ಮುದ್ದೇಬಿಹಾಳ: ಗಂಗೂರ ಗ್ರಾಮದ ವರಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ತಹಶೀಲ್ದಾರ್ ಬಿ.ಎಸ್. ಕಡಕಭಾವಿ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ಗ್ರಾಮಸ್ಥರ ಪರವಾಗಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ. ಮುದೂರ ಮಾತನಾಡಿ, ಸದಾ ಪ್ರವಾಹ ಭೀತಿಯಿಂದ ತತ್ತರಿಸುತ್ತಿರುವ ಗಂಗೂರ ಗ್ರಾಮವನ್ನು ಸಂಪೂರ್ಣ ಮುಳುಗಡೆ ಗ್ರಾಮ ಎಂದು ಘೋಷಿಸುವಂತೆ ಒತ್ತಾಯಿಸಿದರು.
ಗಂಗೂರ ಮತ್ತು ಸುತ್ತಲಿನ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಒಟ್ಟು 126 ಅರ್ಜಿಗಳನ್ನು ಸ್ವೀಕರಿಸಲಾಯಿತು. ಕಂದಾಯ ಇಲಾಖೆಯ 8 ಅರ್ಜಿಗಳನ್ನು ಮಂಜೂರಾತಿ ಮಾಡಿ ತಹಶೀಲ್ದಾರ್ ಆದೇಶ ಪತ್ರ ನೀಡಿದರು.
ಆಹಾರ ಇಲಾಖೆಯ 11 ಅರ್ಜಿಗಳಲ್ಲಿ 9 ಅರ್ಜಿಗಳನ್ನು ಮಂಜೂರು ಮಾಡಲಾಯಿತು. ಭೂ ಮಾಪನ ಮತ್ತು ಭೂ ದಾಖಲೆ ಇಲಾಖೆಗೆ 7, ತಾಲೂಕು ಪಂಚಾಯತಿಗೆ 37, ಕೃಷಿ ಇಲಾಖೆಗೆ 40, ಶಿಕ್ಷಣ ಇಲಾಖೆಗೆ 3, ಸಮಾಜ ಕಲ್ಯಾಣ ಇಲಾಖೆಗೆ 4, ಸಿಡಿಪಿಒ ಇಲಾಖೆ ಮತ್ತು ಸಾರಿಗೆ ಸಂಸ್ಥೆಗೆ ತಲಾ 1, ಪಿಡಬ್ಲ್ಯುಡಿಗೆ 4, ತೋಟಗಾರಿಕೆ ಇಲಾಖೆಗೆ 10 ಅರ್ಜಿಗಳು ಪ್ರತ್ಯೇಕವಾಗಿ ಸಲ್ಲಿಕೆಯಾದವು. ಒಟ್ಟಾರೆ 17 ಅರ್ಜಿಗಳಿಗೆ ಸ್ಥಳದಲ್ಲೇ ಮಂಜೂರಾತಿ ನೀಡಿ 2 ಅರ್ಜಿಗಳನ್ನು ತಿರಸ್ಕರಿಸಲಾಯಿತು. ಇನ್ನುಳಿದ ಅರ್ಜಿಗಳಿಗೆ ಆಯಾ ಇಲಾಖೆ ಅಧಿಕಾರಿಗಳು ಶೀಘ್ರ ಸ್ಪಂದಿಸಿ ವಿಲೇ ಮಾಡುವಂತೆ ತಹಶೀಲ್ದಾರ್ ಸೂಚಿಸಿದರು.
ಬಹಿರಂಗ ಸಭೆ ನಂತರ ತಹಶೀಲ್ದಾರ್ ಬಿ.ಎಸ್. ಕಡಕಭಾವಿ, ತಾಪಂ ಇಒ ಶಿವಾನಂದ ಹೊಕ್ರಾಣಿ, ಸಿಡಿಪಿಒ ರಾಮದುರ್ಗ ಅವರು ಸ್ಥಳೀಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯವೈಖರಿ, ಮಕ್ಕಳಿಗೆ ಕೊಡುತ್ತಿರುವ ಮೊಟ್ಟೆಗಳು ಮುಂತಾದವುಗಳನ್ನು ಪರಿಶೀಲಿಸಿದರು. ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರತಿನಿ ಧಿಗಳು, ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಪ್ರವಾಹ ಬಂದಾಗಲೊಮ್ಮೆ ಗಂಗೂರ ಜನರು ಆತಂಕದಲ್ಲಿ ಬದುಕಬೇಕಿದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ ಈಗಾಗಲೇ 44 ಮನೆ ಮಂಜೂರಿಸಿ ತೀವ್ರ ಬಾಧಿತ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಆದರೆ ಹಳೆ ಊರಿನ ಜನರು ಪ್ರವಾಹದ ಸಂದರ್ಭ ಕಾಲರಾ ಸಹಿತ ಸಾಂಕ್ರಾಮಿಕ ರೋಗಗಳಿಗೆ ಈಗಲೂ ತುತ್ತಾಗುತ್ತಿದ್ದಾರೆ. ಅಧಿಕಾರಿಗಳು ಕೂಡಲೆ ಮುಳುಗಡೆ ಘೋಷಣೆಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
-ಡಿ.ಬಿ. ಮುದೂರ, ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ