Advertisement

ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಿ: ಚವ್ಹಾಣ

11:46 AM Mar 01, 2022 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ಮರಳು ಸಾಗಿಸುವ ಲಾರಿಗಳ ಸಾಗಾಟದಿಂದ ರಸ್ತೆಗಳು ಹಾಳಾಗುತ್ತಿವೆ. ಈ ಕೂಡಲೇ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹಾಗೂ ಸಂಬಂಧಿಸಿದ ಇತರೆ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಸೂಚನೆ ನೀಡಿದರು.

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಈ ವಿಚಾರ ಕುರಿತು ಮಾತನಾಡಿದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಸಾರಿಗೆ ಇಲಾಖೆ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚುವರಿ ಪ್ರಮಾಣದ ಮರಳು ಸಾಗಾಟ ನಡೆಯುತ್ತಿದೆ. ಇದರಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು. ಮಧ್ಯೆ ಪ್ರವೇಶಿಸಿದ ಸಚಿವರು, ಸಭೆಯಲ್ಲಿದ್ದ ಜಿಲ್ಲಾಧಿಕಾರಿ, ಎಸ್‌ಪಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌. ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 39 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರಲ್ಲಿ 25 ರೈತರ ಕುಟುಂಬದವರಿಗೆ ಪರಿಹಾರ ನೀಡಲಾಗಿದೆ. ಐವರು ರೈತರ ಆತ್ಮಹತ್ಯೆ ಪ್ರಕರಣಗಳು ತಿರಸ್ಕೃತವಾಗಿದ್ದು, 9 ರೈತರ ಆತ್ಮಹತ್ಯೆ ವಿಚಾರವಾಗಿ ಎಫ್‌ಎಸ್‌ಎಲ್‌ ವರದಿ ಬಾಕಿ ಇದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ್‌ ಅವರು ಮಾತನಾಡಿ, ಜಿಲ್ಲೆಯಲ್ಲಿ 5571 ಶಿಕ್ಷಕರ ಅವಶ್ಯಕತೆ ಇದೆ. 3265 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 2316 ಹುದ್ದೆಗಳು ಖಾಲಿ ಇದ್ದವು ಹಾಗಾಗಿ 1775 ಹುದ್ದೆಗಳ ಭರ್ತಿಗಳು ಮಂಜೂರಾಗಿದ್ದು ನೇಮಕ ಪ್ರಕ್ರಿಯೆ ಶುರುವಾಗಬೇಕಿದೆ. ಪ್ರಸ್ತುತ ಖಾಲಿ ಇರುವ 541 ಶಿಕ್ಷಕರ ಹುದ್ದೆಗಳಿಗೆ 346 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಇನ್ನುಳಿದ 225 ಹುದ್ದೆಗಳ ಭರ್ತಿಯಾಗಬೇಕಿದೆ ಎಂದು ವಿವರಿಸಿದರು.

ಸಂಸದ ಅಮರೇಶ್ವರ ನಾಯಕ ಮಾತನಾಡಿ, ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೂ ಟೆಕ್ಸ್‌ಟೈಲ್‌ ಪಾರ್ಕ್‌ ನೀಡಲಾಗುತ್ತಿದೆ. ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯುತ್ತಿದ್ದು, ಇಲ್ಲಿಯೇ ಜವಳಿ ಪಾರ್ಕ್‌ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಜವಳಿ ಇಲಾಖೆ ಸಹಾಯಕ ನಿರ್ದೇಶಕ ಅಜಿತ್‌ ನಾಯಕ , ಜಿಲ್ಲೆಯಲ್ಲಿ ಉದ್ದೇಶಿಸಲಾಗಿದ್ದ ಜವಳಿ ಪಾರ್ಕ್‌ಗೆ ಬೇಕಾದ ಸಾವಿರ ಎಕರೆ ಜಮೀನು ಲಭ್ಯವಿದೆ. ಆದರೆ ಕೆಲ ತಾಂತ್ರಿಕ ಕಾರಣದಿಂದಾಗಿ ಪಾರ್ಕ್‌ ಸ್ಥಾಪನೆ ಸಾಧ್ಯವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ವಿ.ಪ. ಸದಸ್ಯ ಬಿ.ಜಿ. ಪಾಟೀಲ್‌, ಭೀಮರಾಯಗುಡಿ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಬಸವರಾಜ ಚಂಡ್ರಿಕಿ, ವಿಲಾಸ್‌ ಪಾಟೀಲ್‌, ಎಸ್‌ಪಿ ಸಿ.ಬಿ. ವೇದಮೂರ್ತಿ, ಬಿ.ಎಸ್‌. ರಾಠೊಡ್‌, ಗುರುನಾಥ ಗೌಡಪ್ಪನ್ನೋರ್‌, ವೆಂಕಟೇಶ ಚಟ್ನಳ್ಳಿ ಹಾಗೂ ಇತರರಿದ್ದರು.

ಶುದ್ಧ ಕುಡಿವ ನೀರು ಮರೀಚಿಕೆ

ಜಿಲ್ಲೆಯಲ್ಲಿ ನಿರ್ಮಿಸಿದ 415 ಶುದ್ಧ ಕುಡಿವ ನೀರಿನ ಘಟಕಗಳ ಪೈಕಿ 119 ಘಟಕಗಳು ಸ್ಥಗಿತಗೊಂಡು ವರ್ಷಗಳಾದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಮತ್ತು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಪ್ರಭು ಚವ್ಹಾಣ, ಕೂಡಲೇ ಬಂದ್‌ ಆಗಿರುವ ಘಟಕ ಪುನಃ ಪ್ರಾರಂಭಿಸಲು ಸೂಚಿಸಿದ್ದರಿಂದ ಕೇವಲ 10 ದಿನದೊಳಗೆ ಪ್ರಾರಂಭಿಸುವುದಾಗಿ ಅಧಿಕಾರಿಗಳು ವಾಗ್ಧಾನ ಮಾಡಿದರು.

ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶೌಚಾಲಯ ಕಟ್ಟಿಸಿರಿ, ಅಲ್ಲಿ ಸ್ವತ್ಛತೆ ಯಾರ್‌ ಮಾಡ್ತಾರೆ. ಯಾವ ಶಾಲೆಯಲ್ಲೂ ಶೌಚಾಲಯ ಸ್ವತ್ಛತೆ ಮಾಡೋರಿಲ್ಲ. ಅಂದ ಮೇಲೆ ಶೌಚಾಲಯ ಯಾಕ್‌ ನಿರ್ಮಿಸಿರಿ ಎಂದು ಶಹಾಪುರ ಶಾಸಕ ದರ್ಶನಾಪುರ ಮತ್ತು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅಸಮಾಧಾನವ್ಯಕ್ತಪಡಿಸಿದರು.

40 ಶಾಲೆಗಳಲ್ಲಿ ಶಿಕ್ಷಕರಿಲ್ಲ

ಜಿಲ್ಲೆಯಲ್ಲಿ 40 ಶಾಲೆಗಳಿಗೆ ಶಿಕ್ಷಕರೇ ಇಲ್ಲ ಎಂದು ಡಿಡಿಪಿಐ ಮಹಾಂತಗೌಡ ಸಭೆಗೆ ತಿಳಿಸಿದ್ದರಿಂದ ಕೆರಳಿದ ಸಚಿವ ಪ್ರಭು ಚವ್ಹಾಣ, ಶೀಘ್ರದಲ್ಲೇ ಆ ಶಾಲೆಗೆ ಶಿಕ್ಷಕರನ್ನು ನೇಮಿಸಿ ಎಂದು ತಾಕೀತು ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಜಿಲ್ಲೆಗೆ ಶಿಕ್ಷಣ ಕ್ಷೇತ್ರದಲ್ಲಿ ಮಲತಾಯಿ ಧೋರಣೆ ಮಾಡಲಾಗುತ್ತಿದೆ ಬೇರೆ ಜಿಲ್ಲೆಗಳಿಗಿಂತ ಕಡಿಮೆ ಅನುದಾನ ಸಿಗುತ್ತಿದೆ ಎಂದು ದೂರಿದರು. ಈ ಕುರಿತು ಚರ್ಚೆ ಕಾವೇರುತ್ತಿದ್ದಂತೆ ಸಚಿವ ಪ್ರಭು ಚವ್ಹಾಣ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಅನುದಾನ ತರೋಣ ಎಂದು ತಣ್ಣಗಾಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next