Advertisement

Congress ಸರಕಾರ ಸ್ವಲ್ಪ ಶೇಕ್‌ ಆಗಿರುವುದು ನಿಜ: ಡಾ| ಜಿ. ಪರಮೇಶ್ವರ್‌

12:40 AM Aug 19, 2024 | Team Udayavani |

ಬೆಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧವೇ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರಿಂದ ಸರಕಾರ ಸ್ವಲ್ಪಮಟ್ಟಿಗೆ “ಶೇಕ್‌’ ಆಗಿರುವುದು ನಿಜ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಒಪ್ಪಿಕೊಂಡರು.

Advertisement

ಸದಾಶಿವನಗರ ನಿವಾಸದ ಬಳಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರ ಸ್ವಲ್ಪಮಟ್ಟಿಗೆ ಶೇಕ್‌ ಆಗಿದೆ. ಇಲ್ಲ ಅಂತ ಹೇಳಿದರೆ ನಾನು ಸುಳ್ಳು ಹೇಳಿದಂತಾಗುತ್ತದೆ. ಇದನ್ನು ನಾವು ಸರಿಪಡಿಸಿಕೊಂಡು ಆಡಳಿತವನ್ನು ಮುಂದುವರಿಸುತ್ತೇವೆ. ನಾವ್ಯಾರೂ ಬಿಜೆಪಿ ಹುನ್ನಾರಕ್ಕೆ ಬಲಿಯಾಗುವುದು ಬೇಡ, ಆಡಳಿತ ಮಾಡಿಕೊಂಡು ಹೋಗೋಣ ಅಂತ ಸಂಪುಟ ಸಭೆಯಲ್ಲೂ ತೀರ್ಮಾನಿಸಿದ್ದೇವೆ. ಕಾನೂನು ಸಮರ ಮುಂದುವರಿಸಿಕೊಂಡೇ ಆಡಳಿತ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರೂ ಹೋರಾಟ ಮಾಡಲಿ, ಅದು ಅವರ ಹಕ್ಕು. ನಾವೂ ಹೋರಾಟ ಮಾಡುತ್ತೇವೆ, ಇದು ನಮ್ಮ ಹಕ್ಕು. ಸಿಎಂ ರಾಜೀನಾಮೆ ಕೊಡಲ್ಲ. ನಮ್ಮ ಹೋರಾಟವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಅಂತಾ ಹೈಕಮಾಂಡ್‌ ಚರ್ಚೆ ಮಾಡಿ ತೀರ್ಮಾನಿಸಲಿದೆ. ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಕೇರಳ ಮುಖ್ಯಮಂತ್ರಿಗಳಿಗೂ ಇದೇ ರೀತಿ ಆಗಿದೆ. ಸಿದ್ದರಾಮಯ್ಯ ಅವರ ಮೂಲಕ ಸರಕಾರವನ್ನು ಅಸ್ಥಿರಗೊಳಿಸುವ ಉದ್ದೇಶ ಇದಾಗಿದೆ. ಬಿಜೆಪಿಯು ಹೇಗಾದರೂ ಮಾಡಿ ಈ ಸರಕಾರವನ್ನು ಬೀಳಿಸುವ ಯೋಜನೆ ಹಾಕಿಕೊಂಡಿದೆ ಎಂದು ಆರೋಪಿಸಿದರು.

ಇಡೀ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯಪಾಲರ ಕಚೇರಿಯನ್ನು ಸಹ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾವು ಕಾನೂನು ಹಾಗೂ ರಾಜಕೀಯ ಹೋರಾಟ ಮಾಡಲು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಅವರಿಗೆ ರಾಜಕೀಯ ಉತ್ತರ ಕೊಡಲು ರಾಜಕೀಯ ಹೋರಾಟವೇ ಮಾಡಬೇಕು. ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷರು ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದಾರೆ. ಸೋಮವಾರ ರಾಜ್ಯದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಸಚಿವ ಸಂಪುಟದ ತೀರ್ಮಾನವನ್ನೂ ತಿರಸ್ಕರಿಸಿದ್ದಾರೆ

Advertisement

ಪ್ರಾಸಿಕ್ಯೂಷನ್‌ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯ ಸೆಕ್ಷನ್‌ 17ಎ ಅಡಿ ಯಾರ್ಯಾರಿಗೆ ಹೇಗೆ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಕೇಂದ್ರವೇ ವ್ಯಾಖ್ಯಾನಿಸಿದೆ. ಸಿಎಂಗೆ ಯಾರು ಮತ್ತು ಸಚಿವರಿಗೆ ಯಾರು ಅನುಮತಿ ಕೇಳಬೇಕು ಅಂತ ಕೇಂದ್ರದ ಮಾರ್ಗಸೂಚಿ ಇದೆ. ಸಿಎಂಗೆ ಡಿಜಿಪಿ ತನಿಖೆಗೆ ಅನುಮತಿ ಕೇಳಬೇಕು ಅಂತ ಇದೆ. ರಾಜ್ಯಪಾಲರು ಇದ್ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಇನ್ನೊಂದು ಕಡೆ, ದಾಖಲೆ ಇಲ್ಲದೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿ¨ªಾರೆ. ನಮ್ಮ ಸಚಿವ ಸಂಪುಟದ ತೀರ್ಮಾನವನ್ನೂ ತಿರಸ್ಕರಿಸಿದ್ದಾರೆ ಎಂದು ಪರಮೇಶ್ವರ್‌ ಹೇಳಿದರು.

ಲೋಕಾಯುಕ್ತಕ್ಕೇ ತನಿಖೆ ಸಾಧ್ಯತೆ
ಮುಡಾ ತನಿಖೆಯನ್ನು ನ್ಯಾಯಾಲಯವು ಯಾರಿಗೆ ನೀಡುತ್ತದೆಯೋ ಗೊತ್ತಿಲ್ಲ. ಈ ಸಂದರ್ಭದಲ್ಲಿ ಅವರಿಗೆ ಇರುವ ಆಯ್ಕೆ ಲೋಕಾಯುಕ್ತ ಮಾತ್ರ. ಲೋಕಾಯುಕ್ತದಲ್ಲೇ ಅರ್ಜಿದಾರರು ದೂರು ಕೊಟ್ಟಿರುವುದರಿಂದ ತನಿಖೆಯನ್ನೂ ಲೋಕಾಯುಕ್ತಕ್ಕೇ ಕೊಡುವ ಸಾಧ್ಯತೆ ಇದೆ ಎಂದು ಪರಮೇಶ್ವರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next