ಅನ್ನ, ಅಕ್ಷರ, ಜ್ಞಾನ ಸೇರಿದಂತೆ ನಿತ್ಯ ತ್ರಿವಿಧ ದಾಸೋಹ ತತ್ವದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾಯಕಯೋಗಿ, ಸಂತರ ಸಂತ, ಶತಾಯುಷಿ ಡಾ.ಸಿದ್ದಗಂಗಾ ಶ್ರೀ ಅಪಾರ ಶಿಷ್ಯ ವೃಂದ, ಅಸಂಖ್ಯಾತ ಭಕ್ತರ ಬಳಗವನ್ನು ಹೊಂದಿದವರು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದ ಮಾದರಿ ಸಂತ ಅವರಾಗಿದ್ದರು.
ಬರೋಬ್ಬರಿ 111 ವಸಂತಗಳನ್ನು ಕಂಡಿದ್ದ ಡಾ.ಶಿವಕುಮಾರ ಸ್ವಾಮಿ ಮಾಗಡಿ ತಾಲೂಕಿನ ವೀರಾಪುರದ ಹೊನ್ನೇಗೌಡ, ಗಂಗಮ್ಮ ದಂಪತಿಯ 13ನೇ ಪುತ್ರನಾಗಿ 1907ರ ಏಪ್ರಿಲ್ 1ರಂದು ಜನಿಸಿದ್ದರು. ಶಿವಣ್ಣ ಎಂಬ ಅಂದಿನ ಬಾಲಕ ಶಿವಕುಮಾರ ಸ್ವಾಮೀಜಿಯಾಗಿ ನಡೆದಾಡುವ ದೇವರು ಎಂದೇ ಜನಾನುರಾಗಿಯಾಗಿದ್ದರ ಹಿಂದೆ ರೋಚಕ ಕಥಾನಕವಿದೆ.
ವೀರಾಪುರದಲ್ಲಿನ ಕೂಲಿಮಠದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶೈಕ್ಷಣಿಕ ಜೀವನ ಆರಂಭವಾಗಿತ್ತು. ಬಳಿಕ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮೆಟ್ರಿಕ್ಯೂಲೇಷನ್, ಬೆಂಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು.
ಬೆಂಗಳೂರಿನಲ್ಲಿ ಶಿವಣ್ಣ ಶಿಸ್ತುಬದ್ಧ ಜೀವನ ನಡೆಸುತ್ತಿದ್ದ ವೇಳೆಯೂ ಸಿದ್ದಗಂಗಾಮಠದ ಒಡನಾಟ ಮುಂದುವರಿದಿತ್ತು. ಹಿರಿಯ ಗುರುಗಳಾದ ಉದ್ದಾನ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗ ಶಿವಣ್ಣನಿಗೆ ಬೆನ್ನೆಲುಬಾಗಿತ್ತು.
ವಿಧಿ ನಿಯಮ ಮೀರಲು ಸಾಧ್ಯವೆ ಎಂಬಂತೆ 1930ರಲ್ಲಿ ಸಿದ್ದಗಂಗಾ ಮಠದಲ್ಲೊಂದು ಬರಸಿಡಿಲಿನ ಘಟನೆ ನಡೆದು ಬಿಟ್ಟಿತ್ತು. ಹೌದು ಉದ್ದಾನ ಶಿವಯೋಗಿಗಳ ಕಿರಿಯ ಶ್ರೀ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾಗಿದ್ದರು. ಮರುಳಾರಾಧ್ಯರ ಕ್ರಿಯಾ ವಿಧಿಗೆ ಆಗಮಿಸಿದ್ದ ಶಿವಣ್ಣನತ್ತ ದೃಷ್ಟಿ ಇಟ್ಟಿದ್ದ ಉದ್ದಾನ ಸ್ವಾಮೀಜಿಗಳು ಎಲ್ಲರ ಸಮ್ಮುಖದಲ್ಲಿ ಶಿವಣ್ಣನೇ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಎಂದು ಘೋಷಿಸಿಬಿಟ್ಟಿದ್ದರು.
ಕಿರಿಯ ಸ್ವಾಮೀಜಿಯ ಅಂತ್ಯಕ್ರಿಯೆಗೆ ಆಗಮಿಸಿದ್ದ 22ರ ಹರೆಯದ ಶಿವಣ್ಣ ಬೆಂಗಳೂರಿಗೆ ತೆರಳುವಾಗ ಕಾವಿ, ರುದ್ರಾಕ್ಷಿ ಧರಿಸಿ ಸನ್ಯಾಸಿಯಾಗಿ ಶ್ರೀ ಶಿವಕುಮಾರ ಸ್ವಾಮೀಜಿಯಾಗಿ ಬಿಟ್ಟಿದ್ದರು. ಸನ್ಯಾಸತ್ವ ಸ್ವೀಕಾರದ ನಂತರವೂ ಶಿವಣ್ಣ ವಿದ್ಯಾಭ್ಯಾಸ ಮುಂದುವರಿಸಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದರಂತೆ. ಆದರೂ ಉದ್ಯಾನನಗರಿಯಲ್ಲಿ ಸನ್ಯಾಸತ್ವದ ರೀತಿ, ರಿವಾಜುಗಳನ್ನು ಸಂಪ್ರದಾಯಬದ್ಧವಾಗಿ ಪಾಲಿಸುತ್ತ ವಿದ್ಯಾಭ್ಯಾಸ ಪೂರ್ಣಗೊಳಿಸಿ ಮಠದ ಏಳಿಗೆಗೆ ತನ್ನನ್ನು ಮೀಸಲಿಟ್ಟಿದ್ದರು. ಉದ್ಧಾನ ಶಿವಯೋಗಿಗಳು ಶಿವೈಕ್ಯರಾದ ನಂತರ ಮಠದ ಸಕಲ ಆಡಳಿತ, ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ವಹಿಸಿಕೊಂಡ ಮೇಲೆ ಸಿದ್ದಗಂಗಾ ಮಠ ಬೆಳೆದ ಇತಿಹಾಸ ನಮ್ಮ ಕಣ್ಮುಂದೆ ಇದೆ.
ಇಳಿವಯಸ್ಸಿನಲ್ಲೂ ಧಣಿವರಿಯದೇ ಕಾರ್ಯನಿರತರಾಗಿ ಕಾಯಕವೇ ಕೈಲಾಸ ಎಂಬ ನುಡಿಯಂತೆ ನಡೆದು ತೋರಿಸಿದ್ದ ಸಿದ್ದಗಂಗಾಶ್ರೀಗೆ ಇದು ಅಕ್ಷರಗಳ ನುಡಿನಮನ…