Advertisement

ಮಲಯಾಳಂನಲ್ಲಿ “ಶುಭಾ’ರಂಭ

10:14 AM Feb 07, 2020 | Lakshmi GovindaRaj |

ಕನ್ನಡದ ನಟಿ ಶುಭಪೂಂಜಾ ತೆಲುಗು, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ಗೊತ್ತೇ ಇದೆ. ಈಗ ಇದೇ ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಹೌದು, ಮಲಯಾಳಂ ಹಾಗು ಕನ್ನಡ ಭಾಷೆಯಲ್ಲಿ ತಯಾರಾಗುತ್ತಿರುವ “ತ್ರಿದೇವಿ’ ಎಂಬ ಚಿತ್ರದಲ್ಲಿ ಶುಭಪೂಂಜಾ ನಟಿಸುತ್ತಿದ್ದಾರೆ. ಅಶ್ವಿ‌ನ್‌ ಮ್ಯಾಥ್ಯೂ ಆ ಚಿತ್ರವನ್ನು ನಿರ್ದೇಶಿಸುವುದರ ಜೊತೆಯಲ್ಲಿ ನಿರ್ಮಾಣವನ್ನೂ ಮಾಡುತ್ತಿದ್ದಾರೆ.

Advertisement

ಅದೊಂದು ಥ್ರಿಲ್ಲರ್‌ ಕಮ್‌ ಆ್ಯಕ್ಷನ್‌ ಚಿತ್ರವಾಗಿದ್ದು, ಚಿತ್ರದಲ್ಲಿ ಶುಭಪೂಂಜಾ ಅವರೊಂದಿಗೆ ಇಬ್ಬರು ನಾಯಕಿಯರು ಕಾಣಿಸಿಕೊಂಡಿದ್ದಾರೆ. ಸಂಧ್ಯಾ ಹಾಗು ಜ್ಯೋತ್ಸ್ನಾರಾವ್‌ “ತ್ರಿದೇವಿ’ ಚಿತ್ರದಲ್ಲಿ ನಟಿಸುತ್ತಿದ್ದು, ಇದೊಂದು ಹೊಸಬಗೆಯ ಥ್ರಿಲ್ಲರ್‌ ಅಂಶಗಳನ್ನು ಹೊಂದಿದೆ. ಈ ಚಿತ್ರಕ್ಕಾಗಿಯೇ ಶುಭಪೂಂಜಾ, ಸಂಧ್ಯಾ ಹಾಗು ಜ್ಯೋತ್ಸ್ನಾರಾವ್‌ ಅವರು ಹನ್ನೆರೆಡು ದಿನಗಳ ಕಾಲ ಕಲರಿಪಯಟು ಕಲೆಯ ತರಬೇತಿ ಪಡೆದುಕೊಂಡಿದ್ದಾರೆ.

ಮೋತಿ ಎನ್ನುವ ಮಾಸ್ಟರ್‌ ಅವರಿಗೆ ಕಲರಿಪಯಟು ಕಲೆ ಹೇಳಿಕೊಟ್ಟಿದ್ದಾರೆ. ಚಿತ್ರದಲ್ಲಿ ಸತೀಶ್‌ ಖಳನಟರಾಗಿ ಕಾಣಿಸಿಕೊಂಡರೆ, ಜಯದೇವ್‌, ಸಂಪತ್‌ ಇತರರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಅಶ್ವಿ‌ನ್‌ ಮ್ಯಾಥು ಅವರು ಮೂಲತಃ ಕೇರಳದವರಾಗಿದ್ದರೂ, ಬೆಂಗಳೂರಿನಲ್ಲೇ ನೆಲೆಸಿರುವುದರಿಂದ ಅವರು ಕನ್ನಡ ಹಾಗು ಮಲಯಾಳಂ ಭಾಷೆಯಲ್ಲೇ “ತ್ರಿದೇವಿ’ ಚಿತ್ರ ಕೈಗೆತ್ತಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಶುಭಾಪೂಂಜಾ ಅವರು ಸಿನಿಮಾದೊಳಗಿನ ಸಿನಿಮಾ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಂಧ್ಯಾ ಹಾಗು ಜ್ಯೋತ್ಸ್ನಾ ಕೂಡ ಸಿನಿಮಾದೊಳಗಿನ ಸಿನಿಮಾ ಸಹ ನಿರ್ದೇಶಕರಾಗಿ, ಬರಹಗಾರರಾಗಿ ನಟಿಸಿದ್ದಾರೆ. ಈ ಪೈಕಿ ಸಂಧ್ಯಾ ಹಾಗು ಜ್ಯೋತ್ಸ್ನಾ ಅವರಿಗೆ ಇದು ಮೊದಲ ಅನುಭವ. ಚಿತ್ರಕ್ಕೆ ಕುಂಜ್‌ ಛಾಯಾಗ್ರಹಣವಿದೆ. ಈಗಾಗಲೇ ಶೇ.70 ರಷ್ಟು ಚಿತ್ರೀಕರಣಗೊಂಡಿರುವ “ತ್ರಿದೇವಿ’ ಕೇರಳ ಹಾಗು ಕರ್ನಾಟಕದ ಹಲವು ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ.

ಇದೇ ಮೊದಲ ಸಲ ಮಲಯಾಳಂ ಚಿತ್ರದಲ್ಲಿ ನಟಿಸಿರುವ ಶುಭಪೂಂಜಾಗೆ ಸಹಜವಾಗಿಯೇ ಖುಷಿ ಇದೆ. ಮಲಯಾಳಂ ಭಾಷೆ ಅರ್ಥ ಮಾಡಿಕೊಳ್ಳುವ ಮೂಲಕ ಸಾಧ್ಯವಾದಷ್ಟು ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾಗಿ ಹೇಳುತ್ತಾರೆ. ಸದ್ಯಕ್ಕೆ ಅವರು ನಟಿಸಿರುವ “ನರಗುಂದ ಬಂಡಾಯ’ ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಫೆಬ್ರವರಿಯಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ನಡುವೆ “ರೈಮ್ಸ್‌’ ಎಂಬ ಚಿತ್ರದಲ್ಲೂ ಶುಭ ನಟಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next