದ್ದಾಪುರದಲ್ಲಿ ಒಂದು ಸುಸಜ್ಜಿತವಾದ ಸರ್ಕಲ್‌ ನಿರ್ಮಾಣವಾಗಬೇಕು. ನಿರ್ಮಾಣದ ಬಗ್ಗೆ ಗ್ರಾ. ಪಂ. ನಿರ್ಣಯದೊಂದಿಗೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲಾಗಿದೆ. ಇದರ ಬಗ್ಗೆ ಕ್ಷೇತ್ರ ಶಾಸಕರ ಗಮನಕ್ಕೆ ತಂದು ಪ್ರಸಕ್ತ ಸಾಲಿನಲ್ಲಿ ಸರ್ಕಲ್‌ ನಿರ್ಮಾಣ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
-ರೋಹಿತ್‌ ಕುಮಾರ ಶೆಟ್ಟಿ,
ಸದಸ್ಯ ಜಿ.ಪಂ.ಸಿದ್ದಾಪುರ

ಹೋರಾಟಕ್ಕೆ ಸಿದ್ಧ
ಸಿದ್ದಾಪುರ ಪೇಟೆಯ ವಾಹನಗಳ ದಟ್ಟಣೆ ಹೆಚ್ಚಾದ ಪರಿಣಾಮ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿವೆ. ಅಲ್ಲದೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ. ಸುರಕ್ಷೆಯ ದೃಷ್ಟಿಯಲ್ಲಿ ಸಿದ್ದಾಪುರದಲ್ಲಿ ಸುಸಜ್ಜಿತವಾದ ಸರ್ಕಲ್‌ ನಿರ್ಮಾಣವಾಗಬೇಕು. ಇದರ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಇಲಾಖಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಸರ್ಕಲ್‌ ನಿರ್ಮಾಣ ವಾಗದಿದ್ದಲ್ಲಿ ಸಂಘಟನೆಯ ಮೂಲಕ ಹೋರಾಟ ಮಾಡಬೇಕಾಗುತ್ತದೆ.
– ಸುದರ್ಶನ ಶೆಟ್ಟಿ ಬಾಳೆಬೇರು,ಗೌರವಾಧ್ಯಕ್ಷರು, ಜಯ ಕರ್ನಾಟಕ ಸಂಘಟನೆ,ಸಿದ್ದಾಪುರ ವಲಯ

ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next