ಮಾಗಡಿ: ನಾನು ಎನ್ನುವುದು ನಾಶದ ಸಂಕೇತವಾಗಿದೆ. ನಮ್ಮದು ಎನ್ನುವುದು ಬೆಳವಣಿಗೆಯ ಧೋತಕವಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಸೋಲೂರು ಹೋಬಳಿ ಮೋಟಗಾನಹಳ್ಳಿಯಲ್ಲಿ ಗ್ರಾಮ ದೇವತೆ ಗಂಗಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಅವರು ಮಾತನಾಡಿ, ಮನುಷ್ಯನಾದವನು ಅನ್ಯಮಾರ್ಗದಿಂದ ದೂರ ಉಳಿಯಬೇಕು. ಸದ್ಬಾವನೆಯನ್ನು ಬೆಳೆಸಿಕೊಳ್ಳಬೇಕು. ದೇವಭಾವನೆಯಿಂದ ಮನುಷ್ಯ ಪವಿತ್ರನಾಗುತ್ತಾನೆ. ಭಾರತೀಯ ಪರಂಪರೆಯಲ್ಲಿ ತಾಯಿಗೆ ದೇವರ ಸ್ಥಾನ ನೀಡಿದೆ. ತಾಯಿಗಿಂತ ದೇವರಿಲ್ಲ, ಸಾಧನೆಯಿಂದ ಸಂಪತ್ತನ್ನು ಗಳಿಸಿದವರು, ವಿನಯವಂತಿಕೆಯಿಂದ ಮತ್ತು ದಾನ, ಧರ್ಮದ ಸೇವೆಯಿಂದ ತಾಯಿಯನ್ನು ಸಂತೃಪ್ತಿಗೊಳಿಸುವ ಮೂಲಕ ಜನ್ಮ ಸಾರ್ಥಕಗೊಳಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ನೆಮ್ಮದಿ ಖರೀದಿಸುವ ವಸ್ತುವಲ್ಲ: ಸಮಾರಂಭ ಉದ್ಘಾಟಿಸಿದ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ನೆಮ್ಮದಿ ಎನ್ನುವುದು ಅಂಗಡಿಯಲ್ಲಿ ಹಣ ನೀಡಿ ಖರೀದಿಸುವ ವಸ್ತುವಲ್ಲ. ಮನುಷ್ಯನಿಗೆ ನೆಮ್ಮದಿ ಸಿಗುವುದು ಭಗವಂತನ ಸಾನ್ನಿಧ್ಯದಲ್ಲಿ. ಭಗವಂತ ಸ್ಮರಣೆಯಿಂದ ಮಾತ್ರ ನೆಮ್ಮದಿ ಸಾಧ್ಯ. ಕಲಿಯುಗದಲ್ಲಿ ಧಾರ್ಮಿಕ ಕೈಂಕರ್ಯಗಳಿಂದ ಶೀಘ್ರದಲ್ಲಿಯೇ ಪುಣ್ಯ ಪ್ರಾಪ್ತಿ ಲಭಿಸುತ್ತದೆ. ಭಗವಂತ ಕೇವಲ ಬ್ರಾಹ್ಮಣ, ಲಿಂಗಾಯತರ ಸ್ವತ್ತಲ್ಲ, ಎಲ್ಲರ ಸ್ವತ್ತಾಗಿದೆ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು, ಪೋಷಕರು ತಮ್ಮ ಮಕ್ಕಳನ್ನು ಹತೋಟಿಯಲ್ಲಿಟ್ಟುಕೊಂಡು ಉತ್ತಮವಾಗಿ ಬೆಳೆಸಿದರೆ ಸತøಜೆಗಳಾಗಿ ಸಮಾಜವನ್ನು ಬೆಳಗುತ್ತಾರೆ. ಯಾವುದೇ ಕಾರಣಕ್ಕೂ ಮಕ್ಕಳಲ್ಲಿ ದ್ವೇಷ, ಅಸೂಯೆ ಭಾವನೆ ಬಿತ್ತಬಾರದು. ಸಹೋದರತ್ವ ಬೆಳಸಬೇಕಿದೆ. ಯಾರೂ ದುರಾಭ್ಯಾಸ ಮತ್ತು ದುಷ್ಚಟಗಳಿಂದ ಉದ್ಧಾರವಾದ ಉದಾಹರಣೆಗಳಿಲ್ಲ. ಭಗವಂತನ ಸ್ಮರಣೆ, ಸಂಸ್ಕೃತಿ, ಸದ್ಬಾವನೆಯಿಂದ ಸಂಸ್ಕಾರವಂತರಾಗಿ ದೇಶವನ್ನು ಬೆಳಗಿಸಿದ್ದಾರೆ ಎಂದು ಹೇಳಿದರು.
ಭಗವಂತನ ಸ್ಮರಣೆಯಿಂದ ಸಾರ್ಥಕ ಬದುಕು: ಪೂರ್ವದಲ್ಲಿ ಭಜನೆ ಮನೆ, ರಾಮ ಮಂದಿರಗಳಿದ್ದವು. ಅಲ್ಲಿ ದೇವರ ನಾಮ, ಭಗವಂತನ ಕುರಿತು ಕೀರ್ತನೆಗಳು ನಡೆಯುತ್ತಿದ್ದವು. ಈಗ ಏನಿದ್ದರೂ ಮೊಬೈಲ್ ಸಂಸ್ಕೃತಿಯಾಗಿದೆ. ಇದರಿಂದ ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. 12ನೇ ಶತಮಾನದಲ್ಲೇ ಜಾತ್ಯತೀತವಾಗಿ ಲಿಂಗಾಧಾರಣೆ ಮಾಡಿ ಶರಣರ ವಚನ, ತತ್ವಗಳನ್ನು ತಿಳಿಸಲಾಗುತ್ತಿತ್ತು. ರಾಮಾನುಜಾಚಾರ್ಯರು ಸಹ ಓಂ ನಮೋ ನಾರಾಯಣ ಪಠಣ ಮಾಡಿಸುತ್ತಿದ್ದರು. ಎಲ್ಲವೂ ಭಗವಂತನ ಸ್ಮರಣೆ ಸಾರ್ಥಕ ಬದುಕಿಗೆ ನಾಂದಿಯಾಗುತ್ತದೆ. ಗಂಗಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಸೇವೆ ನಿಜಕ್ಕೂ ಶಾಶ್ವತವಾದ ಸೇವೆಯಾಗಿದೆ ಎಂದು ತಿಳಿಸಿದರು.
ಶಾಶ್ವತ ಕಾಯಕ ನಿಷ್ಟೆ ರೂಢಿಸಿಕೊಳ್ಳಿ: ಗದ್ದುಗೆ ಮಠದ ಮಠಾಧ್ಯಕ್ಷ ಮಹಂತೇಶ ಸ್ವಾಮೀಜಿ ಮಾತನಾಡಿ, ದಯಯೇ ಧರ್ಮದ ಮೂಲವಯ್ಯ, ದಾನ, ಧರ್ಮ ಮಾಡುವುದರಿಂದ ಸಾರ್ಥಕ ಬದುಕು ಕಾಣಬಹುದು. ನಾವು ನೆಮ್ಮದಿಯಿಂದ ಮಾಡುವ ಮಹತ್ಕಾರ್ಯಗಳು ಭಗವಂತ ಸಂತೃಪ್ತನಾಗುತ್ತಾನೆ. ತಾಯಿ ಗಂಗಮ್ಮ ದೇವಿ ಭೂ ಮಂಡಲವನ್ನೇ ಪವಿತ್ರಗೊಳಿಸುವ ಶಕ್ತಿವಂತಳು. ಮಹಾತಾಯಿಯ ಸೇವೆ ಮಾಡುವುದು ಮನುಜ ಧರ್ಮ. ಕೆರೆ, ಕಟ್ಟೆ ಕಟ್ಟಿಸಿ, ಬಾವಿ ತೋಡಿಸಿ ಜೀವ ನದಿ ಗಂಗೆಯನ್ನು ಭೂಮಿಯ ಮೇಲೆ ತರುವಂತ ಶಾಶ್ವತವಾದ ಕಾಯಕ ನಿಷ್ಟೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇವಿಗೆ ವಿಶೇಷ ಅಲಂಕಾರ: ಈ ವೇಳೆ ಗಂಗಮ್ಮದೇವಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಮತ್ತು ರಮೇಶ್ ಅವರು ಗೋಪುರದ ಕಳಸ ಸ್ಥಾಪನೆ, ಕುಂಬಾಭಿಷೇಕ ನೆರವೇರಿಸಿದರು.
ದೇವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ಗಂಗಾ ಪೂಜೆ, ದೇವಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು. ನಾದಸಂಧೂರಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕುರುಕ್ಷೇತ್ರ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ವಿಜಯಶಕ್ತಿ ಗುರೂಜಿ, ಶಿವಗಂಗೆ ಮಹಾಪೀಠ ಸಂಸ್ಥಾನದ ಜ್ಞಾನನಂದಪುರಿ ಸ್ವಾಮೀಜಿ, ನೀಲಕಂಠಚಾರ್ಯ ಸ್ವಾಮೀಜಿ, ಮಾಜಿ ಸಚಿವ ಅಂಜನಮೂರ್ತಿ, ಗಂಗರಂಗಯ್ಯ, ವೆಂಕಟೇಶಪ್ಪ, ರವಿಕುಮಾರ್, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಬಿ.ವಿ.ಜಯರಾಂ, ರಾಜಮ್ಮ, ರಾಮಣ್ಣ, ಹೇಮಂತ್ ಕುಮಾರ್, ರೇವಣ್ಣ, ಜಯರಾಮು, ರಾಜಮ್ಮ ಸೇರಿದಂತೆ ಅನೇಕರು ಹಾಜರಿದ್ದರು.