ಕೂಡ್ಲಿಗಿ: ಅನ್ನ,ಅಕ್ಷರ, ಆಶ್ರಯ ನೀಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿಗಳು ಈ ಜಗತ್ತು ಕಂಡ ಮಹಾನ್ ಚೇತನರಾಗಿದ್ದು ಜಾತಿ,ಧರ್ಮ,ಭಾಷೆಯನ್ನು ಮೀರಿ ಸರ್ಕಾರ ಮಾಡದ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವ ಶ್ರೀಗಳ ಜೀವನವೇ ಜಗತ್ತಿಗೆ ಮಾದರಿಯಾಗಿದೆ ಎಂದು ಹಿರೇಮಠದ ಚಿದಾನಂದಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ವೀರಶೈವ ಸಮಾಜ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಸಿದ್ಧಗಂಗಾ ಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಸಿದು ಬಂದವರಿಗೆ ಅನ್ನ ನೀಡುವ ಸಂಸ್ಕೃತಿ ಬೆಳೆಸಿಕೊಂಡು ಬಂದಿರುವ ಡಾ| ಶಿವಕುಮಾರ ಸ್ವಾಮೀಜಿಗಳು ಇಡೀ ಜಗತ್ತಿಗೆ ಬೆಳಕಾಗಿದ್ದಾರೆ. ಈ ಮಠದಲ್ಲಿ ಓದಿರುವ ವಿದ್ಯಾರ್ಥಿಗಳು ಇಂದು ಜಗತ್ತಿನೆಲ್ಲೆಡೆ ಇದ್ದು, ಮಠದ ಅನನ್ಯ ಸೇವೆಯನ್ನು ಈಗಲೂ ಕೊಂಡಾಡುತ್ತಾರೆ. ಶ್ರೀಗಳ ಅನ್ನ, ಅಕ್ಷರ, ಆಶ್ರಯದಿಂದ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಭವಿಷ್ಯ ರೂಪಿಸಿದ್ದು, ಸಮಾಜದ ವಿಕಾಸಕ್ಕೆ ಶ್ರೀಗಳು ಪೂರಕವಾಗಿ ಕಾರ್ಯನಿರ್ವಹಿಸಿರುವುದು ಮಾತ್ರ ನಮ್ಮ ನಾಡಿನ ಹೆಮ್ಮೆಯಾಗಿದೆ ಎಂದರು.
ಯುವ ಮುಖಂಡ ಕೋಗಳಿ ಮಂಜುನಾಥ್ ಮಾತನಾಡಿ, ಸಿದ್ಧಗಂಗಾ ಶ್ರೀಗಳ ಜನಪರ ಕಾಳಜಿ, ಜಾತಿ, ಧರ್ಮದ ಎಲ್ಲೆ ಮೀರಿ ನಾಡಿನ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟಿದ್ದು, ಬಡ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ನೀಡುವ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಬಸವಾದಿ ಶರಣರಂತೆ ಕಾಯಕ ಯೋಗಿಗಳಾಗಿದ್ದ ಡಾ|ಶಿವಕುಮಾರ ಸ್ವಾಮಿಗಳು ಊರೂರು ತಿರುಗಿ ಧಾನ್ಯಗಳನ್ನು ಸಂಗ್ರಹಿಸಿ ಮಠದಲ್ಲಿ ನಿರಂತರ ಅನ್ನದಾಸೋಹ ನಡೆಸುತ್ತಾ ಬಂದಿರುವುದು ಇವರ ಮಾನವೀಯ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಿದ್ಧಗಂಗಾ ಶ್ರೀಗಳಿಗೆ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮಕ್ಕೂ ಮುಂಚೆ ನಡೆದಾಡುವ ದೇವಮಾನವರ ಭಾವಚಿತ್ರಕ್ಕೆ ಬಿಲ್ವಪತ್ರೆ ಅರ್ಪಿಸಿ ಹಣತೆ ಬೆಳಗಿಸಿ ನಮನ ಸಲ್ಲಿಸಲಾಯಿತು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಶಶಿಧರ ಗುರೂಜಿ, ಕೆ.ಎಂ.ವೀರೇಶ್, ವಿವೇಕಾನಂದ, ಸಚಿನ್‌ಕುಮಾರ್, ಗುರು, ನಾಗರಾಜ, ಮಹಾಂತೇಶ್, ಪಿ.ಶಿವರಾಜ್, ಅಮಲಾಪುರ ಚಿದಾನಂದಪ್ಪ ಇನ್ನಿತರರಿದ್ದರು.