ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೂರು ಪಂದ್ಯಗಳ ಟಿ 20 ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಶುಭಮನ್ ಗಿಲ್ ಅವರ ಸ್ಪೋಟಕ ಶತಕದ ನೆರವಿನಿಂದ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ.
ಗಿಲ್ ಅವರ ಅಜೇಯ 125 ರನ್, ಹಾರ್ದಿಕ್ ಪಾಂಡ್ಯ ಅವರ ತ್ವರಿತ 30 ರನ್, ರಾಹುಲ್ ತ್ರಿಪಾಠಿ 44 ರನ್ ಮತ್ತು ಸೂರ್ಯ ಕುಮಾರ್ ಯಾದವ್ 24 ರನ್ ನೆರವಿದಿಂದ ಭಾರತವು ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 234ರನ್ ಗಳಿಸಿತು. ಗಿಲ್ 63 ಎಸೆತಗಳಲ್ಲಿ 125 ರನ್ ಗಳಿಸಿ ಭಾರತದ ಪರ ಗರಿಷ್ಠ ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಮೈಕಲ್ ಬ್ರೇಸ್‌ವೆಲ್, ಬ್ಲೇರ್ ಟಿಕ್ನರ್ ಮತ್ತು ಇಶ್ ಸೋಧಿ ಕ್ರಮವಾಗಿ ತಲಾ ಒಂದು ವಿಕೆಟ್ ಪಡೆದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಭಾರತ ಆಟದ ಎರಡನೇ ಓವರ್‌ನಲ್ಲಿ ತಮ್ಮ ಸ್ಟಾರ್ ಓಪನರ್ ಇಶಾನ್ ಕಿಶನ್ ಅವರ ವಿಕೆಟ್ ಕಳೆದುಕೊಂಡಿದ್ದರಿಂದ ಕೆಟ್ಟ ಆರಂಭವನ್ನು ಪಡೆಯಿತು. ಶುಭಮನ್ ಗಿಲ್ ಎರಡನೇ ಓವರ್ ಅನ್ನು ಬೌಂಡರಿಯೊಂದಿಗೆ ಮುಗಿಸಿ ಮತ್ತೆ ಹಿಂತಿರುಗಿ ನೋಡಲಿಲ್ಲ 200 ಸ್ಟ್ರೈಕ್ ರೇಟ್ ಹೊಂದಿದ್ದ ಅವರು7 ಭರ್ಜರಿ ಸಿಕ್ಸರ್ ಮತ್ತು 12 ಬೌಂಡರಿಗಳನ್ನು ಬಾರಿಸಿದ್ದರು.
18ನೇ ಓವರ್‌ನಲ್ಲಿ ಭಾರತ 200 ರನ್ ಗಡಿ ದಾಟಿತು. ಗಿಲ್ ನಂತರ ಇನಿಂಗ್ಸ್‌ನ 19 ನೇ ಓವರ್‌ನಲ್ಲಿ ಲಿಸ್ಟರ್‌ನಿಂದ 17 ರನ್ ಗಳಿಸಿದರು. ಡೆರಿಲ್ ಮಿಚೆಲ್ ಎಸೆತದಲ್ಲಿ ಔಟಾದ ಕಾರಣ ಕ್ರೀಸ್‌ನಲ್ಲಿದ್ದ ಪಾಂಡ್ಯ ಅವರ ಆಟ ಕೊನೆಗೊಂಡಿತು. ಪಾಂಡ್ಯ 17 ಎಸೆತಗಳಲ್ಲಿ 30 ರನ್ ಗಳಿಸಿದ ನಂತರ ಪೆವಿಲಿಯನ್‌ಗೆ ಮರಳಿದರು. ಭಾರತ ಕೊನೆಯ ಓವರ್‌ನಲ್ಲಿ 6 ರನ್ ಗಳಿಸಲಷ್ಟೇ ಶಕ್ತವಾಯಿತು ಮತ್ತು 20 ಓವರ್‌ಗಳಲ್ಲಿ 234/4 ಸವಾಲಿನ ಮೊತ್ತವನ್ನು ದಾಖಲಿಸಿತು.
235 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಭಾರತದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ 12.1 ಓವರ್ ಗಳಲ್ಲಿ ಕೇವಲ 66 ರನ್ ಗಳಿಗೆ ಆಲೌಟಾಯಿತು. ಡೇರಿಲ್ ಮಿಚೆಲ್ 35 ಮತ್ತು ನಾಯಕ ಸ್ಯಾಂಟ್ನರ್ 13 ರನ್ ಹೊರತು ಪಡಿಸಿ ಉಳಿದ ಯಾವ ಆಟಗಾರನೂ ಒಂದಂಕಿ ದಾಟಲಿಲ್ಲ. ಪಾಂಡ್ಯ ಪಡೆ 168 ರನ್‌ಗಳ ಭಾರಿ ಜಯ ಸಾಧಿಸಿತು.
ಭಾರತದ ಪರ ಬೌಲಿಂಗ್ ನಲ್ಲಿ ಹಾರ್ದಿಕ್ ಪಾಂಡ್ಯ 4 ವಿಕೆಟ್ ಕಬಳಿಸಿದರೆ , ಅರ್ಷದೀಪ್ ಸಿಂಗ್, ಶಿವಂ ಮಾವಿ ಮತ್ತು ಉಮ್ರಾನ್ ಮಲಿಕ್ ತಲಾ 2 ವಿಕೆಟ್ ಪಡೆದರು.