ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಶುಕ್ರವಾರಕ್ಕಿಂತ ಶನಿವಾರ ಹೆಚ್ಚು ಚೇತರಿಕೆ ಕಂಡು ಬಂದಿದ್ದು, ನಾಲ್ಕೈದು ಗಂಟೆ ಸ್ವಯಂ ಉಸಿರಾಟ ನಡೆಸುತ್ತಿರುವುದು ಭಕ್ತರಲ್ಲಿ ಹರ್ಷ ಉಂಟು ಮಾಡಿದೆ. ಈ ಮಧ್ಯೆ, ಶ್ರೀಗಳ ಆರೋಗ್ಯ ವಿಚಾರಿಸಲು ಶನಿವಾರವೂ ಅನೇಕ ಗಣ್ಯರು ಮಠಕ್ಕೆ ಭೇಟಿ ನೀಡಿ ಶ್ರೀಗಳು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿದರು.
ಹಿರಿಯ ಶ್ರೀಗಳಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಇಷ್ಟಲಿಂಗ ಪೂಜೆ ಮಾಡಲು ಸಾಧ್ಯವಾಗದೇ ಇರುವುದರಿಂದ ಕಿರಿಯ ಶ್ರೀಗಳಾದ ಶ್ರೀ ಸಿದಟಛಿಲಿಂಗ ಸ್ವಾಮೀಜಿ ಹಿರಿಯ ಶ್ರೀಗಳು ಚಿಕಿತ್ಸೆ ಪಡೆಯುತ್ತಿರುವ ಹಳೆಯ ಮಠದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದರು.
ಕಿರಿಯ ಶ್ರೀಗಳು ಮುಂಜಾನೆ ಇಷ್ಟಲಿಂಗ ಪೂಜೆ ನಡೆಸುತ್ತಿದ್ದ ಸಮಯದಲ್ಲಿ ಶ್ರೀಗಳ ಪಾದ ಸ್ಪರ್ಶಿಸಿದಾಗ ಶ್ರೀಗಳು ಕಣ್ಣು ತೆರೆದು ನೋಡಿದರು ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
ಕಾಯಕಯೋಗಿಗಳಾದ ಶ್ರೀಗಳು ಸುಮಾರು 10 ಸೆಕೆಂಡ್‌ಗಳ ಕಾಲ ಕಣ್ಣು ತೆರೆದು ನೋಡಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆ ಆತಂಕ ಮುಳುಗಿದ್ದ ಭಕ್ತ ಸಮೂಹದಲ್ಲಿ ಈಗ ಸ್ವಲ್ಪ ಮಟ್ಟಿನ ಸಂತಸ ಮನೆಮಾಡಿದೆ.
ಚೆನ್ನೈನ ಡಾ.ರೇಲಾ ಆಸ್ಪತ್ರೆಯ ಮಾರ್ಗದರ್ಶನದಲ್ಲಿ ಸಿದ್ಧಗಂಗಾ ಆಸ್ಪತ್ರೆ ಡಾ. ಪರಮೇಶ್ ನೇತೃತ್ವದ ವೈದ್ಯರ ತಂಡ ಶ್ರೀಗಳ ಆರೋಗ್ಯದ ಮೇಲೆ ನಿಗಾ ವಹಿಸಿದೆ. ಶನಿವಾರ ಮುಂಜಾನೆ 5 ಗಂಟೆಗೆ ಶ್ರೀಗಳ ರಕ್ತಪರೀಕ್ಷೆ ಸಹ ನಡೆಸಲಾಗಿದ್ದು, ಸೊಂಕು ಕಡಿಮೆಯಾಗಿದೆ, ಪ್ರೋಟಿನ್ ಅಂಶ ಹೆಚ್ಚುತ್ತಿದೆ, ದೇಹದಲ್ಲಿ ನೀರು ಸೇರುವುದು ಕಡಿಮೆಯಾಗಿದೆ. ಶನಿವಾರಶ್ರೀಗಳು ಚೇತರಿಕೆಯಾಗುತ್ತಿದ್ದಾರೆ ಎಂದು ಡಾ. ಪರಮೇಶ್ ತಿಳಿಸಿದರು.
ಚೇತರಿಕೆ ವಿಸ್ಮಯ
ಪೂಜ್ಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ನಮಗೆ ಮತ್ತು ಮಠದ ಮಕ್ಕಳಿಗೆ ತುಂಬಾ ಸಂತಸ ತಂದಿದೆ. ಇದೊಂದು ವಿಸ್ಮಯ.
● ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಿದಟಛಿಗಂಗಾ ಮಠದ ಕಿರಿಯ ಶ್ರೀಗಳು