Advertisement

ಶ್ರೀಗಳ ಹೇಳಿಕೆ ತಿರುಚಿದ್ರೆ ನನ್ನ ಕುಟುಂಬ ಸರ್ವನಾಶವಾಗ್ಲಿ !

09:47 AM Sep 12, 2017 | |

ವಿಜಯಪುರ:ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತಾಗಿ ಸಿದ್ದಗಂಗಾ ಶ್ರೀಗಳ ಹೇಳಿಕೆ ನಾನು ತಿರುಚಿಲ್ಲ. ಬೇಕಾದರೆ ನಾನು ಕ್ಷೇತ್ರದಲ್ಲಿ ಪ್ರಮಾಣ ಮಾಡಲು ಸಿದ್ದ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಮಂಗಳವಾರ ಸವಾಲು ಹಾಕಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್‌ ‘ನಾನು ಸಿದ್ದಗಂಗಾ ಶ್ರೀಗಳ ಹೇಳಿಕೆ ತಿರುಚಿಲ್ಲ. ಭಾನುವಾರ ಮಠಕ್ಕೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಲು ತೆರಳಿದ್ದೆ. ಈ ವೇಳೆ ಕಿರಿಯ ಶ್ರೀಗಳು ಪ್ರಸಾದ ಮಾಡಿಕೊಂಡು ಹೋಗಲು ಆಹ್ವಾನ ನೀಡಿದ್ದರು. ನಾನು ಕಾರ್ಯ ಒತ್ತಡದಿಂದ ಬೆಂಗಳೂರಿಗೆ ಹೊರಟಿದ್ದೆ. ಸುಮಾರು 1 ಕಿ.ಮೀ ಪ್ರಯಾಣಿಸಿದ ವೇಳೆ ಮಠದ ಅಧಿಕಾರಿಯೊಬ್ಬರು ಕರೆ ಮಾಡಿ ಹಿರಿಯ ಶ್ರೀಗಳು ನಿಮಗೆ ಆಶೀರ್ವಾದ ಮಾಡಲಿದ್ದಾರೆ ಬನ್ನಿ ಎಂದು ಕರೆದಿದ್ದು, ನಾನು ಕೂಡಲೇ ಮಠಕ್ಕೆ ವಾಪಾಸಾಗಿ ಶ್ರೀಗಳ ಆಶೀರ್ವಾದ ಪಡೆದಿದ್ದೆ’. 

‘ಈ ವೇಳೆ ಶ್ರೀಗಳ ಬಳಿ ನಮ್ಮ ಹೋರಾಟದ ಬಗ್ಗೆ ಸ್ಪಷ್ಟ ವಿವರಣೆ ನೀಡಿದ್ದೆ. ಆಗ ಶ್ರೀಗಳು ಸ್ಪಷ್ಟವಾಗಿ ಹೇಳಿದ್ದರು, ”ಪ್ರತ್ಯೇಕ ಧರ್ಮ ಬೇಕು” ಎಂದು. ನಾನು ಸ್ಪಷ್ಟವಾಗಿ ಕೇಳಿಸಿಕೊಂಡು,  ಹೋರಾಟ ಮುಂದುವರಿಸುವುದಾಗಿ  ಹೇಳಿ ಆಶೀರ್ವಾದ ಪಡೆದು ಬಂದಿದ್ದೆ’ ಎಂದಿದ್ದಾರೆ. 

‘ನನ್ನ ತಾಯಿ, ಪತ್ನಿ ಮತ್ತು ಮಕ್ಕಳೊಂದಿಗೆ ಸಿದ್ದಗಂಗಾ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡುತ್ತೇನೆ. ಮಾಧ್ಯಮಗಳ ಎದುರು ಮಠದ ಕಿರಿಯ ಶ್ರೀಗಳು, ಮಠದ ಅಧಿಕಾರಿ ಶಿವಕುಮಾರ್‌ ಅವರ ಎದುರೇ ಪ್ರಮಾಣ ಮಾಡುತ್ತೇನೆ.ಎಲ್ಲಿಯಾದರೂ ನಾನು ಡಾ. ಶಿವಕುಮಾರ ಸ್ವಾಮೀಜಿಗಳ ಹೇಳಿಕೆ  ಒಂದು ಸಣ್ಣ ಸಾಸಿವೆ ಕಾಳಿನಷ್ಟು ತಿರುಚಿದ್ರೆ, ಶ್ರೀಗಳ ಶಾಪ ನಮಗೆ ತಟ್ಟಲಿ. ನಾನು ಸುಳ್ಳು ಹೇಳಿದ್ದರೆ ನನ್ನ ಕುಟುಂಬ ಸರ್ವನಾಶವಾಗಲಿ’ ಎಂದರು. 

‘ಯಡಿಯೂರಪ್ಪ, ಸೋಮಣ್ಣನವರಂತಹ ಬಿಜೆಪಿ ನಾಯಕರು ಪ್ರತ್ಯೇಕ ಧರ್ಮ ಹೋರಾಟದ ವಿಚಾರದಲ್ಲಿ ಅನಗತ್ಯ ಗೊಂದಲ ಹುಟ್ಟು ಹಾಕಿ ಹೋರಾಟದ ದಾರಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ’ ಎಂದು ಕಿಕಿಕಾರಿದರು. 

Advertisement

ಲಿಂಗಾಯತ ಧರ್ಮ ವಿಚಾರ ಮಹತ್ವದ ಘಟ್ಟ ತಲುಪಿದ್ದು, ಸಿದ್ಧಗಂಗಾ ಶ್ರೀಗಳೇ ಪ್ರತ್ಯೇಕ ಧರ್ಮಕ್ಕೆ ಬೆಂಬಲ ನೀಡಿದ್ದಾರೆ ಎಂದು ಎಂ.ಬಿ. ಪಾಟೀಲ್‌ ಹೇಳಿದ್ದರು. 

ಸ್ವಾಮೀಜಿ ಜೈಲಿಗೆ ಹೋಗುವುದು ಬೇಡ!
‘ಸ್ವಾಮೀಜಿಯೊಬ್ಬರು ಬಸವರಾಜ್‌ ಹೊರಟ್ಟಿ ಬಳಿ ನನ್ನನ್ನು ಸರ್ವನಾಶ ಮಾಡುವುದಾಗಿ ಹೇಳಿದ ಸಿಡಿ ಇದೆ. ಅದನ್ನು ಬಿಡುಗಡೆ ಮಾಡಿದರೆ ಅವರು ಜೈಲಿಗೆ ಹೋಗುತ್ತಾರೆ. ಆದರೆ ನಾನು ಸಿಡಿ ಬಿಡುಗಡೆ ಮಾಡುವುದಿಲ್ಲ. ಎಂ.ಬಿ.ಪಾಟೀಲ್‌ ಸ್ವಾಮೀಜಿಯೊಬ್ಬರನ್ನು ಜೈಲಿಗೆ ಕಳುಹಿಸಿದರು ಎಂದು ಜನ ಆಡಿಕೊಳ್ಳುವುದು ಬೇಡ’ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟರು.

‘ನನ್ನನ್ನು ಸರ್ವನಾಶ ಮಾಡುವ ಅಧಿಕಾರ ಸ್ವಾಮೀಜಿಗೆ ಇಲ್ಲ.ಆದರೆ ಬಸವನಾಡಿನ ಜನತೆಗೆ ಇದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next