ಶುಕ್ಕೇನ್! ಜಪಾನಿನ ಹಿರೋಶಿಮ ನಗರದ ನಡುವಿನ ನದಿಯ ಪಕ್ಕದಲ್ಲಿ ಅರಳಿ ನಿಂತಿರುವ ಆರ್ಟ್ ಮ್ಯೂಸಿಯಂ. ಮಾರ್ಚ್‌ನ ಬಿರುಬಿಸಿಲಿನಲ್ಲೂ ಜಲತರಂಗದ ನಿನಾದ ಎಬ್ಬಿಸುವ ತಾಣ. ಹಿಂದ್ಯಾವತ್ತೋ ಇಲ್ಲಿ ಅಣುಬಾಂಬು ಬಿದ್ದಿತ್ತು ಎನ್ನುವುದಕ್ಕೆ ಆಧಾರಗಳೇ ಸಿಗುವುದಿಲ್ಲ!
ಹಿರೋಶಿಮಾ ನಗರದ ನಡುವೆ ನದಿಯ ತೀರಕ್ಕೆ ಒತ್ತಿ ನಿಂತಿರುವ ಆರ್ಟ್ ಮ್ಯೂಸಿಯಂನ ಒಳಗೆ ಇಂಥದ್ದೊಂದು ವಿಸ್ಮಯ ಲೋಕ ಇದೆ ಎಂದು ಊಹಿಸುವುದು ಸಾಧ್ಯವೇ ಇಲ್ಲ. ಹಿರೋಶಿಮಾ ಪ್ರಿಪೆಕ್ಚರಲ್ ಆರ್ಟ್ ಮ್ಯೂಸಿಯಂನ ಕಂದು ಸುಂದರಿ ಕಟ್ಟಡದ ಒಳಗೆ ಹಸಿರೇ ಹಾಸು ಹೊದ್ದ ಉದ್ಯಾನವೊಂದು ಅಜಾತವಾಗಿದ್ದು, ಆಕಸ್ಮಿಕವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ.
ಗೆಳೆಯ ಅರವಿಂದ್ “ಶುಕ್ಕೇನ್‌ಗೆ ಹೋಗೋಣ’ ಎಂದಾಗ, ಇದೂ ಒಂದು ಉದ್ಯಾನ ಎಂದುಕೊಂಡಿದ್ದೆ. ನೋಡಿದ ನಂತರ “ಇಂಥದ್ದು ಇದು ಒಂದೇ ಉದ್ಯಾನ’ ಎಂದೆನಿಸಿದೆ. ಶುಕ್ಕೇನ್ ಮಾರ್ಚ್‌ನ ಬಿರುಬಿಸಿಲಿನಲ್ಲೂ ಜಲತರಂಗದ ನಿನಾದ ಎಬ್ಬಿಸುವ ತಾಣ. ಅದೊಂದು ಅದ್ಭುತ ಲೋಕದ ಪಯಣ. ಜಪಾನಿ ಬದುಕಿನ ಸಾಂಸ್ಕೃತಿಕ ಕೋಶದ ಅನೇಕ ಒಳವಿವರಗಳನ್ನು ತಿಳಿಸಿಕೊಡುವ ಸ್ಥಳ. ಜಪಾನಿ ಜನರಲ್ಲಿ ಪ್ರಕೃತಿಯ ಆರಾಧನೆಗೆ ಇದ್ದ ಮಹತ್ವವನ್ನು ಸಾರಿ ಸಾರಿ ಹೇಳುವ ಪ್ರದೇಶ. ಪುಟ್ಟ ಪುಟ್ಟ ದ್ವೀಪಗಳಂಥ ರಚನೆಗಳು, ಹಳ್ಳಿಗಾಡಿನ ಕಾಲುದಾರಿಗಳು, ಚಿಕ್ಕ ಚಿಕ್ಕ ಸೇತುವೆಗಳು, ವಿಶಿಷ್ಟ ವಿಸ್ಮಯದ ಮನೆಗಳು- ಇಲ್ಲಿ ಏನಿದೆ? ಏನಿಲ್ಲ?
ಶುಕ್ಕೇನ್ ಉದ್ಯಾನದ ನಿರ್ಮಾಣ ಆರಂಭಗೊಂಡದ್ದು 1620ರ ಕಾಲಘಟ್ಟದಲ್ಲಿ. ಆಗ ಹಿರೋಶಿಮಾದ ಸಾಮಂತ ದೊರೆ ಅಥವಾ ದೈವ್ಯೋ ಆಗಿ ಪಟ್ಟಕ್ಕೆ ಬಂದವ ಅಸನೋ ನಗಾ ಕಿರ. ಆತನ ಮಂತ್ರಿ ಆಗಿದ್ದ ಉಯೆದೋ ಸೋಕೊ. ಈತನೇ ಜಪಾನೀ ಚಹಾ ಉತ್ಸವದ ಆದ್ಯಪ್ರವರ್ತಕ. ಆತ ಗಾರ್ಡನ್ ಆಫ್ ನಗಕಿರ ವಿಲ್ಲಾ ಒಂದನ್ನು ಸ್ಥಾಪಿಸಿದ. ಭೂದೃಶ್ಯಗಳನ್ನು ಅವುಗಳ ಪುಟ್ಟ ರೂಪದಲ್ಲಿ ಕಾಣಿಸಬೇಕೆನ್ನುವುದು ಆತನ ಮಹತ್ವಾಕಾಂಕ್ಷೆ. ಪರಂಪರಾಗತ ಮಾತಿನ ಪ್ರಕಾರ, ಇದು ಚೀನಾದ ಹಂಗೊÏàದಲ್ಲಿನ ಶಿಹು ತಟಾಕದ ಪ್ರತಿರೂಪವಂತೆ. ಯುನೆನ್- ಜೊ ಎಂಬ ಭತ್ತದ ಗದ್ದೆಯ ರಚನೆ ಇದೆ. ಪ್ರತಿವರ್ಷ ಸಾಮಂತ ದೊರೆ ಇಲ್ಲಿ ಪೈರು ನೆಟ್ಟು ಸಮೃದ್ಧ ಬೆಳೆಗಾಗಿ ಪ್ರಾರ್ಥಿಸುತ್ತಿದ್ದನಂತೆ. ಶುಕ್ಕೇನ್‌ನ ಮಧ್ಯದಲ್ಲಿ ತಾಕುಯಿ ಎಂಬ ಜಲಾಶಯ ಇದೆ. ಅದರಲ್ಲಿ ಹತ್ತಕ್ಕಿಂತ ಹೆಚ್ಚು ಪುಟ್ಟ ಪುಟ್ಟ ದ್ವೀಪಗಳಿವೆ. ಅದರ ಸುತ್ತ ಪುಟ್ಟ ಪುಟ್ಟ ಪರ್ವತಗಳಿವೆ. ಕಣಿವೆಗಳಿವೆ. ಚಹಾ ಕಾಟೇಜ್‌ಗಳಿವೆ. ಇವುಗಳನ್ನೆಲ್ಲ ಕೌಶಲ್ಯಪೂರ್ಣವಾಗಿ ಜೋಡಿಸಲಾಗಿದೆ. ಪರಸ್ಪರ ಸಂಪರ್ಕಿಸುವುದಕ್ಕೆ ಸಪೂರ ರಸ್ತೆ ನಿರ್ಮಿಸಲಾಗಿದೆ. ಈ ಪುಟ್ಟದಾರಿಯಲ್ಲಿ ನಡೆಯುತ್ತಾ ಇಡೀ ಉದ್ಯಾನ ಸುತ್ತಾಡುವುದು ಸಾಧ್ಯ. ಇದು “ಸಕ್ಯುìಲರ್ ಟೂರ್ ಗಾರ್ಡನ್’ (ವೃತ್ತ ಪ್ರವಾಸ ಉದ್ಯಾನ). ಇಂಥ ಉದ್ಯಾನಗಳು ಮೊದಲಿಗೆ ಮುರೋಮಾಚಿ ಕಾಲದಲ್ಲಿ (1336-1568) ಕಾಣಿಸಿಕೊಂಡಿವೆ. ಅನಂತರ ಎಡೋ ಕಾಲ (1600-1867) ಘಟ್ಟದಲ್ಲಿ ಅವರದ್ದೇ ಆದ ಅಭಿಜಾತ ಶೈಲಿಯಲ್ಲಿ ಉದ್ಯಾನಗಳನ್ನು ಯೋಜಿಸಲಾಗಿದೆ. ನಂತರ ಇದು ಎಲ್ಲ ದೈವ್ಯೋಗಳ ಅರ್ಥಾತ್ ಸಾಮಂತ ರಾಜರ ಉದ್ಯಾನಗಳ ವಿನ್ಯಾಸವೇ ಆಗಿಬಿಟ್ಟಿದೆ. ಶುಕ್ಕೇನ್‌ಗೆ ಮೊದಲು ಒದಗಿಸಿದ್ದ ಭೂ ವ್ಯಾಪ್ತಿ ಅತ್ಯಂತ ಕಿರಿದಾಗಿತ್ತು. ಅನಂತರ ಅದನ್ನು ವಿಸ್ತರಿಸಲಾಗಿದೆ. ದೂರದ ಬೆಟ್ಟ, ಕಣಿವೆ, ಸಮುದ್ರ ತೀರ- ಇವೆಲ್ಲ ಇಲ್ಲಿ ಋತುಗಳ ಜತೆಗೆ ಸಂವಾದ ನಡೆಸುತ್ತಾ ಸಾಗುತ್ತವೆ. ಹೀಗೆ ಇಲ್ಲೊಂದು ಋತು ಸಂವಾದ ಏರ್ಪಡುತ್ತದೆ. ಋತುಮಾನಕ್ಕೆ ಅನುಗುಣವಾಗಿ ಋತುಮುಖೀ ವರ್ಣಸಂವಾದ ನಡೆಯುತ್ತದೆ. ಹೀಗೆ ಉದ್ಯಾನ ತನ್ನ ಹೆಸರಿಗೆ ಅನ್ವರ್ಥಕವಾಗಿ ನಿಂತಿದೆ.
ಇಲ್ಲಿನ ಸೇತುವೆಗಳನ್ನು “ಕೊಕೊ ಕೊ’ ಎಂದು ಕರೆಯುತ್ತಾರೆ. ಅಂದರೆ, “ಬಳುಕುವ ಕಾಮನ ಬಿಲ್ಲಿನ ಸೇತುವೆ’ ಎಂದರ್ಥ. ಮೊದಲಿಗೆ ಬೇರೆ ರೀತಿ ಇದ್ದ ಸೇತುವೆಯನ್ನು ಈಗಿನ ರೂಪಕ್ಕೆ ತಂದವರು ಎಂದರೆ ಏಳನೆಯ ದೊರೆ ಕಿಗಾಕಿರ. ಈತ ಕೊಟೋದಿಂದ ಪ್ರಸಿದ್ಧ ಕಟ್ಟಡ ನಿರ್ಮಾಣ ತಜ್ಞನನ್ನು ಕರೆಸಿ, ಇಲ್ಲಿನ ಸೇತುವೆಗಳನ್ನು ಮಾಡಿಸಿದ. ಉದ್ಯಾನದ ಮಧ್ಯಭಾಗದಲ್ಲಿ ಶೆಫುಖಾನ್ ಇದೆ. ಇದನ್ನು ಸುಕಿಯಾ ಝುಕುರಿ ಅಥವಾ ಚಹಾ ಕಾಟೇಜಿನ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಚಾವಣಿ ವಿಶಿಷ್ಟ ವಿನ್ಯಾಸದಿಂದ ಕೂಡಿಕೊಂಡಿದೆ. ಶೋಯಿನ್ ಝುಕುರಿ ಅಥವಾ ಬರವಣಿಗೆ ಚೇಂಬರ್ ಶೈಲಿಯ ಮಾದರಿಯೂ ಇಲ್ಲಿದೆ. ಲೈರ್ ಮಾದರಿಯ ಕಟೋಮಾಕೋ ಕಿಟಕಿ ಕೂಡ ಇಲ್ಲಿದೆ. ಇದರ ಮೂಲಕ ಕೊಕೊ ಕೊನ ವಿಶಿಷ್ಟ ದೃಶ್ಯಾವಳಿಗಳು ಕಾಣಿಸುತ್ತವೆ. ಅಸಾನೋ ವಂಶದ ಅನೇಕ ದೊರೆಗಳ ಆಪ್ತಕೇಂದ್ರವಾಗಿತ್ತು ಈ ಉದ್ಯಾನ. 1945ರಲ್ಲಿ ಅಣುಬಾಂಬಿನ ಆಘಾತಕ್ಕೆ ಛಿದ್ರಗೊಂಡ ಉದ್ಯಾನವನ್ನು ಅನಂತರ ಪುನರುತ್ಥಾನಗೊಳಿಸಲಾಗಿದೆ.
ಅಣುಬಾಂಬಿನ ಆಘಾತಕ್ಕೆ ಮುರುಟಿ ಹೋಗುವ ಮುನ್ನವೇ ಎಲ್ಲವನ್ನೂ ಅಣುರೂಪಿಯಾಗಿ ಕಾಣುವ ಗುಣ ಹಿರೋಶಿಮಾಕ್ಕೆ ನೂರಾರು ವರ್ಷಗಳ ಹಿಂದೆಯೇ ಇದ್ದಂತೆ ಕಾಣಿಸುತ್ತದೆ. ಅದು ಕಣಗಳಲ್ಲಿ ಶಾಂತಿಯನ್ನು ಹುಡುಕುವ ಗುಣವೇ ಹೊರತು, ಕಣಗಳಲ್ಲಿ ಅಶಾಂತಿಯನ್ನು ಸ್ಫೋಟಿಸುವ ಗುಣವಲ್ಲ. ಹೀಗಾಗಿಯೇ ಬಿದ್ದ ಬಾಂಬಿನ ನೆನಪನ್ನೇ ಮುಗಿಲಿಗೆ ಒದ್ದು “ಶುಕ್ಕೇನ್’ ಎದ್ದು ನಿಂತಿದೆ. ಮೈ-ಮನಗಳ ಕಣ ಕಣದಲ್ಲೂ ಲವಲವಿಕೆ ತುಂಬುತ್ತಿದೆ.
ಬಾಲಕೃಷ್ಣ ಹೊಸಂಗಡಿ