Advertisement

ಸಿದ್ದಾಪುರ: ಕಾಯಕಲ್ಪಕ್ಕೆ ಕಾದಿರುವ ಕೃಷಿ ಮಾರುಕಟ್ಟೆ

06:03 PM Dec 02, 2024 | Team Udayavani |

ಉದಯವಾಣಿ ಸಮಾಚಾರ
ಸಿದ್ದಾಪುರ: ಗ್ರಾಮದ ಗಂಗಾವತಿ-ರಾಯಚೂರು ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಕೃಷಿ ಉತ್ಪನ್ನ ಉಪ-ಮಾರುಕಟ್ಟೆ ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿದೆ. ರೈತರ, ಕಾರ್ಮಿಕರ ಪ್ರಮುಖ ಕೇಂದ್ರವಾದ ಮಾರುಕಟ್ಟೆಯಲ್ಲಿ ವಿಶಾಲವಾದ ಸಿಸಿ ರಸ್ತೆ, ಅಗಲವಾದ ಬೃಹತ್‌ ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ ತೀವ್ರ ಅಗತ್ಯವಾಗಿರುವ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್‌, ಶೌಚಾಲಯ, ಸ್ನಾನಗೃಹ, ವಿಶ್ರಾಂತಿ ಭವನ ಇಲ್ಲದೇ ಇಡೀ ಮಾರುಕಟ್ಟೆಯನ್ನು ಅಣಕಿಸುವಂತಿದೆ.

Advertisement

ಜನರ, ಕೂಲಿ ಕಾರ್ಮಿಕರ, ಅನ್ನದಾತರ ನೀರಿನ ದಾಹ ತೀರಿಸಲು ಉಪ ಮಾರುಕಟ್ಟೆಯ  ಆವರಣದಲ್ಲಿ ಅಂದಾಜು 5-6 ವರ್ಷಗಳ ಹಿಂದೆಯೇ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರೂ ಸಹ ಇಲ್ಲಿಯವರೆಗೆ ಘಟಕ ಆರಂಭಗೊಳ್ಳದಿರುವುದು ರೈತರು ಹಾಗೂ ವ್ಯಾಪಾರಿಗಳಲ್ಲಿ ತೀರ ಬೇಸರ ಮೂಡಿಸಿದೆ.

ಮಲಮೂತ್ರ ವಿಸರ್ಜನೆಗೆ ಮಾರುಕಟ್ಟೆಗೆ ಬರುವ ಪ್ರತಿಯೊಬ್ಬರು ಸಂಕಷ್ಟ ಎದುರಿಸಬೇಕಾಗಿದೆ. ಮಹಿಳಾ ಕಾರ್ಮಿಕರು ಪಡುವ ಪಾಡಂತೂ ಹೇಳತೀರದಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಕೂಲಿ ಕಾರ್ಮಿಕರು, ರೈತರು ಅಳಲು ತೋಡಿಕೊಂಡರು. ಇನ್ನೂ
ಜಾನುವಾರುಗಳಿಗೆ ನೀರು ಕುಡಿಯಲು ನಿರ್ಮಿಸಿರುವ ತೊಟ್ಟಿಗಳು ನೀರಿಲ್ಲದೆ ಸೊರಗಿವೆ. ಇನ್ನೂ ಮಾರುಕಟ್ಟೆಯ ಆವರಣದಲ್ಲಿ 2000 ನೇ ಇಸವಿಯಲ್ಲಿ ಲಕ್ಷಾಂತರ ರೂ ಮೋತ್ತದಲ್ಲಿ ನಿರ್ಮಿಸಿರುವ 24 ಗ್ರಾಮೀಣ ಸಂತೆ ಮಾರುಕಟ್ಟೆಯ ಮಳಿಗೆಗಳು ಪಾಳು ಬಿದ್ದಿದ್ದು, ಈಗಾ ಅವುಗಳು ಸಾರ್ವಜನಿಕ ಮಲ ಮೂತ್ರ ವಿಸರ್ಜನೆಯ ತಾಣವಾಗಿ ಮಾರ್ಪಟ್ಟಿವೆ.

ನ್ಯೂ ಮಾರುಕಟ್ಟೆಯ ಆವರಣದ ಸಿಸಿ ರಸ್ತೆ ಮಧ್ಯೆಯೇ ಒಂದೇ ಒಂದು ದೊಡ್ಡದಾಡ ಹೈಮಾಸ್ಟ್‌ ಬೀದಿ ದೀಪ ಅಳಡಿಸಲಾಗಿದೆ ಆದರೆ ಒಂದು ದೀನ ಬೆಳಗಲೆ ಇಲ್ಲ ಎಂದು ವ್ಯಂಗ್ಯವಾಡುತ್ತಾರೆ ರೈತರು. ಬೀದಿ ದೀಪ ವ್ಯವಸ್ಥೆ ಇಲ್ಲದೆ ಇರುವ ಪರಿಣಾಮ ಸಂಜೆಯಾಗುತ್ತಲೆ ಮಾರುಕಟ್ಟೆಯಲ್ಲಿ ರೈತರು, ಕೃಷಿ ಕೂಲಿ ಕಾರ್ಮಿಕರು, ಸಾರ್ವಜನಿಕರು ಕಣ್ಣಿದ್ದು ಕುರುಡರಾಗಿ ತಿರುಗಾಡಬೇಕಾಗಿದೆ.

ಇನ್ನೂ ಮಾರುಕಟ್ಟೆಯ ಆವರಣದಲ್ಲಿ ನಿತ್ಯ ನೂರಾರು ರೈತರು, ಕೂಲಿಕಾರ್ಮಿಕರು ತಿರುಗಾಡುವ ರಸ್ಥೆಯ ಪಕ್ಕ ನಿರ್ಮಿಸಿದ್ದ ಓವರ್‌ ಹೆಡ್‌ ಟ್ಯಾಂಕ್‌ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಈಗಾಗಲೇ ಪಿಲ್ಲರ್‌ನಲ್ಲಿರುವ ಕಬ್ಬಿಣದ ಸರಳು  ಹೊರಬಂದಿದೆ. ಒಂದು ಕಡೆ ವಾಲಿದಂತೆ ಕಾಣುತ್ತಿದೆ. ಈಗಲೋ ಆಗಲೋ ಕುಸಿದುಬಿಳುವ ಆತಂಕ ಎದುರಾಗಿದೆ. ಕೂಡಲೇ ಸಂಬಂಧಿಸಿದ
ಅ ಕಾರಿಗಳು ಈ ಶಿಥಿಲಾವಸ್ಥೆಯಲ್ಲಿರುವ ಈ ಟ್ಯಾಂಕ್‌ ನೆಲಸಮಗೊಳಿಸಬೇಕು. ಇಲ್ಲವಾದರೆ ಆಗುವ ಅನಾಹುತಕ್ಕೆ ಯಾರು ಹೊಣೆ ಎಂದು ರೈತರು ಪ್ರಶ್ನಿಸುತ್ತಾರೆ.

Advertisement

ಇನ್ನೂ ಮಾರುಕಟ್ಟೆಯ ಆವರಣದಲ್ಲಿ ಮುಖ್ಯ ರಸ್ತೆಯಲ್ಲಿ ವರ್ಷಗಳ ಹಿಂದೆ ನಿರ್ಮಿಸಿರುವ 13 ವಾಣಿಜ್ಯ ಮಳಿಗೆಗಳು ಅದ್ಯಾವ ಕಾರಣಕ್ಕೆ ಉದ್ಘಾಟನೆ ಭಾಗ್ಯ ಕಾಣುತ್ತಿಲ್ಲ ಎಂಬ ಕಾರಣ  ಯಾರಿಗೂ ತಿಳಿದಿಲ್ಲ.

ಸಂಬಂಧಪಟ್ಟವರು ಶೀಘ್ರದಲ್ಲಿ ಮಾರುಕಟ್ಟೆಯಲ್ಲಿ ರೈತರು, ಕಾರ್ಮಿಕರಿಗೆ ದೊರೆಯಬೇಕಾದ ಮೂಲ  ಸೌಕರ್ಯ ಒದಗಿಸಲು ಮುಂದಾಗಬೇಕು.
ಹನುಮೇಶ, ರೈತ, ಸಿದ್ದಾಪುರ

ಸದ್ಯ ಎಂಜಿನಿಯರ್‌ಗೆ ಹೇಳಿ ಶಿಥಿಲಾವಸ್ಥೆಯಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ ಸುತ್ತ ಯಾರು ಹೊಗದಂತೆ ತಂತಿ ಬೇಲಿ ಹಾಕಿಸಿ ಬಳಿಕ ಕೆಡವಲಾಗುವುದು. ಹೈಮಾಸ್ಟ್‌ ಬೆಳಗದಿರುವ ಬಗ್ಗೆ ನಮ್ಮ ಸಿಬ್ಬಂದಿಗೆ  ಸೂಚಿಸಲಾಗುತ್ತದೆ. ಶುದ್ಧ ಕುಡಿಯುವ ನೀರಿನ ಘಟಕ ಆರಂಭ ಮತ್ತು ಮಾರುಕಟ್ಟೆಯಲ್ಲಿ ಇನ್ನಿತರ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ
ಕೈಗೊಳ್ಳಲಾಗುವುದು.
ನಂಜುಂಡಸ್ವಾಮಿ, ವಿಶೇಷ ಕೃಷಿ
ಉತ್ಪನ್ನ ಮಾರುಕಟ್ಟೆ ಸಮಿತಿ
ಕಾರ್ಯದರ್ಶಿ, ಕಾರಟಗಿ

■ ಸಿದ್ದನಗೌಡ ಹೊಸಮನಿ

Advertisement

Udayavani is now on Telegram. Click here to join our channel and stay updated with the latest news.

Next