ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಅವರು ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಅಜೇಯ ಆಟವಾಡಿದ ಅವರು 48 ಎಸೆತಗಳಲ್ಲಿ 89 ರನ್ ಪೇರಿಸಿದರು. ಪಂದ್ಯದಲ್ಲಿ ಗುಜರಾತ್ ತಂಡವು ಸೋಲನುಭವಿಸಿದರೂ, ನಾಯಕನ ಆಟಕ್ಕೆ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.
ಜೂನ್ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕೂಟಕ್ಕೆ ಭಾರತ ತಂಡದಲ್ಲಿ ಶುಭಮನ್ ಗಿಲ್ ಅವರು ಸ್ಥಾನ ಪಡೆಯುತ್ತಾರೆಯೇ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಮೊದಲ ಮೂರು ಕ್ರಮಾಂಕದಲ್ಲಿ ಭಾರಿ ಸ್ಪರ್ಧೆ ಇರುವ ಕಾರಣದಿಂದ ಗಿಲ್ ಗೆ ಅವಕಾಶ ಸಿಕ್ಕುವುದು ಅನುಮಾನ ಎನ್ನಲಾಗಿದೆ.
ನ್ಯೂಜಿಲ್ಯಾಂಡ್ ನ ಮಾಜಿ ಆಟಗಾರ ಸೈಮನ್ ಡುಲ್ ಪ್ರಕಾರ, ಶುಭಮನ್ ಗಿಲ್ ಅವರು 15 ಜನರ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ. ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಇರುವ ಕಾರಣ ಟಿ20 ವಿಶ್ವಕಪ್ ಗಾಗಿ ಗಿಲ್ ಕೆರಿಬಿಯನ್ ವಿಮಾನ ಹತ್ತುವುದು ಕಷ್ಟ ಎನ್ನುತ್ತಾರೆ ಸೈಮನ್.
ಪಂಜಾಬ್ ಕಿಂಗ್ಸ್ ವಿರುದ್ಧದ ಆಟದ ಬಳಿಕ ವಿಶ್ವಕಪ್ ತಂಡದಲ್ಲಿ ಗಿಲ್ ಸ್ಥಾನ ಭದ್ರವಾಯಿತೆ ಎಂಬ ಕ್ರಿಕ್ ಬಜ್ ಪ್ರಶ್ನೆಗೆ ಉತ್ತರಿಸಿದ ಸೈಮನ್ ಡುಲ್, “ಇಲ್ಲ, ಸದ್ಯಕ್ಕಂತೂ ಇಲ್ಲ” ಎಂದು ಹೇಳಿದರು.
“ವಿಶ್ವಕಪ್ ಗೆ 15 ಜನರ ತಂಡವನ್ನು ಆರಿಸುವಾಗ, ನೀವು ಕೇವಲ ಒಂದು ಹೆಚ್ಚುವರಿ ಟಾಪ್-ಆರ್ಡರ್ ಬ್ಯಾಟರನ್ನು ಮಾತ್ರ ಸೇರಿಸುತ್ತೀರಿ. ನಿಮ್ಮಲ್ಲಿ ವಿಕೆಟ್ ಕೀಪಿಂಗ್ ಮಾಡುವ ಕೆ.ಎಲ್ ರಾಹುಲ್ ಅವರಂತಹ ಯಾರಾದರೂ ಇದ್ದಲ್ಲಿ ನೀವು ಬಹುಶಃ ಒಬ್ಬ ಅಗ್ರ ಕ್ರಮಾಂಕದ ಬದಲಿ ಬ್ಯಾಟರ್ ಗೆ ಮಾತ್ರ ಸ್ಥಳಾವಕಾಶವನ್ನು ಹೊಂದಿರುತ್ತೀರಿ. ಅದು ನಿಜವಾದ ಬೋನಸ್. ಆ ಅಗ್ರ ಕ್ರಮಾಂಕ ಬದಲಿ ಬ್ಯಾಟರ್, ಅವರು (ಕೆ.ಎಲ್.ರಾಹುಲ್) ಕೀಪಿಂಗ್ ಮಾಡುತ್ತಾರೆ, ಆದರೆ ಗಿಲ್ ಕೀಪಿಂಗ್ ಮಾಡುವುದಿಲ್ಲ. ಒಂದು ವೇಳೆ ಜೈಸ್ವಾಲ್, ರೋಹಿತ್ ಮತ್ತು ವಿರಾಟ್ ಬದಲಿಗೆ ಗಿಲ್ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದಿದ್ದರೆ, ಅವರು ಬಹುಶಃ ವಿಶ್ವಕಪ್ ಗೆ ಆಯ್ಕೆಯಾಗುವುದಿಲ್ಲ” ಎಂದು ಅವರು ವಿವರಿಸಿದರು.
2024ರ ಟಿ20 ವಿಶ್ವಕಪ್ ಜೂನ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ. ಮೇ ಆರಂಭದೊಳಗೆ ಭಾಗವಹಿಸುವ ಎಲ್ಲಾ ದೇಶಗಳು ತಮ್ಮ 15 ಜನರ ತಂಡವನ್ನು ಪ್ರಕಟಿಸಬೇಕಿದೆ.