ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಅಭೂತಪೂರ್ವ ವಿಜಯ ಸಾಧಿಸಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ ಬಿಜೆಪಿ ಮತ್ತೆ ಸರ್ಕಾರ ರಚನೆಗೆ ಮುಂದಾಗಿದೆ.
ಜೈಪುರದ ಹವಾ ಮಹಲ್ ಕ್ಷೇತ್ರದಲ್ಲಿ ಜಯಗಳಿಸಿದ ಬಿಜೆಪಿ ಶಾಸಕ ಬಲ್ಮುಕುಂದ್ ಆಚಾರ್ಯ ಅವರು ಫಲಿತಾಂಶ ಹೊರಬಿದ್ದ ಕೂಡಲೇ ಕಾರ್ಯಪ್ರವೃತ್ತರಾಗಿ ಆ ಪ್ರದೇಶದಲ್ಲಿನ ಎಲ್ಲಾ ಮಾಂಸಾಹಾರಿ ಫುಡ್ ಸ್ಟಾಲ್ ಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ.
ಅಧಿಕಾರಿಯನ್ನು ಕರೆಸಿದಿ ಎಂಎಲ್ ಎ ಬಲ್ಮುಕುಂದ್ ಆಚಾರ್ಯ, ಸಂಜೆಯೊಳಗೆ ಎಲ್ಲಾ ಮಾಂಸಾಹಾರಿ ಫುಡ್ ಸ್ಟಾಲ್ ಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ.
“ನಾನ್ ವೆಜ್ ಅನ್ನು ರಸ್ತೆಯಲ್ಲಿ ಬಹಿರಂಗವಾಗಿ ಮಾರಾಟ ಮಾಡಬಹುದೇ? ಹೌದು ಅಥವಾ ಇಲ್ಲ ಎಂದು ಉತ್ತರಿಸಿ. ನೀವು ಇದನ್ನು ಬೆಂಬಲಿಸುತ್ತೀರಾ? ಕೂಡಲೇ ರಸ್ತೆ ಬದಿಯ ಎಲ್ಲ ಮಾಂಸಾಹಾರಿ ಅಂಗಡಿಗಳನ್ನು ಮುಚ್ಚಬೇಕು. ಸಂಜೆ ನಿಮ್ಮಿಂದ ವರದಿ ತರಿಸಿಕೊಳ್ಳುತ್ತೇನೆ. ಅಧಿಕಾರಿ ಯಾರೆಂಬುದು ನನಗೆ ಮುಖ್ಯವಲ್ಲ” ಎಂದು ಬಿಜೆಪಿ ಶಾಸಕರು ಹೇಳಿದರು.
ಬಿಜೆಪಿ ಶಾಸಕ ಬಲ್ಮುಕುಂದ್ ಆಚಾರ್ಯ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೂಡಲೇ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆದೇಶಕ್ಕೆ ಪ್ರತಿಕ್ರಿಯಿಸಿ ಅದನ್ನು ಟೀಕಿಸಿದ್ದಾರೆ. ಆದೇಶವನ್ನು “ತಪ್ಪು” ಎಂದು ಕರೆದ ಓವೈಸಿ, “ಯಾರೂ ಇದನ್ನು ತಡೆಯಲು ಸಾಧ್ಯವಿಲ್ಲ. ಯಾರಾದರೂ ಮಾಂಸಾಹಾರಿ ಆಹಾರದ ಅಂಗಡಿಯನ್ನು ಸ್ಥಾಪಿಸಲು ಬಯಸಿದರೆ, ಯಾರಾದರೂ ಅದನ್ನು ಹೇಗೆ ತಡೆಯುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.