Advertisement

ಮಕ್ಕಳಲ್ಲಿ ದೇವರ ಕಂಡಿದ್ದ ಸಿದ್ಧಗಂಗಾ ಶ್ರೀ

06:33 AM Feb 01, 2019 | Team Udayavani |

ಕಲಬುರಗಿ: ನಡೆದಾಡುವ ದೇವರು ಎಂದೇ ಖ್ಯಾತರಾದ ಲಿಂಗೈಕ್ಯ ಡಾ| ಶಿವಕುಮಾರ ಸ್ವಾಮೀಜಿ ಮಕ್ಕಳಲ್ಲಿ ದೇವರನ್ನು ಕಂಡ ತಾಯ್ತನದ ಮಹಾಮೂರ್ತಿ ಎಂದು ಗೋದುತಾಯಿ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ನಿಂಗಮ್ಮ ಪತಂಗೆ ಹೇಳಿದರು.

Advertisement

ನಗರದ ವೀರಶೈವ ಕಲ್ಯಾಣ ಮಂಪಟದಲ್ಲಿ ಗುರುವಾರ ಅಖೀಲ ಭಾರತ ವೀರಶೈವ ಮಹಾಸಭಾ ಮತ್ತು ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಲಿಂ. ಡಾ| ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಉನ್ನತ ವ್ಯಾಸಂಗ ಮಾಡಿದ್ದ ಶಿವಣ್ಣ ಸ್ವಾರ್ಥ ಜೀವನಕ್ಕೆ ಜೋತು ಬೀಳದೆ ಗುರುಗಳ ಅಪ್ಪಣೆಯಂತೆ ಸನ್ಯಾಸತ್ವ ಸ್ವೀಕರಿಸಿ ಡಾ| ಶಿವಕುಮಾರ ಸ್ವಾಮೀಜಿಗಳಾಗದರು. ಹಳ್ಳಿ-ಹಳ್ಳಿಗೆ ಸುತ್ತಿ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ತಂದೆ-ತಾಯಿಯನ್ನು ಪ್ರೇರೇಪಿಸಿ ಅವರು ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿದರು ಎಂದರು.

ಅಂದು 100 ವಿದ್ಯಾರ್ಥಿಗಳಿಂದ ಆರಂಭವಾಗಿದ್ದ ಸಿದ್ಧಗಂಗಾ ಮಠ ಇಂದು 10 ಸಾವಿರ ವಿದ್ಯಾರ್ಥಿಗಳನ್ನು ಹೊಂದಿದೆ ಎಂದರೆ ಇದಕ್ಕೆ ಡಾ| ಶಿವಕುಮಾರ ಸ್ವಾಮೀಜಿಗಳ ಶ್ರಮವೇ ಕಾರಣ. ಸಿದ್ಧಗಂಗಾ ಮಠದಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ ಅನ್ನ ಮತ್ತು ವಸತಿ ಒದಗಿಸುವ ಮೂಲಕ ತ್ರಿವಿಧ ದಾಸೋಹಿಗಳಾದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕಾದ ಡಾ| ಶಿವಕುಮಾರ ಸ್ವಾಮೀಜಿ ಎಲ್ಲರಿಗೂ ಮಾದರಿಯ ಸಂತ ಎಂದು ಸ್ಮರಿಸಿದರು.

ಸಾರಂಗ ಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಸಿದ್ಧಗಂಗಾ ಶ್ರೀಗಳ ವಿದ್ಯಾದಾನ ಫಲದಿಂದ ಲಕ್ಷಾಂತರ ವಿದ್ಯಾರ್ಥಿಗಳು ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಉತ್ತಮ ಜೀವನ ನಡೆಸುತ್ತಿದ್ದಾರೆ. ಹೈದ್ರಾಬಾದ್‌-ಕರ್ನಾಟಕ ಭಾಗದ ವಿದ್ಯಾರ್ಥಿಗಳ ಮೇಲೂ ಶ್ರೀಗಳ ಆಶೀರ್ವಾದ ಇದೆ. ಯಾರನ್ನೂ ಬೇಧ-ಭಾವದಿಂದ ಕಾಣದ ಡಾ| ಶಿವಕುಮಾರ ಸ್ವಾಮೀಜಿಗಳು ಮಾನವ ತತ್ವಗಳ ಹರಿಕಾರರು. ಅವರ ಬದುಕು ಮತ್ತು ತತ್ವಗಳು ಎಲ್ಲರೂ ಅನುರಿಸಬೇಕೆಂದು ಹೇಳಿದರು.

Advertisement

ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳಾದ ವೀರಶೈವ ಮಹಾಸಭಾದ ಅಧ್ಯಕ್ಷ ಅರುಣಕುಮಾರ ಪಾಟೀಲ, ಪತ್ರಕರ್ತ ದೇವೇಂದ್ರಪ್ಪ ಆವಂಟಿ ಮಾತನಾಡಿ, ಡಾ| ಶಿವಕುಮಾರ ಸ್ವಾಮೀಜಿಗಳ ಹೇಳಿಕೊಟ್ಟ ಪಾಠ ಹಾಗೂ ಮಠದಲ್ಲಿ ತಾವು ಕಳೆದ ದಿನಗಳನ್ನು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಕಲ್ಯಾಣರಾವ ಪಾಟೀಲ, ವಿಶ್ವಜ್ಯೋತಿ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಸೇರಿದಂತೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next