Advertisement
ನಾಡಿನೆಲ್ಲೆಡೆ ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಅನ್ನ ಹಾಗೂ ಅಕ್ಷರ ಕಲಿತವರು ಅತ್ಯುನ್ನತ ಹುದ್ದೆಗೇರಿ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದಾರೆ. 1975 ರಲ್ಲಿ ಶಿಕ್ಷಣ ಕ್ರಾಂತಿ ಆರಂಭಿಸಿದ ಶ್ರೀಗಳು ಮೊದಲಿಗೆ ಎರಡು ಸಾವಿರ ವಿದ್ಯಾರ್ಥಿಗಳ ಶಾಲೆ ತೆರೆದು ನಂತರ 1977ರಲ್ಲಿ 4 ಸಾವಿರ ವಿದ್ಯಾರ್ಥಿಗಳ ಶಿಕ್ಷಣ ಸಂಸ್ಥೆಯಾಗಿ ಪ್ರಸ್ತುತ 15 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ 128 ಶಿಕ್ಷಣ ಸಂಸ್ಥೆಗಳಾಗಿವೆ. ನಿತ್ಯ ಮಠದಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ ಅನ್ನ ಹಾಗೂ ವಸತಿ ವ್ಯವಸ್ಥೆಯಿದೆ. ತಾಂತ್ರಿಕ ವಿಶ್ವವಿದ್ಯಾಲಯ, 57 ಪ್ರೌಢಶಾಲೆ, 12 ಪದವಿಪೂರ್ವ ಕಾಲೇಜು, 7 ಹಿರಿಯ ಪ್ರಾಥಮಿಕ ಶಾಲೆಗಳು ಮಠದ ವತಿಯಿಂದ ನಡೆಸಲ್ಪಡುತ್ತಿವೆ.
Related Articles
Advertisement
ನೂರು ವರ್ಷಗಳ ಹಿಂದೆ ಪಾಕಶಾಲೆಯಲ್ಲಿ ಅನ್ನದಾಸೋಹಕ್ಕಾಗಿ ಹಚ್ಚಿದ ಒಲೆ ಇಂದಿಗೂ ಆರಿಲ್ಲ ಎಂದರೆ ಇಲ್ಲಿಯ ಅನ್ನದಾಸೋಹದ ಪರಿ ಅರ್ಥವಾದೀತು. ಏಕಕಾಲದಲ್ಲಿ 3 ಸಾವಿರ ಮಂದಿ ಕುಳಿತ ಊಟ ಮಾಡಬಹುದಾದಷ್ಟು ಸುಸಜ್ಜಿತ ಪ್ರಸಾದ ನಿಲಯ, ಮೂರು ಸಾವಿರ ಕೊಠಡಿಗಳ ವ್ಯವಸ್ಥೆ ಮಠದ ಸೇವೆಗೆ ಸಾಕ್ಷಿಯಾಗಿದೆ. ಇಂಥದ್ದೊಂದು ವ್ಯವಸ್ಥೆ ಕಲ್ಪಿಸಿದವರು ಶಿವಕುಮಾರಸ್ವಾಮಿಗಳು.
ಶ್ರೀ ಕ್ಷೇತ್ರದಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ನಡೆಯುವ ಜಾನುವಾರ ಜಾತ್ರೆಗೆ ಕರ್ನಾಟಕ, ಕೇರಳ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದಿಂದ ಜಾನುವಾರುಗಳು ಬರುತ್ತ¤ವೆ. ಉತ್ತಮ ರಾಸುಗಳಿಗೆ ಬಹುಮಾನ ಸಹ ನೀಡಲಾಗುತ್ತದೆ. ಜಾತ್ರೆ ಸಂದರ್ಭದಲ್ಲಿ ರೈತರಿಗೆ ಕೃಷಿ, ಕೈಗಾರಿಕೆ ಕ್ಷೇತ್ರದ ಸಂಶೋಧನೆಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. 16 ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನ ನಾಡಿನಾದ್ಯಂತ ಮನೆ ಮಾತಾಗಿದೆ.
ಪ್ರದರ್ಶನದಲ್ಲಿ ರಾಜ್ಯ ಸರ್ಕಾರದ ಇಲಾಖೆಗಳೂ ಪಾಲ್ಗೊಳ್ಳುವುದು ವಿಶೇಷ. ಆ ಮಟ್ಟಿಗೆ ಸಿದ್ಧಗಂಗಾ ಮಠದಲ್ಲಿ ನಡೆಯುವ ಜಾತ್ರೆ ಜನೋಪಯೋಗಿ. ಇದನ್ನು ಆರಂಭಿಸಿದವರು ಶಿವಕುಮಾರಸ್ವಾಮಿಗಳು.
ಶ್ರೀಮಠದಿಂದ ನಾಲ್ಕು ದಶಕಗಳಿಂದ ಹೊರತರುತ್ತಿರುವ “ಸಿದ್ಧಗಂಗಾ’ ಮಾಸಪತ್ರಿಕೆಯು ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ಅಧ್ಯಾತ್ಮಿಕ ಮಾಹಿತಿ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದೆ. ನೈತಿಕ, ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಜೀವನದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ.
ಶಿವಕುಮಾರ ಸ್ವಾಮಿಗಳ ಸಾಧನೆ ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ರಾಜ್ಯ ಸರ್ಕಾರವು ಪರಮೋತ್ಛ ನಾಗರಿಕ ಗೌರವ ಕರ್ನಾಟಕ ರತ್ನ ಪ್ರಶಸ್ತಿ ನೀಡಿತ್ತು. ಕೇಂದ್ರ ಸರ್ಕಾರ 2015 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ದೇಶದ ಹಾಗೂ ನಾಡಿನ ಸಮಸ್ತರಿಂದ ಭಾರತರತ್ನ ನೀಡುವಂತೆ ವಿನಮ್ರ ಮನವಿಯೂ ಇತ್ತು-ಇದೆ.
ಒಟ್ಟಾರೆ, ಶಿವಕುಮಾರಸ್ವಾಮಿಗಳ ಸೇವೆಯನ್ನು, ಅವರ ತೋರಿಸಿಕೊಟ್ಟ ಮಾರ್ಗವನ್ನು ನಾಡಿನ ಜನತೆ ಎಂದಿಗೂ ಮರೆಯುವುದಿಲ್ಲ.