ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಭಕ್ತರ ಆಕರ್ಷಣೆಯಾಗಿರುವ ದೇಗುಲದ ಆನೆ “ಯಶಸ್ವಿ’ ಅನಾರೋಗ್ಯಕ್ಕೆ ಒಳಗಾಗಿದೆ. ಶೆಡ್‌ನಲ್ಲಿ ವಿಶ್ರಾಂತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದೆ. ಲವಲವಿಕೆಯಿಂದಿದ್ದ ಆನೆ ನಾಲ್ಕು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದೆ.
16 ವಯಸ್ಸಿನ ಆನೆಯ ಆರೋಗ್ಯದಲ್ಲಿ ಏರುಪೇರಾಗಿದೆ. ಅಜೀರ್ಣ ಸಮಸ್ಯೆಗೆ ಒಳಗಾಗಿ ಭೇದಿ ಮಾಡುತ್ತಿದೆ. ನಾಲ್ಕು ದಿನಗಳಿಂದ ಮೆದು ಆಹಾರ ಮತ್ತು ನೀರನ್ನು ಭೇದಿ ಮಾಡುತ್ತಿದೆ. ಗುತ್ತಿಗಾರು ಪಶುವೈದ್ಯ ಕೇಂದ್ರದ ನುರಿತ ವೈದ್ಯ ಡಾ| ವೆಂಕಟಾಚಲಪತಿ ಅವರನ್ನು ಶೆಡ್‌ಗೆ ಕರೆಸಿ, ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಈ ಹಿಂದೆ ಇದ್ದ ಇಂದುಮತಿ ಆನೆ ಅನಾರೋಗ್ಯದಿಂದ ತೀರಿಕೊಂಡ ಬಳಿಕ ಕ್ಷೇತ್ರಕ್ಕೆ ಆನೆಯ ಕೊರತೆ ಇತ್ತು. ದೇಗುಲದ ಭಕ್ತ ಹೊಸಕೋಟೆಯ ಹಿಂದಿನ ಶಾಸಕ ಆನಂದ್ ಸಿಂಗ್ ಅವರು ಆನೆ ಮರಿ ಖರೀದಿಸಿ ಕೆಲ ವರ್ಷದ ಹಿಂದೆ ಸುಬ್ರಹ್ಮಣ್ಯ ದೇಗುಲಕ್ಕೆ ಕೊಡುಗೆಯಾಗಿ ನೀಡಿದ್ದರು.
ಅದಕ್ಕೆ “ಯಶಸ್ವಿ’ ಎಂದು ಹೆಸರಿಡಲಾಗಿತ್ತು. ಆನೆ ಹಿಂದೆ ಬೆಳಗ್ಗೆ 10ರ ವೇಳೆಗೆ ಆಗಮಿಸಿ ದೇಗುಲದ ಹೊರಾಂಗಣದಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರೆಲ್ಲರಿಂದ ಕಾಣಿಕೆ ಹಣ್ಣು ಹಂಪಲು ಸ್ವೀಕರಿಸಿ, ಸೊಂಡಿಲಿನಿಂದ ಆಶೀರ್ವದಿ ಸುತ್ತಿತ್ತು. ಮಧ್ಯಾಹ್ನದ ಮಹಾಪೂಜೆ ವೇಳೆ ದೇಗುಲದ ಮುಂಭಾಗದ ಬಾಗಿಲಿನ ಎದುರಿನ ಗಂಟೆ ಬಾರಿಸುತ್ತಿತ್ತು.
ಕೆಲ ಪ್ರಾಣಿ ಪ್ರಿಯರ ವಿರೋಧ ವ್ಯಕ್ತಗೊಂಡ ಬಳಿಕ ಬದಲಾವಣೆ ತಂದು ಆನೆಯ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿತ್ತು. ಈಗ ಪ್ರತಿದಿನ ಒಂದು ಬಾರಿ ದೇಗುಲಕ್ಕೆ ಆಗಮಿಸಿ ಹೊರಾಂಗಣದಲ್ಲಿ ಒಂದು ಸುತ್ತು ಬಂದ ಬಳಿಕ ಕೆಲ ಹೊತ್ತಷ್ಟೆ ದೇಗುಲದ ಹೊರಾಂಗಣದಲ್ಲಿ ಭಕ್ತರ ದರ್ಶನಕ್ಕೆ ಲಭಿಸುತ್ತಿದೆ. ಸದ್ಯ ಆನೆ ಬಹುತೇಕ ಸಮಯ ಶೆಡ್‌ನಲ್ಲೇ ಕಾಲ ಕಳೆಯುತ್ತಿದೆ.