ಬೆಂಗಳೂರು: ರೌಡಿ ಸಿದ್ದಾಪುರ ಮಹೇಶ್ ಹತ್ಯೆ ಮಾಡಿದ್ದ ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ ಶುಕ್ರವಾರ 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಸಿದ್ದಾಪುರ ಮಹೇಶ್ ಹತ್ಯೆ ಪ್ರಕರಣದಲ್ಲಿ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ, ಮೋಹನ್‌ಗಾಗಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದರು. ಈ ನಡುವೆ ಶುಕ್ರವಾರ ಇಬ್ಬರೂ ನ್ಯಾಯಾಲಯದ ಮುಂದೆ ಪ್ರತ್ಯೇಕವಾಗಿ ಶರಣಾಗಿದ್ದಾರೆ.
ಹೆಚ್ಚಿನ ವಿಚಾರಣೆಗೆ ನಡೆಸಬೇಕಾಗಿದ್ದ ಹಿನ್ನೆಲೆಯಲ್ಲಿ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು 7 ದಿನಗಳ ವರೆಗೆ ನಾಗ ಮತ್ತು ಮೋಹನ್‌ನನ್ನು ಪೊಲೀಸ್ ವಶಕ್ಕೆ ನೀಡಿದೆ.
ಆರೋಪಿಗಳು ತಿರುಪತಿಗೆ ತೆರಳಿ ದೇವರಿಗೆ ಕೈ ಮುಗಿದು ಬೆಂಗಳೂರು ಬಸ್ ಹತ್ತಿ ಕೆ.ಆರ್.ಪುರಕ್ಕೆ ಬಂದಿದ್ದರು. ಕೆ.ಆರ್.ಪುರದಿಂದ ಕ್ಯಾಬ್‌ನಲ್ಲಿ ಎಸಿಎಂಎಂ ನ್ಯಾಯಾಲಯಕ್ಕೆ ಬಂದಿದ್ದರು. ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತಮಗಾಗಿ ಶೋಧ ನಡೆಸುತ್ತಿದ್ದ ಸಂಗತಿ ಅರಿತಿದ್ದ ವಿಲ್ಸನ್‌ಗಾರ್ಡ ನಾಗ ಹಾಗೂ ಆತನ ಸಹಚರರು ತಲೆಮರೆಸಿಕೊಂಡಿದ್ದರು.
ಏನಿದು ಪ್ರಕರಣ ?: 2021ರಲ್ಲಿ ವಿಲ್ಸನ್ ಗಾರ್ಡನ್ ನಾಗನ ಗೆಳೆಯನಾದ ಮದನ್ ಅಲಿಯಾಸ್ ಪಿಟೀಲ್ ಎಂಬಾತನನ್ನು ಸಿದ್ದಾಪುರ ಮಹೇಶ ಸಹಚರರ ಜೊತೆಗೆ ಬನಶಂಕರಿ ದೇವಾಲಯದ ಬಳಿಯಲ್ಲಿ ಅಡ್ಡಹಾಕಿ ಕೊಲೆ ಮಾಡಿದ್ದ. ಇದರಿಂದ ಮಹೇಶ್ ವಿರುದ್ಧ ನಾಗ ದ್ವೇಷ ಸಾಧಿಸುತ್ತಿದ್ದ. ಇದು ಮಹೇಶ್ ಗಮನಕ್ಕೆ ಬಂದಿತ್ತು. ಆತನಿಂದ ಪ್ರಾಣ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಳೆ ಪ್ರಕರಣವೊಂದರಲ್ಲಿ ಮಹೇಶ್ ಮತ್ತೆ ಜೈಲು ಸೇರಿದ್ದ. ಆ.4ರಂದು ರಾತ್ರಿ ಜಾಮೀನಿನ ಮೇಲೆ ಮಹೇಶ ಜೈಲಿನಿಂದ ಹೊರ ಬಂದಿದ್ದ. ಬಳಿಕ ಸ್ನೇಹಿತನ ಜೊತೆಗೆ ಕಾರಿನಲ್ಲಿ ಮಹೇಶ ಮನೆಗೆ ಬರುತ್ತಿದ್ದಾಗಲೇ ದುಷ್ಕರ್ಮಿಗಳು ಆತನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.