ನವದೆಹಲಿ: ಭಾನುವಾರ ಇಂಗ್ಲೆಂಡ್ ನಲ್ಲಿ ಭಾರತ ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ಚಾಂಪಿಯನ್ಸ್ ಟ್ರೋಫಿ ಹಣಾಹಣಿ ಆರಂಭಗೊಂಡಿದೆ, ಮತ್ತೊಂದೆಡೆ ಪಾಕಿಸ್ತಾನದ ಐಎಸ್ಐ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ಸುಮಾರು 14 ಮಂದಿಯನ್ನು ಭಾರತ&ಪಾಕ್ ಪಂದ್ಯಾಟದ ನಡೆಯುವ ವೇಳೆ ಕಳುಹಿಸುವ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಮೂಲಗಳು ತಿಳಿಸಿರುವುದಾಗಿ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಭಾರತ&ಪಾಕ್ ಪಂದ್ಯದ ಸಂದರ್ಭದಲ್ಲಿ ಕಾಶ್ಮೀರ ಪರವಾಗಿ ಬ್ಯಾನರ್ ಪ್ರದರ್ಶಿಸಲು 14 ಮಂದಿಯನ್ನು ಕಳುಹಿಸಲು ಐಎಸ್ಐ ಸಂಚು ರೂಪಿಸಿರುವುದಾಗಿ ವರದಿ ಹೇಳಿದೆ. ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ಚಾಂಪಿಯನ್ಸ್ ಟ್ರೋಫಿ ವೇಳೆ ಕಾಶ್ಮೀರ ಸ್ವಾತಂತ್ರ್ಯದ ಪರವಾಗಿ ಭಿತ್ತಿಫಲಕವನ್ನು ಪ್ರದರ್ಶಿಸಬೇಕೆಂದು ಐಎಸ್ಐ ತನ್ನ ಏಜೆಂಟರುಗಳಿಗೆ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.
“ಕಾಶ್ಮೀರ ಎದುರು ನೋಡುತ್ತಿದೆ”, ಕಾಶ್ಮೀರದಲ್ಲಿ ರಕ್ತಪಾತವಾಗುತ್ತಿದೆ, ಕಾಶ್ಮೀರಕ್ಕೆ ನಮ್ಮ ಬೆಂಬಲ ಹಾಗೂ ಕೂಡಲೇ ಜಮ್ಮು ಕಾಶ್ಮೀರವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿ ಎಂಬ ಘೋಷಣೆಯ ಫಲಕವನ್ನು ಪ್ರದರ್ಶಿಸುವಂತೆಯೂ ಐಎಸ್ಐ ತಾಕೀತು ಮಾಡಿರುವುದಾಗಿ ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.