Advertisement

ಸಿದ್ಧಗಂಗಾ ಶ್ರೀ ಅಡ್ಡಪಲ್ಲಕ್ಕಿ ಉತ್ಸವ

07:20 AM Jan 28, 2019 | |

ಸಂತೆಮರಹಳ್ಳಿ: ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೆ ಖ್ಯಾತಿ ಗಳಿಸಿದ್ದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಯಳಂದೂರು ತಾಲೂಕಿನ ಅಗರ ಗ್ರಾಮಸ್ಥರು ಭಾನುವಾರ ವಿವಿಧ ಕಲಾತಂಡಗಳೊಂದಿಗೆ ವೈಭವಯುತ ವಾಗಿ ಅಡ್ಡಪಲ್ಲಕ್ಕಿ ಉತ್ಸವ ಮಾಡಿ, ಅನ್ನದಾಸೋಹದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

Advertisement

ಅಡ್ಡಪಲ್ಲಕ್ಕಿ ಉತ್ಸವದ ಪ್ರಯುಕ್ತ ಭಾನು ವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಹೂವು ಗಳಿಂದ ಅಲಂಕರಾರಗೊಂಡ ಅಡ್ಡಪಲ್ಲಕ್ಕಿಯಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರ ವನ್ನು ಇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮದ ಪ್ರಮುಖ ಬಡಾವಣೆಗಳಲ್ಲಿ ಶ್ರೀಗಳ ಭಾವಚಿತ್ರದ ಮೆರವಣಿಗೆಯಲ್ಲಿ ಚಿಣ್ಣರು, ಕಳಶಗಳನ್ನು ಹೊತ್ತು, ವೀರಗಾಸೆ, ಮಂಗಳ ವಾದ್ಯಗಳ ಮೂಲಕ ಅದ್ಧೂರಿ ಮೆರವಣಿಗೆ ನಡೆಸಿದರು.

ಸಮವಸ್ತ್ರ: ಈ ಸಂದರ್ಭದಲ್ಲಿ ಸಿದ್ಧಗಂಗಾ ಮಠದಲ್ಲಿ ಧರಿಸುವ ಬಿಳಿವಸ್ತ್ರ ಹಾಗೂ ಕೆಂಪು ಬಣ್ಣದ ಟವೆಲ್‌ಗ‌ಳನ್ನು ಹೆಗಲಿಗೇರಿಸಿಕೊಂಡ ಗ್ರಾಮಸ್ಥರು ಸರತಿ ಸಾಲಿನಲ್ಲಿ ಸಾಗಿದ ಮೆರವಣಿಗೆ ಆಕರ್ಷಣೀಯವಾಗಿತ್ತು. ದಾರಿ ಯುದ್ದಕ್ಕೂ ಜಾತಿ ಧರ್ಮ ಭೇದ ಮರೆತು ಎಲ್ಲಾ ಸಾರ್ವಜನಿಕರು ಪೂಜೆ ಸಲ್ಲಿಸುವ ಮೂಲಕ ಶ್ರೀಗಳಿಗೆ ನಮನ ಸಲ್ಲಿಸಿದರು.

ದೈವತ್ವದ ಗುಣ: ಈ ಸಂದರ್ಭದಲ್ಲಿ ಮುಖಂಡ ಗೌಡರ ಬಸವಣ್ಣ ಮಾತನಾಡಿ, ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದರೂ ಕ್ರಿಯಾಸಮಾಧಿಯಲ್ಲಿ ಇನ್ನೂ ಜೀವಂತವಾಗಿ ದ್ದಾರೆ. ಜನ ಮಾನಸದಲ್ಲಿ ಎಷ್ಟೇ ಶತಮಾನ ಗಳು ಕಳೆದರೂ ಇರುತ್ತಾರೆ. ಬದುಕಿರು ವಾಗಲೇ ದೇವರೆಂದು ಕರೆಯಿಸಿಕೊಂಡ ವಿಶ್ವದ ಮೊದಲಿಗರಾಗಿದ್ದಾರೆ. ದೈವತ್ವದ ಎಲ್ಲಾ ಗುಣಗಳನ್ನು ಒಳಗೊಂಡ ಇವರಲ್ಲಿ ಮಾತೃ ಹೃದಯವಿತ್ತು.

ಲಕ್ಷಾಂತರ ಭಕ್ತರಿಗೆ‌, ವಿದ್ಯಾರ್ಥಿಗಳಿಗೆ, ಅನಾಥರಿಗೆ ಆಶಾ ಕಿರಣ ವಾಗಿದ್ದರು. ಬಸವಣ್ಣನವರ ಕಾಯಕತತ್ವದ ಪ್ರತಿರೂಪದಂತಿದ್ದ ಇವರು ನಿದ್ದೆ ಮಾಡಿದ್ದು ವಿರಳ. ಬದುಕು ನನಗಾಗಿ ಅಲ್ಲ, ಸಮಾಜಕ್ಕಾಗಿ ನಾನು, ನಾನಾಗಿ ಇರಬಾರದು. ಜಗತ್ತಿನ ಒಳಿತಿಗಾಗಿ ನಾವೆಲ್ಲರೂ ದುಡಿಯಬೇಕು ಎಂಬ ತತ್ವದಲ್ಲಿ ನಡೆದು ಇತರರಿಗೆ ಮಾರ್ಗದರ್ಶಿಯಾಗಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಭಾರತ ರತ್ನ ಘೋಷಿಸಿಬೇಕಿತ್ತು: ಕೇಂದ್ರ ಸರ್ಕಾರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡದಿರುವುದು ವಿಷಾದದ ಸಂಗತಿ. ಇಂತಹ ಮಹಾನ್‌ ಸಂತನನ್ನು ಕಳೆದುಕೊಂಡ ದೇಶ ಹಾಗೂ ರಾಜ್ಯ ಬಡವಾಗಿದೆ. ಇಂತಹ ಪುಣ್ಯ ನೆಲದಲ್ಲಿ ಹುಟ್ಟಿರುವ ನಾವೇ ಧನ್ಯರಾಗಿದ್ದೇವೆ. ಇವರ ತತ್ವಾದರ್ಶಗಳ ಪಾಲನೆ ನಮ್ಮೆಲ್ಲರ ಕರ್ತವ್ಯವಾಗಿದ್ದು ಇವರು ಹಾಕಿಕೊಟ್ಟ ಪಥದಲ್ಲಿ ಸಾಗೋಣ ಎಂದು ಮನವಿ ಮಾಡಿದರು.

ದಾಸೋಹ: ನಂತರ ನೆರೆದಿದ್ದ ನೂರಾರು ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಮುಖಂಡರಾದ ನಾಡಗೌಡ ಗುರುಸ್ವಾಮಿ, ಪುಟ್ಟುಸುಬ್ಬಣ್ಣ, ನಂಜುಂಡ ಸ್ವಾಮಿ, ಶಂಕರಪ್ಪ, ನಾಗಪ್ಪ, ನರಸಿಂಹ ನಾಯಕ, ಗೋವಿಂದನಾಯಕ ಸೇರಿದಂತೆ ಗ್ರಾಮಸ್ಥರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next