ಪ್ರತಿಭಾವಂತ ಕ್ರಿಕೆಟಿಗ ಶುಬ್ಮನ್ ಗಿಲ್ ರಣಜಿ ಕ್ರಿಕೆಟ್ ಕೂಟದ ವೇಳೆ ವಿವಾದಕ್ಕೊಳಗಾಗಿ ಸುದ್ದಿಯಾಗಿದ್ದಾರೆ. ಉದಯೋನ್ಮುಖ ಕ್ರಿಕೆಟಿಗ ಗಿಲ್ ಔಟ್ ನೀಡಿದ್ದಕ್ಕೆ 10 ನಿಮಿಷ ಅಂಪೈರ್ ಜತೆ ಚರ್ಚೆ ನಡೆಸಿದ್ದಾರೆ. ಪಂಜಾಬ್ ಹಾಗೂ ದಿಲ್ಲಿ ನಡುವಿನ ಪಂದ್ಯದ ವೇಳೆ ಘಟನೆ ನಡೆದಿದೆ. ಕೆಲವರು ಇದನ್ನು ಅಂಪೈರ್ ಜತೆ ಗಿಲ್ ಅಶಿಸ್ತು ಪ್ರದರ್ಶಿಸಿದ್ದಾರೆ ಎಂದು ವಾದಿಸಿದ್ದಾರೆ. ಮತ್ತೆ ಕೆಲವರು ಶುಬ್ಮನ್ ಗಿಲ್ ಅಂಪೈರ್ ಜತೆ ಚರ್ಚೆ ಮಾತ್ರ ನಡೆಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಒಟ್ಟಿನಲ್ಲಿ ಗಿಲ್ ಕ್ರೀಡಾಂಗಣದಲ್ಲಿ ನಡೆದುಕೊಂಡಿರುವ ರೀತಿ ಎಲ್ಲರಿಗೂ ಅಚ್ಚರಿಗೆ ಕಾರಣವಾಗಿದೆ. ಗಿಲ್ ಅಂಪೈರ್ ಜತೆ ವಾಗ್ವಾದ ನಡೆಸಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಅವರು ಅಂಪೈರ್ ಮನವೊಲಿಸಲು ಪ್ರಯತ್ನಿಸಿರಬಹುದು. ಕೊನೆಗೆ ತಪ್ಪು ಎಂದು ಅರ್ಥವಾದಾಗ ಅಂಪೈರ್ ತನ್ನ ನಿರ್ಧಾರವನ್ನು ಬದಲಿಸಿರಬಹುದು. ಒಂದು ವೇಳೆ ಗಿಲ್ ಕೆಟ್ಟದಾಗಿ ನಡೆದುಕೊಂಡಿದ್ದರೆ ಸ್ವತಃ ಅಂಪೈರ್ ಸಿಟ್ಟಿನಿಂದ ಗಿಲ್‌ರನ್ನು ಕ್ರೀಡಾಂಗಣದಿಂದ ಹೊರಕ್ಕೆ ಕಳಿಸುವ ಅವಕಾಶ ಇತ್ತು. ಅಲ್ಲದೆ ರೆಫ್ರಿಗೂ ದೂರು ಹೋಗುವ ಸಾಧ್ಯತೆ ಇತ್ತು. ಆದರೆ ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಹೀಗಿದ್ದರೂ ಶುಬ್ಮನ್ ಗಿಲ್ ವಿವಾದಕ್ಕೊಳಗಾಗಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.