Advertisement

ಮಠಕ್ಕೆ ಆಗಮಿಸಿದ ಡಾ.ಶಿವಕುಮಾರ ಶ್ರೀ

11:30 AM Jan 28, 2018 | |

ತುಮಕೂರು: ಭಕ್ತರ ಪಾಲಿನ “ನಡೆದಾಡುವ ದೇವರು’ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಶತಾಯುಷಿ, ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರು ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರ ಸಂಜೆ ಶ್ರೀ ಮಠಕ್ಕೆ ಆಗಮಿಸಿದರು. 

Advertisement

ಶ್ರೀಗಳು ಮಠಕ್ಕೆ ಆಗಮಿಸುವ ಸುದ್ದಿ ತಿಳಿದು ಸಾವಿರಾರು ಭಕ್ತರು ಹಾಗೂ ಮಠದ ವಿದ್ಯಾರ್ಥಿಗಳು ಅವರನ್ನು ನೋಡಲು ಸೇರಿದ್ದರು. ಗುರುವಾರ ಸಂಜೆ ಜ್ವರ ಮತ್ತು ಸುಸ್ತಿನಿಂದ ಬಳಲಿದ್ದ ಹಿನ್ನೆಲೆಯಲ್ಲಿ ಅವರಿಗೆ ಮಠದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅವರ ಪಿತ್ತಜನಕಾಂಗದಲ್ಲಿ ಬ್ಲಾಕ್‌ ಆಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಡಾ. ರವೀಂದ್ರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಅವರ ಒತ್ತಾಯದ ಮೇರೆಗೆ ಶನಿವಾರ ಮಧ್ಯಾಹ್ನ ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಮಾಡಲಾಯಿತು.

ಶ್ರೀಗಳು ಮಠಕ್ಕೆ ಆಗಮಿಸುತ್ತಿದ್ದಾರೆಂಬ ಸುದ್ದಿ ತಿಳಿದು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಮತ್ತು ಮಠದ ವಿದ್ಯಾರ್ಥಿಗಳು ರಸ್ತೆಯ ಇಕ್ಕೆಲಗಳಲ್ಲಿ ಕಾದು ನಿಂತಿದ್ದರು. ಭದ್ರತೆ ದೃಷ್ಟಿಯಿಂದ ಕ್ಯಾತ್ಸಂದ್ರ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಆಸ್ಪತ್ರೆಯಿಂದ ಶ್ರೀಮಠಕ್ಕೆ ಬರುವ ದಾರಿಯಲ್ಲಿ ವಾಹನಗಳ ಸಂಚಾರ ಇಲ್ಲದಂತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಶ್ರೀಮಠಕ್ಕೆ ಸ್ವಾಮೀಜಿಗಳು ಇದ್ದ ಕಾರು ಬರುತ್ತಲೇ ಭಕ್ತರು, ವಿದ್ಯಾರ್ಥಿಗಳು ಹರ್ಷೋದ್ಘಾರ ಮೊಳಗಿಸಿದರು.

ಲವಲವಿಕೆಯಿಂದ
ಕಾರಿನಿಂದ ಇಳಿದ ಶ್ರೀಗಳು

ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ  ಡಾ.ಶಿವಕುಮಾರ ಸ್ವಾಮೀಜಿಗಳು ಬರುತ್ತಲೇ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ಡಾ. ಪರಮೇಶ್ವರ್‌ ಅವರನ್ನು ಹಳೆಯ ಮಠಕ್ಕೆ ಕರೆದುಕೊಂಡು ಹೋದರು. ಸ್ವಾಮೀಜಿ
ಎಂದಿನಂತೆ ಲವಲವಿಕೆಯಿಂದ ಕಾರಿನಿಂದ ಇಳಿದು ಹಳೇ ಮಠಕ್ಕೆ ತೆರಳುವಾಗ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ, ಭಕ್ತಿಯಿಂದ ನಮಸ್ಕರಿಸಿದರು.

Advertisement

ಶ್ರೀಗಳು  ಆರೋಗ್ಯದಿಂದಿದ್ದಾರೆ. ಮೂತ್ರಕೋಶ ಮತ್ತು ಕರುಳಿನಲ್ಲಿ ಸಮಸ್ಯೆ ಉಂಟಾಗಿತ್ತು. ಯಾವುದೇ ತೊಂದರೆ ಆಗದಂತೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಅವರಿಗೆ ಮಠದ ವತಿಯಿಂದ ಧನ್ಯವಾದ ಅರ್ಪಿಸುತ್ತೇವೆ. ಶ್ರೀಗಳಿಗೆ 3 ದಿನ ವಿಶ್ರಾಂತಿ ಬೇಕಾಗಿದೆ. ಬಿಜಿಎಸ್‌ ಆಸ್ಪತ್ರೆ ವೈದ್ಯರು ಮಠದಲ್ಲಿ ಚಿಕಿತ್ಸೆ ನೀಡುತ್ತಾರೆ. ಆದ್ದರಿಂದ ಭಕ್ತರಿಗೆ 3 ದಿನ ದರ್ಶನ ಇರುವುದಿಲ್ಲ, ಸಹಕರಿಸಬೇಕು.
– ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠದ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next