ಬೆಂಗಳೂರು: ಕೆಎಸ್ಸಾರ್ಟಿಸಿಗೆ ಶೀಘ್ರ 2 ಸಾವಿರ ಚಾಲಕ ಕಂ ನಿರ್ವಾಹಕರ ನೇರ ನೇಮಕಾತಿಯ ಜತೆಗೆ ವಿವಿಧ ಮಾದರಿಯ ಹೊಸ ಬಸ್‌ಗಳ ಸೇರ್ಪಡೆಯಾಗಲಿದ್ದು ಬಳಿಕ ಆವಶ್ಯಕತೆಗೆ ಅನುಗುಣವಾಗಿ ಹಂತ ಹಂತವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದಲ್ಲಿ ಚಾಲಕ- ನಿರ್ವಾಹಕರ ಕೊರತೆಯಿಂದ ಗ್ರಾಮೀಣ ಭಾಗಗಳಲ್ಲಿ ಬಸ್‌ಗಳನ್ನು ಓಡಿಸದೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿರುವುದನ್ನು ಗಂಭೀರವಾಗಿ ಯಾಕೆ ಪರಿಗಣಿಸಿಲ್ಲ ಎಂಬ ವಿಧಾನಸಭಾ ಅಧಿವೇಶನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕಳೆದ ವರ್ಷದ ಜೂನ್‌ನಿಂದ ಈ ವರ್ಷದ ಜುಲೈ ಪ್ರಾರಂಭದ ವರೆಗೆ 922 ವಿವಿಧ ಮಾದರಿಯ ಬಸ್‌ಗಳನ್ನು ನಿಗಮಕ್ಕೆ ಸೇರ್ಪಡೆಗೊಳಿಸಲಾಗಿದೆ. ಮುಂದೆ 176 ಅಶ್ವಮೇಧ ಕ್ಲಾಸಿಕ್, 40 ವೋಲ್ವೊ ಸ್ಲೀಪರ್ ಹಾಗೂ ಸೀಟರ್ ಬಸ್‌ಗಳು, 70 ನಾನ್ ಎಸಿ ಸ್ಲೀಪರ್, 30 ಸೀಟರ್ ಕಂಸ್ಲೀಪರ್ ಬಸ್‌ಗಳ ಜತೆಗೆ 300 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗೆ ವಿವಿಧ ಹಂತದ ತಯಾರಿ ನಡದಿದೆ.
ಪುತ್ತೂರು ವಿಭಾಗದಿಂದ ಕಾರ್ಯಾಚರಿಸುತ್ತಿರುವ 475 ಅನುಸೂಚಿಗಳಿಗೆ 1,438 ಚಾಲನಾ ಸಿಬಂದಿ ಆವಶ್ಯಕತೆ ಇರುತ್ತದೆ. ಪ್ರಸ್ತುತ 281 ಹೊರಗುತ್ತಿಗೆ ಚಾಲಕರು ಒಳಗೊಂಡಂತೆ 1,353 ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 85 ಚಾಲಕರ ಕೊರತೆ ಇರುತ್ತದೆ ಎಂದರು.
ಪ್ರಾಕೃತಿಕ ವಿಕೋಪ ಹಾನಿಗೆ ಡಿಸಿ ಹಂತದಲ್ಲಿ ಪರಿಹಾರ ಪ್ರಸಕ್ತ ಸಾಲಿನಲ್ಲಿ ಬಂಟ್ವಾಳ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಿಂದ ಅಪಾರ ಹಾನಿ ಸಂಭವಿಸಿದ್ದು, ಬಂಟ್ವಾಳವನ್ನು ನೆರೆಪೀಡಿತ ತಾಲೂಕೆಂದು ಘೋಷಿಸಿ ವಿಶೇಷ ಅನುದಾನ ಒದಗಿಸುವಂತೆ ಶಾಸಕರು ಸರಕಾರವನ್ನು ಆಗ್ರಹಿಯಿಸಿದರು. ಇದಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಉತ್ತರಿಸಿ, ಪ್ರಾಕೃತಿಕ ವಿಕೋಪದಿಂದ ಹಾನಿ ಪ್ರಕರಣಗಳಿಗೆ ಸರಕಾರದ ಮಾರ್ಗ ಸೂಚಿಯನ್ವಯ ಪರಿಹಾರವನ್ನು ಜಿಲ್ಲಾಧಿಕಾರಿಯವರ ಹಂತದಲ್ಲಿ ಪಾವತಿಸಲಾಗುತ್ತದೆ ಎಂದು ತಿಳಿಸಿದರು.
2023ರಲ್ಲಿ ಬಂಟ್ವಾಳ ತಾಲೂಕಿನಲ್ಲಿ ಗಾಳಿ, ಮಳೆ ಯಿಂದಾಗಿ ಉಂಟಾದ ಹಾನಿಗೆ ಜಿಲ್ಲಾ ವಿಪತ್ತು ಪರಿಹಾರ ನಿಧಿಯಲ್ಲಿ 1.50 ಕೋ.ರೂ. ಬಿಡುಗಡೆಗೊಳಿಸಲಾಗಿದೆ. ವಿಪತ್ತು ಪರಿಹಾರ ನಿಧಿಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿರುವುದಿಲ್ಲ. ಪರಿಹಾರ ವಿತರಣೆಗೆ ಮಾತ್ರ ಅವಕಾಶವಿರುತ್ತದೆ ಎಂದರು.
ಕಳೆದ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಡಿ ಮನೆಹಾನಿ ಪ್ರಕರಣಗಳಿಗೆ ಸಂಬಂಧಿಸಿ ರಾಜೀವ್ ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ದಾಖಲಿಸಲು ಅವಕಾಶ ಕಲ್ಪಿಸಿದ್ದು, ತಂತ್ರಾಂಶದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಬಂಟ್ವಾಳ ಕ್ಷೇತ್ರದ ಕೆಲವು ಫಲಾನುಭವಿಗಳ ವಿವರ ದಾಖಲಿಸಲು ಕಾಲಾವಕಾಶವನ್ನು ವಿಸ್ತರಿಸುವಂತೆ ಕೋರಲಾಗಿತ್ತು ಎಂಬ ಶಾಸಕರ ಪ್ರಶ್ನೆಗೆ ಸಚಿವರು ಉತ್ತರಿಸಿ, ಬಂಟ್ವಾಳ ಕ್ಷೇತ್ರಕ್ಕೆ ಸಂಬಂಧಿಸಿ ಯಾವುದೇ ಪ್ರಕರಣ ದಾಖಲಿಸಲು ಬಾಕಿ ಇರುವುದಿಲ್ಲ ಎಂದರು.