ಜಮ್ಮು: ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪ ಹೊತ್ತಿರುವಂಥ ಜಮಾತ್-ಎ-ಇಸ್ಲಾಮಿ(ಜೆಇಎಲ್) ಸಂಘಟನೆಯ ವಿರುದ್ಧ ಇಲ್ಲಿನ ರಾಜ್ಯ ತನಿಖಾ ಸಂಸ್ಥೆ(ಎಸ್‌ಐಎ) ಶನಿವಾರ ಸರ್ಜಿಕಲ್ ದಾಳಿ ನಡೆಸಿದೆ.
ಜೆಇಎಲ್ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಿದ ಬೆನ್ನಲ್ಲೇ ಸಂಘಟನೆಯ ಎಲ್ಲ ಆಸ್ತಿಪಾಸ್ತಿಗಳನ್ನೂ ತನಿಖಾ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿದೆ.
ಕೋಟಿಗಟ್ಟಲೆ ಮೌಲ್ಯದ 11 ಆಸ್ತಿಗಳಿಗೆ ಶನಿವಾರ ತನಿಖಾ ಸಂಸ್ಥೆ ಬೀಗಮುದ್ರೆ ಜಡಿದಿದೆ. ಶುಕ್ರವಾರವಷ್ಟೇ ಅನಂತ್‌ನಾಗ್ ಜಿಲ್ಲಾ ಮ್ಯಾಜಿಸ್ಟ್ರೇಟ್, ಸಂಘಟನೆಯ ಆಸ್ತಿ ಜಪ್ತಿಗೆ ಆದೇಶಿಸಿದ್ದರು.
ಇದಾದ ಕೂಡಲೇ ಅಧಿಕಾರಿಗಳು, ಸಂಘಟನೆಯ ಎಲ್ಲ ಆಸ್ತಿಪಾಸ್ತಿಗೂ ಬೀಗ ಹಾಕಿ, ಪ್ರವೇಶ ನಿರ್ಬಂಧಿಸಿರುವುದಾಗಿ ನೋಟಿಸ್ ಅಂಟಿಸಿದ್ದಾರೆ. ಜತೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಸಂಘಟನೆಯ ಒಟ್ಟು 188 ಆಸ್ತಿಗಳನ್ನು ಪತ್ತೆಹಚ್ಚಿದ್ದಾರೆ.
ಶನಿವಾರ ಮುಟ್ಟುಗೋಲಾದ ಆಸ್ತಿಪಾಸ್ತಿಗಳ ಪೈಕಿ ನಿರ್ಮಾಣಹಂತದ 7 ಮಳಿಗೆಗಳು, 2 ಮಹಡಿಯ ಕಟ್ಟಡ, ಒಂದು ವಸತಿ ಕಟ್ಟಡ, ಹಣ್ಣಿನ ತೋಟ, ಶಾಪಿಂಗ್ ಕಾಂಪ್ಲೆಕ್ಸ್, ವಾಣಿಜ್ಯ ಕಟ್ಟಡಗಳೂ ಸೇರಿವೆ. ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತನಿಖಾಧಾಕಾರಿಗಳು ತಿಳಿಸಿದ್ದಾರೆ.