Advertisement

ಸಿದ್ದಾಪುರ: ಮೇಲ್ದರ್ಜೆಗೆ ಏರದ ನಕ್ಸಲ್‌ ಪೀಡಿತ ಪ್ರಾ.ಆರೋಗ್ಯ ಕೇಂದ್ರ

10:43 AM Oct 18, 2019 | Team Udayavani |

ಸಿದ್ದಾಪುರ: ನಕ್ಸಲ್‌ ಪೀಡಿತ ಪ್ರದೇಶದಲ್ಲಿರುವ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಗ್ರಾಮಸ್ಥರ ಆಗ್ರಹವು ಮರೀಚಿಕೆಯಾಗಿಯೇ ಇದೆ. ಇರುವ ಹುದ್ದೆಗಳೂ ಭರ್ತಿಯಾಗದೆ ಖಾಲಿ ಇವೆ.
ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಯಲ್ಲಿ ಬರುವ ಪ್ರದೇಶಗಳು ಕೃಷಿ ಭೂಮಿ ಹಾಗೂ ಕಾಡು ಪ್ರದೇಶಗಳನ್ನು ಒಳಗೊಂಡವೇ ಆಗಿದ್ದು ಸುಸಜ್ಜಿತ ಅಸ್ಪತ್ರೆಯ ಆವಶ್ಯಕತೆ ಇದೆ.

Advertisement

ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣ ಬೆಳಕಿಗೆ ಬಂದಿದ್ದು, ಆಜ್ರಿ, ಕೊಡ್ಲಾಡಿ, ಉಳ್ಳೂರು-74ರಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ. ಎಚ್‌1ಎನ್‌1 ಪ್ರಕರಣದಲ್ಲಿ ಈಗಾಗಲೇ ಜನ್ಸಾಲೆ ಬೇಬಿ ಶೆಟ್ಟಿ ಅವರು ಮೃತ ಪಟ್ಟಿದ್ದಾರೆ. ಇತಂಹ ಪರಿಸ್ಥಿತಿಯಲ್ಲಿ ಸಿದ್ದಾಪುರಕ್ಕೆ 24×7 ವೈದ್ಯಕೀಯ ಸೇವೆಯ ಆಸ್ಪತ್ರೆ ಅಗತ್ಯ ಇದೆ.

ಹುದ್ದೆಗಳು ಖಾಲಿ
ಆರೋಗ್ಯ ಕೇಂದ್ರದಲ್ಲಿ ಇರುವ 26 ಹುದ್ದೆಯಲ್ಲಿ 20 ಹುದ್ದೆ ಖಾಲಿ ಇವೆ. ಕೇವಲ 6 ಹುದ್ದೆಗಳಲ್ಲಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಅಗತ್ಯವಾಗಿ ಬೇಕಾಗಿರುವ ಸ್ಟಾಫ್‌ ನರ್ಸ್‌ ಹುದ್ದೆಯೇ ಇಲ್ಲಿಯ ತನಕ ಸೃಷ್ಠಿಯಾಗಿಲ್ಲದಿದ್ದರೂ ಎನ್‌ಆರ್‌ಎಚ್‌ಎಂನಲ್ಲಿ ಒಂದು ಹುದ್ದೆ ನೀಡಲಾಗಿದೆ. ಆರೋಗ್ಯ ಕೇಂದ್ರಕ್ಕೆ ಖಾಯಂ ಆಡಳಿತ ವೈದ್ಯಾಧಿಕಾರಿಗಳು ಸೇರಿದಂತೆ 3ರಲ್ಲಿ 2 ವೈದ್ಯರ ಹುದ್ದೆಗಳು ಖಾಲಿ ಇವೆ.

ದ್ವಿತೀಯ ದರ್ಜೆ ಸಹಾಯಕ, ಪ್ರಯೋಗ ಶಾಲೆ ತಂತ್ರಜ್ಞ, ಬಿ.ಎಚ್‌.ಇ, ಫಾರ್ಮಾಸಿಸ್ಟ್‌, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ, ಹಿರಿಯ ಪುರುಷ ಆರೋಗ್ಯ ಸಹಾಯಕ, ವಾಹನ ಚಾಲಕ ಹುದ್ದೆಗಳು ತಲಾ ಒಂದೊಂದು ಖಾಲಿ ಇದೆ. ಹೀಗಾಗಿ ವೈದ್ಯಾಧಿಕಾರಿ ಡಾ| ದೀಕ್ಷಾ ಅವರು ದಿನಕ್ಕೆ ಕನಿಷ್ಟ 90ರಿಂದ 110 ರೋಗಿಗಳನ್ನು ಪರೀಕ್ಷಿಸಬೇಕಾದ ಸ್ಥಿತಿ ಸದ್ಯಕ್ಕಿದೆ.

8 ಗ್ರಾಮಗಳಿಗೊಂದು ಪ್ರಾಥಮಿಕ ಆರೋಗ್ಯ ಕೇಂದ್ರ
ಪ್ರಸ್ತುತ ಹೊರ ರೋಗಿ ತಪಾಸಣ ವಿಭಾಗ ಹಾಗೂ ತುರ್ತು ಚಿಕಿತ್ಸೆ ವಿಭಾಗ ಹೊಂದಿರುವ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವು ಸಿದ್ದಾಪುರ, ಉಳ್ಳೂರು-74, ಜನ್ಸಾಲೆ, ಕೊಡ್ಲಾಡಿ, ಆಜ್ರಿ, ಯಡಮೊಗೆ, ಹೊಸಂಗಡಿ, ಭಾಗೀಮನೆ ಗ್ರಾಮಗಳ ರೋಗಿಗಳನ್ನು ನಿಭಾಯಿಸುವ ಜವಬ್ದಾರಿ ಹೊಂದಿದೆ.

Advertisement

ಆರೋಗ್ಯ ಸಹಾಯಕಿಯರ ಕೊರತೆ
ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 8 ಉಪ ಕೇಂದ್ರಗಳು ಬರುತ್ತವೆ. 8ರಲ್ಲಿ 3 ಉಪ ಕೇಂದ್ರಗಳಿಗೆ ಮಾತ್ರ ಆರೋಗ್ಯ ಸಹಾಯಕಿಯರು ಇದ್ದಾರೆ. ಹೊಸಂಗಡಿ ಉಪ ಕೇಂದ್ರಕ್ಕೆ ಒಬ್ಬರು ಮಾತ್ರ ಖಾಯಂ ಆರೋಗ್ಯ ಸಹಾಯಕಿಯಿದ್ದರೆ, ಸಿದ್ದಾಪುರ ಹಾಗೂ ಆಜ್ರಿ ಉಪ ಕೇಂದ್ರಗಳಲ್ಲಿ ಎನ್‌ಆರ್‌ಎಚ್‌ಎಂ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ತಲಾ ಒಬ್ಬರು ಆರೋಗ್ಯ ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಉಪ ಕೇಂದ್ರಗಳಲ್ಲಿ ಹುದ್ದೆ ಖಾಲಿಯಿದ್ದರೂ ಈವರೆಗೆ ಅವು ಭರ್ತಿಯಾಗಿಲ್ಲ.

ಸುಮಾರು 60 ವರ್ಷದ ಹಿಂದಿನ ಹಳೆಯದಾದ ಆಸ್ಪತ್ರೆ ಕಟ್ಟಡ ಹಾಗೂ ಕ್ವಾರ್ಟರ್ಸ್‌ಗಳು ದುರಸ್ತಿ ಯಾಗಬೇಕಾಗಿದೆ. ಆಸ್ಪತ್ರೆಯಲ್ಲಿ ಆರು ಹಾಸಿಗಳ ಸೌಲಭ್ಯ ಇದ್ದರೂ ಅವು ಹಳೆಯದಾಗಿವೆ. ಕಟ್ಟಡ ಆಲ್ಲಲ್ಲಿ ಸೋರುತ್ತಿರುವುದರಿಂದ ರೋಗಿಗಳಿಗೆ ಸಮಸ್ಯೆ ಯಾಗುಮ ಜತೆಗೆ ಔಷಧ ಹಾಗೂ ದಾಖಲಾತಿಗಳನ್ನು ಇಟ್ಟುಕೊಳ್ಳಲೂ ಕಷ್ಟವಾಗುತ್ತಿದೆ. ಕ್ವಾರ್ಟರ್ಸ್‌ಗಳು ಅಲ್ಪ ಸಲ್ಪ ರೀಪೇರಿ ಕಂಡರೂ ಪೂರ್ಣ ಪ್ರಮಾಣದಲ್ಲಿ ದುರಸ್ತಿಯಾಗಲಿಲ್ಲ.

ಜಿ.ಪಂ. ಸಭೆಯಲ್ಲಿ ವಿಷಯ ಪ್ರಸ್ತಾಪ
ಜಿ.ಪಂ. ಸಭೆಯಲ್ಲಿ ವಿಷಯವನ್ನು ಮೇಲಾಧಿಕಾರಿಗಳು ಗಮನಕ್ಕೆ ತರಲಾಗಿದೆ. ಅನಿವಾರ್ಯವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವುದರೊಂದಿಗೆ 24×7 ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳುವಂತೆ ಪ್ರಯತ್ನಿಸಲಾಗುದು.
-ರೋಹಿತ್‌ಕುಮಾರ ಶೆಟ್ಟಿ, ಜಿ.ಪಂ. ಸದಸ್ಯರು

ಹುದ್ದೆ ಖಾಲಿ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹಾಗೂ ದಾದಿಯರ ಹುದ್ದೆ ಖಾಲಿ ಇದೆ. ಸರಕಾರದಿಂದ ಒದಗಿಸಲಾಗುತ್ತಿರುವ ಔಷಧವು ರೋಗಿಗಳ ರೋಗಕ್ಕೆ ಅನುಗುಣವಾಗಿ ಉಪಯೋಗಕ್ಕೆ ಲಭಿಸುತ್ತಿದ್ದು ಆ ಬಗ್ಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ.
-ಡಾ| ದೀಕ್ಷಾ, ಆಡಳಿತ ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸಿದ್ದಾಪುರ

ಮೆಟರ್ನಿಟಿ ವಾರ್ಡ್‌ ಕೊರತೆ
ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಯರು ಹಾಗೂ ದಾದಿಯರು ನೇಮಕವಾಗಬೇಕು. ಸಿದ್ದಾಪುರ ಪರಿಸರದ 8 ಗ್ರಾಮಗಳ ಗರ್ಭಿಣಿಯರ ಶುಶ್ರೂಷೆಗೆ ಅಗತ್ಯವಿರುವ ಮೆಟರ್ನಿಟಿ ವಾರ್ಡ್‌ (ಲೇಬರ್‌ ವಾರ್ಡ್‌) ಕೊರತೆಯಿದ್ದು ತುರ್ತು ಚಿಕಿತ್ಸೆಗೆ ದೂರದ ಕುಂದಾಪುರಕ್ಕೆ ಸಾಗಬೇಕಾದ ಅನಿವಾರ್ಯತೆ ನಿಭಾಯಿಸುವಲ್ಲಿ ಇಲಾಖೆ ಕ್ರಮ ಕೈಗೊಳ್ಳುವುದು ಅಗತ್ಯ.
– ಭಾಸ್ಕರ್‌ ಶೆಟ್ಟಿ, ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.

Next