ಪಣಜಿ: ಗೋವಾ ಸೇರಿದಂತೆ ಗಡಿ ಭಾಗದಲ್ಲಿ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ 2022-23 ರಲ್ಲಿ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಕನ್ನಿಷ್ಠ ರೂ 350 ಕೋಟಿ ರೂ ಗಳ ಅನುದಾನವನ್ನು ನೀಡುವ ಬಗ್ಗೆ ಅಖಿಲ ಗೋವಾ ಕನ್ನಡ ಮಹಾಸಂಘ ಕರ್ನಾಟಕ ಸರ್ಕಾರವನ್ನು ಮನವಿ ಮಾಡಿದೆ.
ಈ ಕುರಿತಂತೆ ಅಖಿಲ ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ಧಣ್ಣ ಮೇಟಿ ರವರು ಕರ್ನಾಟಕದ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ರವರಿಗೆ ಪತ್ರ ಬರೆದಿದ್ದು, ಈ ಪತ್ರವನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ್ ರವರ ಬಳಿ ಸಲ್ಲಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಗಡಿ ಪ್ರದೇಶ ವ್ಯಾಪ್ತಿಗೆ ಬರುವ 19 ಜಿಲ್ಲೆಗಳ 63 ತಾಲೂಕುಗಳು ಮತ್ತು ಇವುಗಳಿಗೆ ಹೊಂದಿಕೊಂಡಿರುವಂತಹ 6 ನೆರೆ ರಾಜ್ಯಗಳಾದ ಗೋವಾ,ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಆಂಧ್ರ ಮತ್ತು ಕೇರಳ ರಾಜ್ಯಗಳಿಗೆ ಹೊಂದಿಕೊಂಡಂತೆ ಇರುವ ಗಡಿ ಪ್ರದೇಶಗಳಲ್ಲಿನ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಠಿಯಿಂದ ಗಡಿನಾಡ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕಕ್ಕೆ ಹೊಂದಿರುವ ನೆರೆ ರಾಜ್ಯಗಳಲ್ಲಿ ಕನ್ನಡ ಶಾಲೆಗಳು ತುಂಬಾ ದುಸ್ಥಿತಿಯಲ್ಲಿದೆ. ಅಂತೆಯೇ ಈ ಭಾಗದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ಅಗತ್ಯವಿದೆ. ಗಡಿನಾಡಿನ ವ್ಯಾಪ್ತಿಗೆ ಬರುವ 19 ಜಿಲ್ಲೆಗಳು ಮತ್ತು 63 ತಾಲೂಕುಗಳಿಗೆ ವಿಶೇಷವಾಗಿ ಪ್ರತಿ ತಾಲೂಕಿಗೆ ಕನಿಷ್ಠ 5 ಕೋಟಿ ರೂ ಅನುದಾನ ನೀಡುವುದು ಸೂಕ್ತವಾಗಿರುತ್ತದೆ. ಪ್ರಾಧಿಕಾರದ ವ್ಯಾಪ್ತಿಗೆ ಬರುವ ರಾಜ್ಯಗಳಲ್ಲಿ ಗಡಿನಾಡ ಕನ್ನಡ ಭವನ ನಿರ್ಮಾಣ ಮಾಡಲು ಪ್ರತಿ ರಾಜ್ಯಕ್ಕೆ 5 ಕೋಟಿ ರೂಗಳಂತೆ ಸುಮಾರು 350 ಕೋಟಿ ರೂ ಮೀಸಲಿಡಬೇಕೆಂದು ಅಖಿಲ ಗೋವಾ ಕನ್ನಡ ಮಹಾಸಂಘ ಮನವಿ ಮಾಡಿದೆ.
ಇದನ್ನೂ ಓದಿ : ನಾಲತವಾಡ: ರೇಣುಕಾ ಎಲ್ಲಮ್ಮನ ಗುಡಿಯಲ್ಲಿ ಹಡಲಿಗೆ ಕಾರ್ಯ
ಈಗಾಗಲೇ ಕರ್ನಾಟಕದ ಮುಖ್ಯಮಂತ್ರಿಗಳು ಗೋವಾದಲ್ಲಿ ಮತ್ತು ತಮಿಳುನಾಡಿನಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಆದೇಶಿಸಿದ್ದರೂ ಕೂಡ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ.
ಗಡಿನಾಡ ಕನ್ನಡಿಗರ ಹಿತಾಸಕ್ತಿಯನ್ನು ಸಂರಕ್ಷಿಸದೇ ಹೋದರೆ ಕನ್ನಡಿಗರ ಆಕ್ರೋಶಕ್ಕೆ ಸರ್ಕಾರ ಗುರಿಯಾಗಬಹುದು. ಇದರಿಂದಾಗಿ ಗಡಿನಾಡ ಕನ್ನಡಿಗರ ಪರವಾಗಿ ಮುಖ್ಯಮಂತ್ರಿಗಳ ಗಮನ ಸೆಳೆದು ಪ್ರಾಧಿಕಾರಕ್ಕೆ ಕನಿಷ್ಠ 350 ಕೋಟಿ ರೂ ಅನುದಾನ ನೀಡುವಂತೆ ಕರ್ನಾಟಕದ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ರವರಿಗೆ ಅಖಿಲ ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ಧಣ್ಣ ಮೇಟಿ ಮನವಿ ಮಾಡಿದ್ದಾರೆ.